ಹೊಸದಿಗಂತ ಡಿಜಿಟಲ್ ಡೆಸ್ಕ್:
ಏರ್ ಇಂಡಿಯಾದ ಮಹಿಳಾ ಪೈಲಟ್ ಸೃಷ್ಟಿ ತುಲಿ ಆತ್ಮಹತ್ಯೆ ಅಲ್ಲ , ಕೊಲೆ ಎಂದು ಅವರ ಕುಟುಂಬಸ್ಥರು ಆರೋಪಿಸಿದ್ದಾರೆ. ಸೃಷ್ಟಿ ಪ್ರಾಣ ಕಳೆದುಕೊಳ್ಳುವಷ್ಟು ಅಶಕ್ತಳಲ್ಲ ಎಂದು ಅವರು ಹೇಳಿದ್ದಾರೆ.
ಮಹಿಳಾ ಪೈಲಟ್ ಸೃಷ್ಟಿ ಅವರ ಮೃತದೇಹ ಸೋಮವಾರ ಮುಂಬೈನ ಫ್ಲಾಟ್‌ನಲ್ಲಿ ಸಿಕ್ಕಿತ್ತು. ಪೊಲೀಸರು ಪ್ರಾಥಮಿಕ ತನಿಖೆಯನ್ನು ಇದನ್ನು ಆತ್ಮಹತ್ಯೆ ಎಂದು ತಿಳಿಸಿದ್ದರು. ಇದೀಗ, ಅವರ ಕುಟುಂಬಸ್ಥರು ಕೊಲೆ ನಡೆದಿರುವ ಶಂಕೆ ವ್ಯಕ್ತಪಡಿಸಿದ್ದಾರೆ.
ಮಹಿಳಾ ಪೈಲಟ್ನ ಸಂಬಂಧಿ ವಿವೇಕ್ ಈ ಬಗ್ಗೆ ಮಾತನಾಡಿದ್ದು, ಸೃಷ್ಟಿ ಆತ್ಮಹತ್ಯೆ ಮಾಡಿಕೊಂಡಿಲ್ಲ. ಕೊಲೆ ಮಾಡಲಾಗಿದೆ. ಆಕೆ ತುಂಬಾ ಗಟ್ಟಿಗಿತ್ತಿ. ಪೈಲಟ್ ತರಬೇತಿಯ ವೇಳೆ ಮಾನಸಿಕ ದೃಢತೆಯನ್ನೂ ಬೆಳೆಸಿಕೊಂಡವಳು. ಅಂತಹ ತರಬೇತುದಾರೆ ಆತ್ಮಹತ್ಯೆ ಮಾಡಿಕೊಳ್ಳಲು ಸಾಧ್ಯವೇ ಇಲ್ಲ ಎಂದು ಹೇಳಿದ್ದಾರೆ.
ಸೃಷ್ಟಿಯ ಸಾವಿಗೂ ಮೊದಲು ಆಕೆಯ ಪ್ರಿಯಕರ ಆದಿತ್ಯ ಪಂಡಿತ್ ಮತ್ತು ಇನ್ನೊಬ್ಬ ಸ್ನೇಹಿತೆ ಜೊತೆಗೆ ಮಾತುಕತೆ ನಡೆಸಿದ್ದಾಳೆ. ಬಳಿಕ ತನ್ನ ಮನೆಗೆ ಹೋಗಿದ್ದಾಳೆ. ಇದಾದ 15 – 20 ನಿಮಿಷಗಳಲ್ಲಿ ಏನಾಯ್ತು ಎಂಬುದು ಪ್ರಶ್ನೆಯಾಗಿದೆ. ಸೃಷ್ಟಿ ಆತ್ಮಹತ್ಯೆಯಿಂದ ಯಾಕೆ ಸಾಯಬೇಕಿತ್ತು? ಆಕೆಗೆ ಯಾವುದೇ ಸಮಸ್ಯೆ ಇರಲಿಲ್ಲ. ಹೀಗಾಗಿ ಇದೊಂದು ಕೊಲೆ. ಬಂಧನಕ್ಕೊಳಗಾಗಿರುವ ಆದಿತ್ಯ ಪಂಡಿತ್‌ನನ್ನು ಕಟ್ಟುನಿಟ್ಟಾಗಿ ವಿಚಾರಣೆ ನಡೆಸಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಆದಿತ್ಯನಿಂದ ಸೃಷ್ಟಿಗೆ ಕಿರುಕುಳ
ಮೃತ ಸೃಷ್ಟಿಗೆ ಬಾಲ್ಯದಿಂದಲೂ ಪೈಲಟ್ ಆಗಬೇಕು ಎಂಬ ಕನಸು ಕಂಡಿದ್ದಳು. ಅದರಂತೆ ಆಕೆ ಪೈಲಟ್ ಆಗಿದ್ದಳು. ಬಳಿಕ ಆದಿತ್ಯನ ಸಂಪರ್ಕ ಬೆಳೆಸಿಕೊಂಡಿದ್ದಳು. ಕೆಲ ದಿನಗಳ ಬಳಿಕ ಈತ ಸೃಷ್ಟಿಗೆ ಕಿರುಕುಳ ನೀಡಲು ಆರಂಭಿಸಿದ. ಆಕೆಯೊಂದಿಗೆ ಅನುಚಿತವಾಗಿ ವರ್ತಿಸುತ್ತಿದ್ದ. ಆತನೂ ಪೈಲಟ್ ಆಗಲು ತಯಾರಿ ನಡೆಸುತ್ತಿದ್ದ. ಸಾರ್ವಜನಿಕವಾಗಿ ಸೃಷ್ಟಿಯ ಮೇಲೆ ಕೂಗಾಡಿದ್ದ. ಈ ಘಟನೆ ಆದಿತ್ಯನ ಮೇಲೆ ಅನುಮಾನ ಮೂಡಿಸುತ್ತಿದೆ ಎಂದು ವಿವೇಕ್ ಹೇಳಿದ್ದಾರೆ.
ಮಹಿಳಾ ಪೈಲಟ್ ತನ್ನ ಮನೆಯಲ್ಲಿ ಪ್ರಜ್ಞಾಹೀನಳಾಗಿ ಬಿದ್ದಿದ್ದಾಗ, ಸ್ನೇಹಿತ ಆದಿತ್ಯ ಆಕೆಯನ್ನು ಮುಂಬೈನ ಸೆವೆನ್ ಹಿಲ್ಸ್ ಆಸ್ಪತ್ರೆಗೆ ಕರೆದೊಯ್ದಿದ್ದ. ವೈದ್ಯರು ಮೃತಪಟ್ಟಿದ್ದಾಗಿ ಘೋಷಿಸಿದರು. ಬಳಿಕ ಪೊಲೀಸರು ಆತನನ್ನು ನಾಲ್ಕು ದಿನಗಳವರೆಗೆ ಕಸ್ಟಡಿಗೆ ತೆಗೆದುಕೊಂಡಿದ್ದಾರೆ. ಆದಿತ್ಯನ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ ಪ್ರಕರಣ ದಾಖಲಾಗಿದೆ.