ಕರ್ನಾಟಕ ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷ, ಸಾಹಿತ್ಯ ವಿಮರ್ಶಕ ಪ್ರೊ. ಎಂ.ಎಚ್​.ಕೃಷ್ಣಯ್ಯ ಇನ್ನಿಲ್ಲ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಕರ್ನಾಟಕ ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷರೂ ಆಗಿದ್ದ ವಿಮರ್ಶಕ ಪ್ರೊ. ಎಂ.ಎಚ್. ಕೃಷ್ಣಯ್ಯ (85) ಅವರು ಶುಕ್ರವಾರ ನಿಧನರಾದರು.

ಉತ್ತಮ ಬರಹಗಾರರು, ಸಂಗೀತಗಾರರು, ಶಿಲ್ಪಿಗಳು, ಕಲಾವಿದರೊಂದಿಗೆ ಬೆರೆತು ಅವರ ಬದುಕನ್ನು ಅರಿತು, ಆ ಅರಿವನ್ನು ತಮ್ಮ ಕೃತಿಗಳ ಮೂಲಕ ಕನ್ನಡ ಸಾಹಿತ್ಯಕ್ಕೆ ಕೊಡುಗೆ ನೀಡಿದ್ದರು.

ಇವರ ಅಂತಿಮ ಸಂಸ್ಕಾರವು ಬೆಂಗಳೂರಿನ ಗಾಯತ್ರಿನಗರದ ಹರಿಶ್ಚಂದ್ರ ಘಾಟ್​ನಲ್ಲಿ ನಾಳೆ (ಶನಿವಾರ) 11 ಗಂಟೆಗೆ ನಡೆಯಲಿದೆ.
1937ರ ಜುಲೈ 21ರಂದು ಮೈಸೂರಿನಲ್ಲಿ ಜನಿಸಿದ ಕೃಷ್ಣಯ್ಯನವರು, ಮೈಸೂರು ವಿಶ್ವವಿದ್ಯಾಲಯದಿಂದ ಬಿ. ಎ ಮತ್ತು ಎಂ. ಎ. ಪದವಿಗಳನ್ನು ಪಡೆದಿದ್ದರು. ಇವರು ಪ್ರಾಧ್ಯಾಪಕರಾಗಿ ಬೆಂಗಳೂರು, ಕೋಲಾರ, ಮಂಗಳೂರು, ಮಾಗಡಿ ಮುಂತಾದೆಡೆ ಕಾರ್ಯನಿರ್ವಹಿಸಿದ್ದಾರೆ. ಸಂಕ್ಷಿಪ್ತ ಕನ್ನಡ ಭಾಷೆಯ ಚರಿತ್ರೆ, ಆರ್. ಎಮ್. ಹಡಪದ್, ರೂಪಶಿಲ್ಪಿ ಬಸವಯ್ಯ, ಶೃಂಗಾರ ಲಹರಿ, ಕಲಾ ದರ್ಶನ, ರಂಗಭೂಮಿ ಮತ್ತು ಸೌಂದರ್ಯ ಪ್ರಜ್ಞೆ ಮುಂತಾದ ಬರಹಗಳು ಹಾಗೂ ಕುವೆಂಪು ಸಾಹಿತ್ಯ : ಚಿತ್ರ ಸಂಪುಟದಂತಹ ಸಂಪಾದನೆಗಳು ಸೇರಿ 30ಕ್ಕೂ ಹೆಚ್ಚು ಇವರ ಕೃತಿಗಳು ಪ್ರಕಟವಾಗಿವೆ.

ಕೃಷ್ಣಯ್ಯನವರಿಗೆ ‘ಶೃಂಗಾರ ಲಹರಿ’ ಕೃತಿಗೆ ಲಲಿತ ಕಲಾ ಅಕಾಡೆಮಿ ಪುರಸ್ಕಾರ, ‘ಸಂಕ್ಷಿಪ್ತ ಕನ್ನಡ ಭಾಷೆಯ ಚರಿತ್ರೆ’ ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡಮಿ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಕುವೆಂಪು ಪ್ರಶಸ್ತಿ ಮುಂತಾದ ಹಲವಾರು ಗೌರವಗಳು ಸಂದಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!