ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತದ ಮಾಜಿ ಪ್ರಧಾನಿ ಹಾಗೂ ಖ್ಯಾತ ಅರ್ಥಶಾಸ್ತ್ರಜ್ಞ ಡಾ. ಮನ್ಮೋಹನ್ ಸಿಂಗ್ ಅವರ ಜನ್ಮದಿನದ ಅಂಗವಾಗಿ ದೆಹಲಿಯ ಎಐಸಿಸಿ ಕಚೇರಿಯಲ್ಲಿ ಶನಿವಾರ ಹಿರಿಯ ಕಾಂಗ್ರೆಸ್ ನಾಯಕರಾದ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರು ಪುಷ್ಪ ನಮನ ಸಲ್ಲಿಸಿ ಗೌರವ ಸಮರ್ಪಿಸಿದರು.
ದೇಶದ ಅಭಿವೃದ್ಧಿ ಹಾಗೂ ಆರ್ಥಿಕ ಸುಧಾರಣೆಗೆ ಮನ್ಮೋಹನ್ ಸಿಂಗ್ ಅವರು ನೀಡಿದ ಅಪ್ರತಿಮ ಕೊಡುಗೆಗಳನ್ನು ಈ ಸಂದರ್ಭದಲ್ಲಿ ನಾಯಕರು ಸ್ಮರಿಸಿದರು.
ಡಾ. ಮನ್ಮೋಹನ್ ಸಿಂಗ್ ಅವರು ಸೆ. 26, 1932 ರಂದು ಅವಿಭಜಿತ ಭಾರತದ ಪಂಜಾಬ್ ಪ್ರಾಂತ್ಯದ ಹಳ್ಳಿಯೊಂದರಲ್ಲಿ ಜನಿಸಿದ್ದರು. ಅವರು ಭಾರತದ ರಿಸರ್ವ್ ಬ್ಯಾಂಕ್ ಗವರ್ನರ್ ಆಗಿ, ಕೇಂದ್ರ ಹಣಕಾಸು ಸಚಿವರಾಗಿ ಕಾರ್ಯನಿರ್ವಹಿಸಿದ್ದರು. ತದನಂತರ 2004 ರಿಂದ 2014 ರವರೆಗೆ ಸತತ ಎರಡು ಅವಧಿಗೆ ದೇಶದ ಪ್ರಧಾನಮಂತ್ರಿಯಾಗಿ ದೇಶವನ್ನು ಮುನ್ನಡೆಸಿದ್ದರು. ಕಳೆದ ಡಿಸೆಂಬರ್ 26, 2024 ರಂದು ಅವರು ತಮ್ಮ 92ನೇ ವಯಸ್ಸಿನಲ್ಲಿ ನಿಧನರಾಗಿದ್ದರು.
ಪಕ್ಷಾತೀತವಾಗಿ ನಮನ
ಈ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ.ʼನಮ್ಮ ಮಾಜಿ ಪ್ರಧಾನಿ ಡಾ. ಮನ್ಮೋಹನ್ ಸಿಂಗ್ ಜಿ ಅವರ ಜನ್ಮದಿನದಂದು ಅವರಿಗೆ ನನ್ನ ನಮನಗಳು. ಅವರು ಸಾರ್ವಜನಿಕ ಜೀವನದಲ್ಲಿ ಸುದೀರ್ಘ ವರ್ಷಗಳನ್ನು ಕಳೆದು, ದೇಶ ಸೇವೆಗಾಗಿ ತಮ್ಮನ್ನು ತಾವು ಸಮರ್ಪಿಸಿಕೊಂಡಿದ್ದರುʼ ಎಂದು ಬರೆದುಕೊಂಡಿದ್ದಾರೆ.
ಮಲ್ಲಿಕಾರ್ಜುನ ಖರ್ಗೆ ಅವರು ಮಾಜಿ ಪ್ರಧಾನಿಗೆ ಗೌರವ ನಮನ ಸಲ್ಲಿಸಿದ್ದಾರೆ.ʼಡಾ. ಮನ್ಮೋಹನ್ ಸಿಂಗ್ ಅವರು ದೂರದೃಷ್ಟಿಯ ರಾಜತಾಂತ್ರಿಕರಾಗಿದ್ದರು. ಅವರ ಆರ್ಥಿಕ ಸುಧಾರಣೆಗಳು ಭಾರತದ ಬೆಳವಣಿಗೆಯ ಹಾದಿಯನ್ನೇ ಬದಲಾಯಿಸಿದವು ಹಾಗೂ ಕೋಟ್ಯಂತರ ಜನರನ್ನು ಬಡತನದಿಂದ ಮುಕ್ತಗೊಳಿಸಲು ಸಹಾಯ ಮಾಡಿದವು. ಅವರ ಪ್ರಾಮಾಣಿಕತೆ ಮತ್ತು ನಮ್ರತೆ ಮುಂದಿನ ಪೀಳಿಗೆಗೆ ಸದಾ ಪ್ರೇರಣೆ,ʼ ಎಂದು ಸಾಮಾಜಿಕ ಜಾಲತಾಣ ‘X’ ನಲ್ಲಿ ತಿಳಿಸಿದ್ದಾರೆ.
ಡಿ.ಕೆ. ಶಿವಕುಮಾರ್ ಈ ಬಗ್ಗೆ ಪೋಸ್ಟ್ ಮಾಡಿದ್ದು,ʼಮನ್ಮೋಹನ್ ಸಿಂಗ್ ಅವರು ಶ್ರೇಷ್ಠ ವಿದ್ವಾಂಸ ಮತ್ತು ಅರ್ಥಶಾಸ್ತ್ರಜ್ಞರಾಗಿದ್ದರು. ಬೆಂಗಳೂರು ಮೆಟ್ರೋ ಯೋಜನೆಗೆ ಅವರು ನೀಡಿದ ಕೊಡುಗೆಯನ್ನು ಕರ್ನಾಟಕದ ಜನತೆ ಎಂದಿಗೂ ಮರೆಯಲು ಸಾಧ್ಯವಿಲ್ಲʼ ಎಂದು ಸ್ಮರಿಸಿದ್ದಾರೆ.
ಇನ್ನು,ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಹಾಗೂ ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ಅವರೂ ಸಹ ಸಿಂಗ್ ಅವರ ಜಾಗತಿಕ ಮಟ್ಟದ ಆರ್ಥಿಕ ಚಿಂತನೆ ಹಾಗೂ ಪ್ರಾಮಾಣಿಕ ದೇಶಸೇವೆಯನ್ನು ಕೊಂಡಾಡಿ ನಮನ ಸಲ್ಲಿಸಿದ್ದಾರೆ.



