ಕೇರಳ ಮಾಜಿ ಸಿಎಂ ಕರುಣಾಕರನ್ ಪುತ್ರಿ ಪದ್ಮಜಾ ಬಿಜೆಪಿ ಸೇರ್ಪಡೆ?

ಹೊಸದಿಗಂತ ಡಿಜಿಟಲ್ ಡೆಸ್ಕ್:
 
ಕೇರಳದ ಮಾಜಿ ಸಿಎಂ, ದಿವಂಗತ ಕೆ ಕರುಣಾಕರನ್ ಅವರ ಮಗಳು ಪದ್ಮಜಾ ವೇಣುಗೋಪಾಲ್ ಅವರು ಕಾಂಗ್ರೆಸ್‌ಗೆ ರಾಜೀನಾಮೆ ಸಲ್ಲಿಸಲಿದ್ದು, ಬಿಜೆಪಿ ಸೇರ್ಪಡೆಯಾಗುವ ಸಾಧ್ಯತೆ ಇದೆ .

ಈ ಕುರಿತು ರಾಜಕೀಯ ವಲಯದಲ್ಲಿ ಭಾರೀ ಚರ್ಚೆ ಆಗುತ್ತಿದ್ದು, ಪದ್ಮಜಾ ಅವರು ಪಕ್ಷ ಬದಲಾವಣೆ ಮಾಡುತ್ತಾರೆ ಎಂಬ ವರದಿಗಳನ್ನು ನಿರಾಕರಿಸುವ ಫೇಸ್‌ಬುಕ್ ಪೋಸ್ಟ್ ಅನ್ನು ಬುಧವಾರ ಅಳಿಸಿ ಹಾಕಿರುವುದು ಈ ಊಹಾಪೋಹಗಳಿಗೆ ಮತ್ತಷ್ಟು ಬಲ ಸಿಕ್ಕಿದೆ.

ಈ ಹಿಂದೆ ಬಿಜೆಪಿ ಸೇರ್ಪಡೆಯಾಗಲಿದ್ದಾರೆ ಎಂಬ ವರದಿಗಳನ್ನು ಒಂದು ಜೋಕ್ ಎಂಬುದಾಗಿ ಟೀಕಿಸಿದ್ದ ಪದ್ಮಜಾ, ಬಳಿಕ ಅದನ್ನು ಡಿಲೀಟ್ ಮಾಡಿದ್ದಾರೆ. ಹೀಗಾಗಿ ಅವರ ಪಕ್ಷ ಬದಲಾವಣೆ ಖಚಿತ ಎಂದು ಹೇಳಲಾಗುತ್ತಿದೆ.

ಪದ್ಮಜಾ ಅವರ ನಿರ್ಧಾರ ಪಕ್ಷಕ್ಕೆ ಎಸಗುವ ದ್ರೋಹ ಎಂದು ಅವರ ಸಹೋದರ ಹಾಗೂ ಕಾಂಗ್ರೆಸ್ ಸಂಸದ ಕೆ ಮುರಳೀಧರನ್ ಗುರುವಾರ ಕಿಡಿಕಾರಿದ್ದಾರೆ. ಪದ್ಮಜಾ ಅವರ ಸೇರ್ಪಡೆಯಿಂದ ಬಿಜೆಪಿಗೆ ಗುಲಗಂಜಿಯಷ್ಟೂ ಲಾಭ ಸಿಗುವುದಿಲ್ಲ ಎಂದು ಹೇಳಿದ್ದಾರೆ.

ತಮ್ಮ ತಂದೆ ಕರುಣಾಕರನ್ ಅವರು ಎಂದಿಗೂ ಕೋಮುವಾದದ ಜತೆ ರಾಜಿಯಾಗಿರಲಿಲ್ಲ. ಜಾತ್ಯತೀಯ ಮನಸ್ಥಿತಿ ಹೊಂದಿರುವ ತಮ್ಮ ಕುಟುಂಬದ ಸದಸ್ಯರೊಬ್ಬರು ಬಿಜೆಪಿ ಸೇರುವುದು ದುಃಖದ ಸಂಗತಿ. ಪದ್ಮಜಾ ಅವರನ್ನು ಸೇರಿಸಿಕೊಳ್ಳುವುದರಿಂದ ಬಿಜೆಪಿಗೆ ಕೊಂಚ ಕೂಡ ಪ್ರಯೋಜನವಾಗುವುದಿಲ್ಲ. ಬಿಜೆಪಿ ಗೆದ್ದೇ ಗೆಲ್ಲುತ್ತೇವೆ ಎಂಬ ವಿಶ್ವಾಸ ಹೊಂದಿರುವ ಸೀಟುಗಳು ಸೇರಿದಂತೆ, ಎಲ್ಲಾ ಕಡೆಯೂ ನಾವು ಬಿಜೆಪಿಯನ್ನು ಮೂರನೇ ಸ್ಥಾನಕ್ಕೆ ತಳ್ಳುತ್ತೇವೆ. ಈ ದ್ರೋಹಕ್ಕೆ ಇವಿಎಂಗಳ ಮೂಲಕ ಉತ್ತರ ದೊರಕಲಿದೆ ಎಂದು ಕಾಂಗ್ರೆಸ್ ಸಂಸದ ತಿಳಿಸಿದ್ದಾರೆ.

ಇತ್ತ ತಮ್ಮನ್ನು ಮೂಲೆಗುಂಪು ಮಾಡುತ್ತಿರುವ ಪಕ್ಷದ ನಾಯಕತ್ವದ ವಿರುದ್ಧ ಪದ್ಮಜಾ ಅಸಮಾಧಾನಗೊಂಡಿದ್ದಾರೆ ಎಂದು ವರದಿಯಾಗಿದೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಅವರು ತ್ರಿಶ್ಶೂರ್ ಕ್ಷೇತ್ರದಿಂದ ಸ್ಪರ್ಧಿಸಿ, ಎಡಪಕ್ಷಗಳ ವಿರುದ್ಧ ಸೋಲು ಅನುಭವಿಸಿದ್ದರು.

ಪದ್ಮಜಾ ಅವರು ಚುನಾವಣಾ ರಾಜಕಾರಣದಲ್ಲಿ ಯಶಸ್ಸು ಗಳಿಸದೆ ಇದ್ದರೂ, ಮಾಜಿ ಮುಖ್ಯಮಂತ್ರಿಯ ಮಗಳಾಗಿ ತಮ್ಮ ವಲಯದಲ್ಲಿ ಬೆಂಬಲ ಹೊಂದಿದ್ದಾರೆ. ಹೀಗಾಗಿ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ಇದರ ಲಾಭ ಸಿಗುವ ನಿರೀಕ್ಷೆ ಇದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!