ಮಾಜಿ ಸಚಿವ ಮನೋಹರ ತಹಶೀಲ್ದಾರ್ ಬಿಜೆಪಿ ಸೇರ್ಪಡೆ

ಹೊಸದಿಗಂತ ವರದಿ, ಹಾನಗಲ್ಲ :

ಹಿರಿಯ ರಾಜಕಾರಣಿ, ಮಾಜಿ ಸಚಿವ ಮನೋಹರ ತಹಶೀಲ್ದಾರ ಬಿಜೆಪಿ ಸೇರ್ಪಡೆಯಿಂದ ಹಾವೇರಿ ಜಿಲ್ಲಾ ಬಿಜೆಪಿಗೆ ಶಕ್ತಿ ಬಂದಂತಾಗಿದೆ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅಭಿಪ್ರಾಯ ಪಟ್ಟರು.

ಬೆಂಗಳೂರಿನ ಬಿಜೆಪಿ ಪಕ್ಷದ ಕಚೇರಿಯಲ್ಲಿ ನಡೆದ ಮಾಜಿ ಸಚಿವ ಮನೋಹರ ತಹಶೀಲ್ದಾರ ಅವರ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿ, ತಹಶೀಲ್ದಾರ ಹಾನಗಲ್ಲ ಕ್ಷೇತ್ರದಲ್ಲಿ ಐದು ದಶಕಗಳ ಸುದೀರ್ಘ ರಾಜಕಾರಣದಲ್ಲಿ ಸಕ್ರೀಯರಾಗಿದ್ದರು. ೧೯೮೪ ರಲ್ಲಿ ದಿ.ಸಿ.ಎಂ.ಉದಾಸಿಯವರು ಸ್ವತಂತ್ರ ಅಭ್ಯರ್ಥಿಯಾಗಿ ಆಯ್ಕೆಯಾಗಿ ಬಂದ ಮೇಲೆ ಹಾನಗಲ್ಲ ತಾಲೂಕಿನ ರಾಜಕಾರಣ ಇವರಿಬ್ಬರ ನಡುವೆ ನಡೆಯಿತು. ಆದರೆ ಇಬ್ಬರ ನಡುವೆ ಯಾವತ್ತೂ ವೈರತ್ವ ಇರಲಿಲ್ಲ. ಒಬ್ಬರನ್ನೊಬ್ಬರು ಗೌರವಿಸುತ್ತಿದ್ದರು ಎಂದರು.

ಪ್ರಧಾನಮಂತ್ರಿ ನರೇಂದ್ರ ಮೋದಿ ಆಡಳಿತ ಮೆಚ್ಚಿ ಬಿಜೆಪಿಗೆ ಬಂದಿದ್ದಾರೆ. ಅವರು ಪಕ್ಷಕ್ಕೆ ಬರುವುದರಿಂದ ಜಿಲ್ಲೆಯ ಬಿಜೆಪಿ ರಾಜಕಾರಣಕ್ಕೆ ದೊಡ್ಡ ಶಕ್ತಿ ಬಂದಂತಾಗಿದೆ. ಅವರು ಎಲ್ಲರೊಂದಿಗೆ ಪ್ರೀತಿಯ ರಾಜಕಾರಣ ಮಾಡಿದ್ದಾರೆ ಎಂದರು.

ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಮನೋಹರ ತಹಶೀಲ್ದಾರ ಅವರನ್ನು ಬರಮಾಡಿಕೊಂಡು ಮಾತನಾಡಿ, ಹಿರಿಯ ರಾಜಕಾರಣಿ ಮನೋಹರ ತಹಶೀಲ್ದಾರ ಅವರ ಸೇರ್ಪಡೆಯಿಂದ ಪಕ್ಷ ಮತ್ತಷ್ಟು ಸಧೃಢಗೊಂಡಿದೆ. ದೇಶದಲ್ಲಿ ಮತ್ತೊಮ್ಮೆ ಮೋದಿ ಪ್ರಧಾನಿಯಾಗಬೇಕೆಂಬ ಉದ್ದೇಶ ಎಲ್ಲರದ್ದಾಗಿದೆ. ಹೀಗಾಗಿ ಎಲ್ಲ ನಾಯಕರೂ ಬಿಜೆಪಿ ಬೆಂಬಲಿಸುತ್ತಿದ್ದಾರೆ ಎಂದರು.

ಮನೋಹರ ತಹಶೀಲ್ದಾರ ಮಾತನಾಡಿ, ಹಾನಗಲ್ಲ ತಾಲೂಕಿನಲ್ಲಿ ಕಾಂಗ್ರೆಸ್ ಪಕ್ಷವನ್ನು ಐವತ್ತು ವರ್ಷಗಳ ಕಾಲ ಜೀವಂತವಾಗಿಟ್ಟಿದ್ದೆ. ಪಕ್ಷ ನನ್ನನ್ನು ಗೌರದಿಂದ ನಡೆಸಿಕೊಳ್ಳಲಿಲ್ಲ. ಹೀಗಾಗಿ ಕಾಂಗ್ರೆಸ್ ಪಕ್ಷವನ್ನು ತೊರೆಯುವ ಅನಿವಾರ್ಯತೆ ಬಂದಿತು. ಪ್ರಧಾನಿ ನರೇಂದ್ರ ಮೋದಿಯವರ ಕೈಬಲ ಪಡಿಸಬೇಕೆಂಬ ಇಚ್ಛೆಯಿಂದ ಬಿಜೆಪಿ ಸೇರಿದ್ದೇನೆ. ಬಿಜೆಪಿಯಲ್ಲಿ ನನಗೆ ಯಾವುದೇ ಸ್ಥಾನ ಮಾನಗಳ ಅಪೇಕ್ಷೆಯಿಂದ ಬಂದಿಲ್ಲ ಎಂದರು.

ಈ ವೇಳೆ ಪ್ರತಿಪಕ್ಷದ ನಾಯಕ ಆರ್.ಅಶೋಕ್, ಮಾಜಿ ಶಾಸಕ ಶಿವರಾಜ ಸಜ್ಜನರ, ಮಹೇಶ ಕಮಡೊಳ್ಳಿ, ಶಿವಲಿಂಗಪ್ಪ ತಲ್ಲೂರ, ರಾಘವೇಂದ್ರ ತಹಶೀಲ್ದಾರ ಇತರರು ಇದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!