ಕಾಂಗ್ರೆಸ್‌ ಪಕ್ಷ ಸೇರ್ಪಡೆ ಬಗ್ಗೆ ಸ್ಪಷ್ಟನೆ ನೀಡಿದ ಮಾಜಿ ಸಚಿವ ಶಂಕರ ಪಾಟೀಲ

ಹೊಸದಿಗಂತ ವರದಿ, ಹುಬ್ಬಳ್ಳಿ:

ಕಾಂಗ್ರೆಸ್‌ ಪಕ್ಷಕ್ಕೆ ಸೇರಿ ಎಂದು ಯಾವುದೇ ನಾಯಕರಿಂದ ನನಗೆ ಆಹ್ವಾನ ಬಂದಿಲ್ಲ. ಕಾಂಗ್ರೆಸ್ ಸೇರಿ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಪ್ರಶ್ನೆಯೇ ಇಲ್ಲ. ಇದು ಕೇವಲ ಊಹಾಪೋಹ ಅಷ್ಟೇ ಎಂದು ಮಾಜಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಸ್ಪಷ್ಟಪಡಿಸಿದರು.

ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗ್ತಾರೆ ಎನ್ನುವ ಊಹಾಪೋಹಗಳ ಬಗ್ಗೆ ಇರುವ ಗೊಂದಲಕ್ಕೆ ತೆರೆ ಎಳೆದರು.

ವಿಧಾನಸಭಾ ಕ್ಷೇತ್ರದ ಎಲ್ಲ ಸಮಾಜದ ಮುಖಂಡರು, ಕಾರ್ಯಕರ್ತರ ಜೊತೆ ಚರ್ಚಿಸಿ ಪಕ್ಷ ತೊರೆಯುವ ಬಗ್ಗೆ ನಿರ್ಧಾರ ತೆಗೆದುಕೊಳ್ಳಬೇಕಾಗುತ್ತದೆ. ಪಕ್ಷ ಬಿಡುವುದು ಎಲ್ಲವು ಕೇವಲ ಊಹಾಪೋಹ ಎಂದರು.

ಕುಟುಂಬದಲ್ಲಿ ಕೆಲವು ಸಮಸ್ಯೆ ಇರುವುದರಿಂದ ಸಕ್ರಿಯ ರಾಜಕಾರಣದಲ್ಲಿ ಭಾಗವಹಿಸಲು ಆಗುವುದಿಲ್ಲ ಎಂದು ಬಿಜೆಪಿ ಪ್ರಮುಖ ನಾಯಕರಿಗೆ ತಿಳಿಸಿದ್ದೇನೆ ಎಂದು ಹೇಳಿದರು.

ಪಕ್ಷದ ಬಗ್ಗೆ ನನಗೂ ಭಿನ್ನಾಭಿಪ್ರಾಯವಿದೆ. ಬಿಜೆಪಿಯಲ್ಲಿರುವ ಕೆಲವು ನಾಯಕರು ಪಕ್ಷ ತೊರೆದಿದ್ದಾರೆ. ಲೋಕಸಭಾ ಕ್ಷೇತ್ರದ ಎಲ್ಲ ಜವಾಬ್ದಾರಿ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರ ಮೇಲೆ ಇದ್ದು, ಅದನ್ನು ಸೂಕ್ತವಾಗಿ ನಿಭಾಯಿಸಬೇಕು ಎಂದು ತಿಳಿಸಿದರು.

ಪ್ರಲ್ಹಾದ ಜೋಶಿ ಅವರು ಲೋಕಸಭಾ ಕ್ಷೇತ್ರದ ಸಂಸದರಾಗಿದ್ದು, ಪಕ್ಷದ ನಾಯಕರು, ಕಾರ್ಯಕರ್ತ ಎಲ್ಲರನ್ನೂ ವಿಶ್ವಾಸಕ್ಕೆ ತಗೆದುಕೊಂಡು ಹೋಗಬೇಕು. ಬಿಜೆಪಿ ಕಟ್ಟಿ ಬೆಳೆಸಿದ ನಾಯಕರು ಬಿಟ್ಟು ಹೋಗಿರುವುದು ನೋವಿನ ಸಂಗತಿ ಎಂದು ಹೇಳಿದರು.

ನನ್ನ ಮುಂದಿನ ರಾಜಕೀಯ ನಡೆಯ ಬಗ್ಗೆ ಜನವರಿ ತಿಂಗಳಲ್ಲಿ ನಿರ್ಧಾರ ತೆಗೆದುಕೊಳ್ಳುತ್ತೇನೆ. ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ನಿಗಮ ಮಂಡಳಿ ಹಾಗೂ ಇನ್ನಿತರ ಜವಾಬ್ದಾರಿಗಳು ಸರಿಯಾಗಿ ಹಂಚಿಕೆಯಾಗಿಲ್ಲ. ಇದರಿಂದ ಕಾರ್ಯಕರ್ತರಲ್ಲಿ ಅಸಮಾಧಾನವಿದೆ. ಇತ್ತೀಚೆಗೆ ಗ್ರಾಪಂ‌ ಅಧ್ಯಕ್ಷ, ಉಪಾಧ್ಯಕ್ಷ ಸಮಾರಂಭಕ್ಕೂ ಸಹ ಕರೆದಿಲ್ಲ ಎಂದು ಶಾಸಕರೊಬ್ಬರು ಸಹ ನೋವು ತೊಡಿಕೊಂಡಿದ್ದಾರೆ ಎಂದು ತಿಳಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!