ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯ ಸರ್ಕಾರಕ್ಕೆ ಆಸ್ತಿ ವಿವರ ಸಲ್ಲಿಸುವಂತ ಸಂದರ್ಭ ಹೊಳಲ್ಕೆರೆಯ ಮಾಜಿ ಶಾಸಕ ಎ.ವಿ ಉಮಾಪತಿ ಅವರು ತಪ್ಪು ಮಾಹಿತಿ ನೀಡಿದ್ದ ಪ್ರಕರಣ ಸಂಬಂಧ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು 3 ತಿಂಗಳ ಜೈಲು ಶಿಕ್ಷೆ, 1 ಸಾವಿರ ದಂಡವನ್ನು ವಿಧಿಸಿ ಆದೇಶಿಸಿದೆ.
ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆಯ ಮಾಜಿ ಶಾಸಕ ಎ.ವಿ ಉಮಾಪತಿ ಅವರು 2004 ರಿಂದ 2005, 2005 ರಿಂದ 2006ನೇ ಸಾಲಿನ ಆಸ್ತಿ ವಿವರವನ್ನು ಸರ್ಕಾರಕ್ಕೆ ಸಲ್ಲಿಸುವಾಗ ತಪ್ಪು ಮಾಹಿತಿ ನೀಡಿದ್ದರಂತೆ ಈ ಸಂಬಂಧ ಮಾಜಿ ಶಾಸಕ ತಿಪ್ಪೇರುದ್ರಪ್ಪ ಎಂಬುವರು ಲೋಕಾಯುಕ್ತಕ್ಕೆ ದೂರು ನೀಡಿದ್ದರು. ಈ ದೂರು ಆಧರಿಸಿ ತನಿಖೆ ನಡೆಸಿದ್ದಂತ ಲೋಕಾಯುಕ್ತ ಅಧಿಕಾರಿಗಳು ಬೆಂಗಳೂರಿನ ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ ತಮ್ಮ ತನಿಖಾ ವರದಿಯನ್ನು ಸಲ್ಲಿಸಿದ್ದರು.
ಈ ಪ್ರಕರಣ ಕುರಿತಂತೆ ಬೆಂಗಳೂರಿನ ಜನಪ್ರತಿನಿಧಿಗಳ ನ್ಯಾಯಾಲಯದ ನ್ಯಾಯಮೂರ್ತಿ ಕೆ.ಎನ್ ಶಿವಕುಮಾರ್ ವಿಚಾರಣೆ ನಡೆಸಿ, 3 ತಿಂಗಳು ಜೈಲು ಶಿಕ್ಷೆ ಹಾಗೂ 1 ಸಾವಿರ ದಂಡವನ್ನು ವಿಧಿಸಿ ಆದೇಶಿಸಿದ್ದಾರೆ.