ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಷ್ಟದಲ್ಲಿರುವವರನ್ನು ಮೇಲೆತ್ತುವ ಸಿರಿವಂತ ಮನಸ್ಸು ನಮ್ಮದಾದಾಗ ನಾಡು, ನಮ್ಮ ಸಂಸ್ಕೃತಿ ಉನ್ನತಿಯನ್ನು ಕಾಣುತ್ತದೆ. ನಮ್ಮ ಸನಾತನ ಧರ್ಮವನ್ನು ಬಲಪಡಿಸಲು ಮಕ್ಕಳಿಗೆ ಉತ್ತಮ ಸಂಸ್ಕಾರವನ್ನು ನೀಡಬೇಕು. ಉತ್ತಮ ಕಾರ್ಯಗಳಿಗೆ ಸಿರಿತನವು ಉಪಯೋಗವಾದಾಗ ಅವರ ಬದುಕು ಸಾರ್ಥಕತೆಯನ್ನು ಕಾಣಲು ಸಾಧ್ಯ ಎಂದು ಉದ್ಯಮಿ ಮುಂಬೈ ಹೇರಂಭಾ ಇಂಡಸ್ಟ್ರೀಸ್ ಮಾಲಕ ಸದಾಶಿವ ಶೆಟ್ಟಿ ಕುಳೂರು ಕನ್ಯಾನ ಅಭಿಪ್ರಾಯಪಟ್ಟರು.
ಬುಧವಾರ ಬೆಳಗ್ಗೆ ಕಾರ್ಮಾರು ಶ್ರೀ ಮಹಾವಿಷ್ಣು ದೇವಸ್ಥಾನದ ಜೀರ್ಣೋದ್ಧಾರದ ಅಂಗವಾಗಿ ಉಪದೇವತೆಗಳ ಸನ್ನಿಧಿಗೆ ಶಿಲಾನ್ಯಾಸಗೈದು, ನಂತರ ನಡೆದ ಸಭಾಕಾರ್ಯಕ್ರಮವನ್ನು ದೀಪಬೆಳಗಿಸಿ ಉದ್ಘಾಟಿಸಿ ಅವರು ಮಾತನಾಡಿದರು. ಮನುಷ್ಯನಾಗಿ ಜನ್ಮತಾಳಿದ ಮೇಲೆ ನಮ್ಮ ಕರ್ತವ್ಯವನ್ನು ನಿರ್ವಹಿಸಿವ ಮನಸ್ಸು ಪ್ರತಿಯೊಬ್ಬನಲ್ಲಿ ಇರಬೇಕು. ನಮ್ಮ ಸಂಸ್ಕೃತಿಗೆ ಪೂರಕವಾದ ಚಟುವಟಿಗಳು ನಿರಂತರ ನಡೆಯುತ್ತಿರಬೇಕು. ಇಂದು ಅನೇಕ ಧಾರ್ಮಿಕ ಕ್ಷೇತ್ರಗಳು ಅಭಿವೃದ್ಧಿಯತ್ತ ಸಾಗುತ್ತಿದೆ. ಕಾಸರಗೋಡಿನ ಬಗ್ಗೆ ವಿಶೇಷ ಕಾಳಜಿಯಿದೆ ಎಂದು ತಿಳಿಸಿದ ಅವರು ಕ್ಷೇತ್ರದ ಜೀರ್ಣೋದ್ಧಾರ ಕಾರ್ಯದಲ್ಲಿ ನಿಮ್ಮೊಂದಿಗಿದ್ದೇನೆ ಎಂದರು. ಶ್ರೀ ಕ್ಷೇತ್ರದ ಜೀರ್ಣೋದ್ಧಾರ ಸಮಿತಿಯ ರಕ್ಷಾಧಿಕಾರಿ ಗೋಪಾಲಕೃಷ್ಣ ಪೈ ಬದಿಯಡ್ಕ ಅಧ್ಯಕ್ಷತೆ ವಹಿಸಿದ್ದರು. ಸಂಸ್ಕೃತ ಭಾರತಿ ಕಾಸರಗೋಡು ಜಿಲ್ಲಾ ಸಂಯೋಜಕ ಮಂಜುನಾಥ ಉಡುಪ ಕುಂಟಾರು ಅಭ್ಯಾಗತರಾಗಿ ಆಗಮಿಸಿ ಮಾತನಾಡಿ ದೇಶ, ಧರ್ಮದ ರಕ್ಷಣೆಗೆ ಯುವಗಣ ಅಗತ್ಯ. ಅವರೊಳಗಿರುವ ಚೈತನ್ಯ ಅನಾವರಣಗೊಳ್ಳಬೇಕಿದೆ. ಇಂತಹ ಸಮಾಜವನ್ನು ಕಟ್ಟುವ ಸಾಮರ್ಥ್ಯವಿರುವ ಯುವಕರಿಗೆ ಹಿರಿಯರ ಪ್ರೋತ್ಸಾಹ ಇದ್ದರೆ ಕಾರ್ಯ ಸಾಫಲ್ಯತೆಯನ್ನು ಹೊಂದಲಿದೆ. ನಾಲ್ಕು ಬಲಿಷ್ಠ ಕಂಬಗಳು ಒಂದು ಕಟ್ಟಡವನ್ನು ಎತ್ತಿ ನಿಲ್ಲಿಸುವಲ್ಲಿ ಪ್ರಧಾನಪಾತ್ರವಹಿಸುತ್ತದೆ. ಅಂತಹ ಒಂದು ವೇದಿಕೆ ಇಲ್ಲಿ ಕಂಡುಬಂದಿದೆ ಎಂದರು.
ನಿವೃತ್ತ ಜಿಲ್ಲಾ ಲೇಬರ್ ಆಫೀಸರ್ ಕೇಶವ ನಾಯ್ಕ್, ಕಾಟುಕುಕ್ಕೆ ಶ್ರೀ ಸುಬ್ರಾಯ ದೇವಸ್ಥಾನದ ಮಾಜಿ ಆಡಳಿತ ಮೊಕ್ತೇಸರ ನಾರಾಯಣ, ಕಾಸರಗೋಡು ಲೀಗಲ್ ಮೆಟ್ರೋಲಜಿಯ ಇನ್ಸ್‌ಪೆಕ್ಟರ್ ಶಶಿಕಲಾ ಸುಬ್ರಹ್ಮಣ್ಯ, ನೀರ್ಚಾಲು ಮಹಾಜನ ವಿದ್ಯಾಸಂಸ್ಥೆಯ ಜಯದೇವ ಖಂಡಿಗೆ, ಗುರುಸ್ವಾಮಿಗಳಾದ ಕುಂಞಿಕಣ್ಣ ಮಣಿಯಾಣಿ ಚುಕ್ಕಿನಡ್ಕ, ಕುಂಞಪ್ಪು ನಾಯ್ಕ ಮಾನ್ಯ ವೇದಿಕೆಯಲ್ಲಿ ಉಪಸ್ಥಿತರಿದ್ದು ಮಾತನಾಡಿದರು. ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಕೃಷ್ಣಮೂರ್ತಿ ಪುದುಕೋಳಿ ಸ್ವಾಗತಿಸಿ, ಪ್ರಧಾನ ಕಾರ್ಯದರ್ಶಿ ಮಹೇಶ್ ವಳಕ್ಕುಂಜ ವಂದಿಸಿದರು. ಶಮಾ ವಳಕ್ಕುಂಜ ಪ್ರಾರ್ಥನೆ ಹಾಡಿದರು. ಸುಂದರ ಶೆಟ್ಟಿ ಕೊಲ್ಲಂಗಾನ ನಿರೂಪಿಸಿದರು.