ಉಕ್ರೇನ್ ರಣಾಂಗಣದಿಂದ ಭಾರತೀಯರ ರಕ್ಷಣೆ- ದೇವೇಗೌಡರ ತೂಕದ ಮಾತಿದು!

ಹೊಸದಿಗಂತ ಡಿಜಿಟಲ್ ಡೆಸ್ಕ್

ಬೆಂಗಳೂರು: ಉಕ್ರೇನ್-ರಷ್ಯ ಬಿಕ್ಕಟ್ಟಿನ ನಡುವೆ ಸಿಕ್ಕಿಬಿದ್ದ ಭಾರತೀಯರನ್ನು ಸ್ಥಳಾಂತರಿಸುವ ವಿಷಯವಾಗಿ ವಿಪಕ್ಷಗಳು ರಾಜಕೀಯ ಕೆಸರೆರಚಾಟ ಆರಂಭಿಸಿದ್ದರೆ, ಹಿರಿಯ ಮುತ್ಸದ್ದಿ ಹಾಗೂ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರು ತೆರವು ಪ್ರಕ್ರಿಯೆಯಲ್ಲಿ ರಾಜಕೀಯ ಮಾಡುವುದು ಬೇಡ. ನಾವು ಒಟ್ಟಾಗಿ ಕೆಲಸ ಮಾಡೋಣ ಎಂದು ಮನವಿ ಮಾಡಿದ್ದಾರೆ.

ವಿಪಕ್ಷ ಕಾಂಗ್ರೆಸ್ ಮೋದಿ ಸರ್ಕಾರದ ತೆರವು ಕಾರ್ಯಾಚರಣೆ ಸಮರ್ಪಕವಾಗಿಲ್ಲ ಎಂದೆಲ್ಲ ಟೀಕೆ ಮಾಡುತ್ತಿರಬೇಕಾದರೆ ಮಾಜಿ ಪ್ರಧಾನಿ ದೇವೇಗೌಡರ ನಿಲುವು ಭಿನ್ನವಾಗಿ ನಿಲ್ಲುತ್ತದೆ. ಅಷ್ಟೇ ಅಲ್ಲ, ಯುದ್ಧಭೂಮಿಯಿಂದ ರಕ್ಷಿಸಿ ತರುವ ಕಾರ್ಯ ಸುಲಭದ್ದಲ್ಲ ಎಂಬ ವಾಸ್ತವವನ್ನೂ ಅವರು ಮುಕ್ತವಾಗಿ ಗುರುತಿಸಿದ್ದಾರೆ.

ಈ ಕುರಿತು ಸರಣಿ ಟ್ವೀಟ್ ಮಾಡಿರುವ ಅವರು, ‘ಉಕ್ರೇನ್‌ನಲ್ಲಿ ಸಿಕ್ಕಿಬಿದ್ದಿರುವ ನಮ್ಮ ಯುವ ನಾಗರಿಕರು ಸ್ಥಳಾಂತರಿಸಲು ತೀವ್ರ ಮನವಿ ಮಾಡುತ್ತಿರುವ ವೀಡಿಯೊಗಳನ್ನು ನಾನು ನೋಡುತ್ತಿದ್ದೇನೆ. ಅವರ ಅವಸ್ಥೆ ನೋಡಿದರೆ ಹೃದಯ ಕಲಕುತ್ತದೆ. ಸುರಕ್ಷಿತವಾಗಿ ಮನೆಗೆ ಮರಳಲು ಅವರ ಹತಾಶೆಯನ್ನು ನಾನು ಅರ್ಥಮಾಡಿಕೊಳ್ಳಬಲ್ಲೆ.’

‘ಆದರೆ ಆ ದೇಶದಲ್ಲಿ ಯುದ್ಧವು ಉಲ್ಬಣಗೊಂಡಾಗ ಮತ್ತು ತುಂಬಾ ಅನಿಶ್ಚಿತತೆಯಿರುವಾಗ ಹಾಗೂ ಕಾರ್ಯಾಚರಣೆಯ ಸಂಪರ್ಕಗಳು ಕಡಿತಗೊಂಡಾಗ, ನಮ್ಮ ಅಧಿಕಾರಿಗಳು ಮತ್ತು ರಾಯಭಾರ ಕಚೇರಿಗಳು ಈ ಕಾರ್ಯಾಚರಣೆಗಳ ಮೇಲೆ ಕೇಂದ್ರೀಕರಿಸಲು ನಾವು ಬೆಂಬಲಿಸುವುದು ನ್ಯಾಯಯುತವಾಗಿದೆ. ಈ ಕಾರ್ಯಾಚರಣೆಗಳು ಕಠಿಣ ಮತ್ತು ಸೂಕ್ಷ್ಮವಾಗಿವೆ ಎಂಬುದು ನನಗೆ ಅನುಭವದಿಂದ ತಿಳಿದಿದೆ.’

‘ತೆರವು ಪ್ರಕ್ರಿಯೆಯಲ್ಲಿ ರಾಜಕೀಯ ಮಾಡುವುದು ಬೇಡ. ಇದು ಕಾರ್ಯಾಚರಣೆ ನಡೆಸುವವರ ಮನೋಸ್ಥೈರ್ಯ ಕುಗ್ಗಿಸುತ್ತದೆ. ಬಿಕ್ಕಟ್ಟಿನ ಈ ಸಮಯದಲ್ಲಿ ರಾಜಕೀಯ ಲೆಕ್ಕಾಚಾರ ತೀರಿಸಿಕೊಳ್ಳುವುದು ನಮ್ಮನ್ನು ಕೆಟ್ಟದಾಗಿ ಕಾಣುವಂತೆ ಮಾಡುತ್ತದೆ. ನಾವು ಒಟ್ಟಾಗಿ ಕೆಲಸ ಮಾಡೋಣ’ ಎಂದು ಮನವಿ ಮಾಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!