ಮಾಜಿ ಶಾಸಕ ಅನೀಲ್ ಎಚ್.ಲಾಡ್ ಜೆಡಿಎಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಕೆ

ಹೊಸದಿಗಂತ ವರದಿ ಬಳ್ಳಾರಿ:

ಬಳ್ಳಾರಿ ನಗರ ಕ್ಷೇತ್ರದಿಂದ ಮಾಜಿ ಶಾಸಕ ಅನೀಲ್ ಎಚ್.ಲಾಡ್ ಜೆಡಿಎಸ್ ಅಭ್ಯರ್ಥಿಯಾಗಿ ಗುರುವಾರ ನಾಮಪತ್ರ ಸಲ್ಲಿಸಿದರು.

ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದ ಅವರು, ಬೇಸರಗೊಂಡು ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸುವೆ ಎಂದು ಘೋಷಿಸಿದ್ದರು. ಕೊನೆಗಳಿಗೆಯಲ್ಲಿ ಜೆಡಿಎಸ್ ವರಿಷ್ಠರಾದ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಮಾಜಿ ಸಿ.ಎಂ.ಎಚ್.ಡಿ.ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿ ಜೆಡಿಎಸ್ ಟಿಕೆಟ್ ಗಿಟ್ಟಿಸಿಕೊಂಡು ಬೆಂಬಲಿಗರೊಂದಿಗೆ ನಗರದ ಮಹಾನಗರ ಪಾಲಿಕೆ ಕಚೇರಿಯಲ್ಲಿ ಗುರುವಾರ ಚುನಾವಣೆ ಅಧಿಕಾರಿ ರುದ್ರೇಶ್ ಅವರಿಗೆ ನಾಮಪತ್ರ ಸಲ್ಲಿಸಿದರು. ಈ ಸಂದರ್ಭದಲ್ಲಿ ಜೆಡಿಎಸ್ ಎಸ್ಟಿ ಮೋರ್ಚಾ ರಾಜ್ಯ ಮಹಾಪ್ರಧಾನ ಕಾರ್ಯದರ್ಶಿ ಮೀನಳ್ಳಿ ತಾಯಣ್ಣ, ಜಿಲ್ಲಾಧ್ಯಕ್ಷ ಸೋಮನಗೌಡ‌ ಸೇರಿ ಇತರರು ಉಪಸ್ಥಿತರಿದ್ದರು.

ಬೆಸರಗೊಂಡ ನಿಯೋಜಿತ ಅಭ್ಯರ್ಥಿ

ಕಳೆದ ಸುಮಾರು ತಿಂಗಳ ಹಿಂದೆಯೇ ಜೆಡಿಎಸ್ ನಗರ ಕ್ಷೇತ್ರದ ಟಿಕೆಟ್ ಆಕಾಂಕ್ಷಿ ಮುನ್ನಾಭಾಯಿ ಅವರು ಕ್ಷೇತ್ರದಲ್ಲಿ ಸಂಚರಿಸಿ ಚುನಾವಣೆ ಎದುರಿಸುವ ಸಿದ್ದತೆಯಲ್ಲಿದ್ದರು. ಕೆಲ ದಿನಗಳ ಹಿಂದೆ ಸಾವಿರಾರು ಜನರನ್ನು ಸೇರಿಸಿ ಶಕ್ತಿ ಪ್ರದರ್ಶನ ಮಾಡಿದ್ದರು. ಈ ಸಮಾರಂಭದಲ್ಲೇ ಮಾಜಿ ಸಿಎಂ.ಎಚ್.ಡಿ. ಕುಮಾರಸ್ವಾಮಿ ಅವರು ಬಳ್ಳಾರಿ ನಗರ ಕ್ಷೇತ್ರದ ನಮ್ಮ ಅಭ್ಯರ್ಥಿ ಮುನ್ನಾಭಾಯಿ ಎಂದು ಘೋಷಿಸಿ ಅವರ ಪರ ಮತಯಾಚಿಸಿದ್ದರು. ಬಿ.ಫಾರ್ಮ್ ಪಡೆದು ನಾಮಪತ್ರ ಸಲ್ಲಿಸಲು ಸಿದ್ದತೆ ನಡೆಸಿದ್ದರು. ಕಾಂಗ್ರೆಸ್ ಟಿಕೇಟ್ ವಂಚಿತ ಅನೀಲ್ ಲಾಡ್ ಅವರು ದಿಢೀರ್ ಅಖಾಡಕ್ಕಿಳಿದು ಜೆಡಿಎಸ್ ಟಿಕೆಟ್ ಪಡೆದು ನಾಮಪತ್ರ ಸಲ್ಲಿಸಿರುವುದು ಮುನ್ನಾಭಾಯಿ ಅವರನ್ನು ಸಹಜವಾಗಿ ಕೆರಳಿಸುವಂತೆ ಮಾಡಿದೆ. ಪಕ್ಷದ ವಲಯದಲ್ಲಿ ಅಸಮಾಧಾನ ಹೊಗೆಯಾಡುತ್ತಿದ್ದು, ಅಧಿಕೃತ ಅಭ್ಯರ್ಥಿ ಅನೀಲ್ ಎಚ್.ಲಾಡ್ ಅವರು ಯಾವ ರೀತಿ ಶಮನಗೊಳಿಸಿ ಗೆಲುವಿನ ದಡ ಸೇರಲಿದ್ದಾರೆ ಎಂದು ಕಾದುನೋಡಬೇಕಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!