ಹೊಸದಿಗಂತ ಡಿಜಿಟಲ್ ಡೆಸ್ಕ್:
ಅನಾರೋಗ್ಯಕ್ಕೀಡಾಗಿ ಆಸ್ಪತ್ರೆಗೆ ದಾಖಲಾಗಿದ್ದ ಟೀಂ ಇಂಡಿಯಾದ ಮಾಜಿ ಆಟಗಾರ ವಿನೋದ್ ಕಾಂಬ್ಳಿ ಕೊಂಚ ಚೇತರಿಸಿಕೊಂಡಿದ್ದು, ಇದೀಗ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.
ಸುಮಾರು 10 ದಿನಗಳ ಹಿಂದೆ ಕಾಂಬ್ಳಿ ಅವರ ಆರೋಗ್ಯ ಹದಗೆಟ್ಟಿತ್ತು. ಹೀಗಾಗಿ ಅವರನ್ನು ಥಾಣೆಯ ಆಕೃತಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕಾಂಬ್ಳಿಯವರನ್ನು ಪರಿಶೀಲಿಸಿದ್ದ ವೈದ್ಯರು ಕಾಂಬ್ಳಿ ಅವರ ಮೆದುಳಿನಲ್ಲಿ ರಕ್ತ ಹೆಪ್ಪುಗಟ್ಟಿರವ ಬಗ್ಗೆ ವರದಿ ನೀಡಿದ್ದರು. ಇದೀಗ ಸುಮಾರು 10 ದಿನಗಳ ಚಿಕಿತ್ಸೆಯ ಬಳಿಕ ಅವರನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿದೆ.
ಕುಡಿತದ ಚಟಕ್ಕೆ ಬಿದ್ದು ಹಲವು ಕಾಯಿಲೆಗಳಿಗೆ ತುತ್ತಾಗಿದ್ದ ವಿನೋದ್ ಕಾಂಬ್ಳಿ ಕಳೆದ ಡಿಸೆಂಬರ್ 21 ರಂದು ತೀವ್ರ ಅನಾರೋಗ್ಯದಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಇದೀಗ ಹತ್ತು ದಿನಗಳ ಚಿಕಿತ್ಸೆ ಬಳಿಕ ಮನೆಗೆ ಮರಳಿದ್ದಾರೆ. ಆಸ್ಪತ್ರೆಯಿಂದ ಮನೆಗೆ ತೆರಳುತ್ತಿರುವ ಕಾಂಬ್ಳಿ ಅವರಿಗೆ ಸರಿಯಾಗಿ ನಡೆಯಲು ಕೂಡ ಸಾಧ್ಯವಾಗುತ್ತಿಲ್ಲ. ಇನ್ನೊಬ್ಬರ ಸಹಾಯದೊಂದಿಗೆ ಕಾಂಬ್ಳಿ ನಡೆಯುತ್ತಿರುವುದು ಕಂಡುಬಂದಿತು. ಹಾಗೆಯೇ ಟೀಂ ಇಂಡಿಯಾ ಜೆರ್ಸಿ ಧರಿಸಿ ಆಸ್ಪತ್ರೆಯಿಂದ ಹೊರ ಬಂದಿರುವ ಕಾಂಬ್ಳಿಯವರ ಕೈಯಲ್ಲಿ ಬ್ಯಾಟ್ ಕೂಡ ಇತ್ತು. ಇದಲ್ಲದೇ ಹೊಸ ವರ್ಷದಲ್ಲಿ ನಾಗರಿಕರು ಮದ್ಯ ಹಾಗೂ ಇತರೆ ಅಮಲು ಪದಾರ್ಥಗಳಿಂದ ದೂರವಿರಬೇಕು ಎಂಬ ಸಂದೇಶ ನೀಡಿರುವ ಕಾಂಬ್ಳಿ ಯಾವುದೇ ವ್ಯಸನವು ಜೀವನವನ್ನು ನಾಶಪಡಿಸುತ್ತದೆ ಎಂದಿದ್ದಾರೆ. ಇದರ ಜೊತೆಗೆ ಶೀಘ್ರದಲ್ಲೇ ಮತ್ತೆ ಕ್ಷೇತ್ರಕ್ಕೆ ಹಿಂತಿರುಗುತ್ತೇನೆ ಎಂದಿದ್ದಾರೆ.