ಧಾರವಾಡದಲ್ಲಿ ವಿಧಿವಿಜ್ಞಾನ ಯುನಿವರ್ಸಿಟಿಗೆ ಶಂಕುಸ್ಥಾಪನೆ ನೆರವೇರಿಸಿದ ಕೇಂದ್ರ ಗೃಹ ಸಚಿವ ಅಮಿತ್​ ಶಾ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಧಾರವಾಡದ ವಿಧಿವಿಜ್ಞಾನ ಕ್ಯಾಂಪಸ್ ನಿರ್ಮಾಣಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಶಂಕುಸ್ಥಾಪನೆ ಮಾಡಿದರು.
ಕೃಷಿ ವಿಶ್ವವಿದ್ಯಾಲಯದ ಆವರಣದಲ್ಲಿ ಫಾರೆನ್ಸಿಕ್ ಕ್ಯಾಂಪಸ್ ನಿರ್ಮಾಣಕ್ಕೆ ಶಾ ಭೂಮಿ ಪೂಜೆ ನೆರವೇರಿಸಿದರು. ಈ ಸಂದರ್ಭ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ರಾಜ್ಯ ಗೃಹ ಸಚಿವ ಆರಗ ಜ್ಞಾನೇಂದ್ರ, ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಹಾಲಪ್ಪ ಆಚಾರ್, ಶಾಸಕರಾದ ಅರವಿಂದ ಬೆಲ್ಲದ ಹಾಗೂ ಅಮೃತ ದೇಸಾಯಿ ಅವರು ಕೇಂದ್ರ ಗೃಹ ಸಚಿವರಿಗೆ ಸಾಥ್ ನೀಡಿದರು.

ಕೃವಿವಿ ರೈತ ಜ್ಣಾನಾಭಿವೃದ್ದಿ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅಮಿತ್​ ಶಾ, ಕರ್ನಾಟಕ ರಾಜ್ಯದಲ್ಲಿ ನಾನು ಅಧ್ಯಕ್ಷನಾಗಿದ್ದಾಗ ಬಹಳ ಪ್ರವಾಸ ಮಾಡಿದ್ದೇನೆ. ಎಲ್ಲ ಜಿಲ್ಲೆಗಳನ್ನು ನಾನು ನೋಡಿದ್ದೇನೆ. ಧಾರವಾಡ ಎಂದರೆ ವಿರಾಮದ ಸ್ಥಳ ಎಂದು ಅರ್ಥ. ಜಿಲ್ಲೆಯಲ್ಲಿ ಫಾರೆನ್ಸಿಕ್​​ ಆಗಿರುವುದು ಶಿಕ್ಷಣಕ್ಕೆ ಉಪಯುಕ್ತವಾಗಲಿದೆ ಎಂದರು. ಇನ್ನು ಈ ಕ್ಯಾಂಪಸ್ ಬರಲು ಜೋಶಿಯವರು ಕಾರಣ. ಈ ಬಗ್ಗೆ ಅವರು ನಮ್ಮ ಬೆನ್ನು ಬಿದ್ದಿದ್ದರು.‌ ಭೂಮಿ ಇಲ್ಲ ಎಂದಾಗ ಒಂದೇ ದಿನ 50 ಎಕರೆ ಜಮೀನು ಕೊಟ್ಟರು. ಇದು 9ನೇ ಕ್ಯಾಂಪಸ್. ಸಿಎಂಗೆ ನಾನು ಸದ್ಯಕ್ಕೆ ತಾತ್ಕಾಲಿಕ ಕ್ಯಾಂಪಸ್ ಕೊಡಲು ಹೇಳಿದ್ದೇನೆ. ಸಿಎಂ‌ ಇದಕ್ಕೆ ಒಪ್ಪಿದ್ದಾರೆ ಎಂದು ಹೇಳಿದರು.

ಈ ಸಂದರ್ಭ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ, ಅಮಿತ್​ ಶಾ ಅವರನ್ನು ಆಧುನಿಕ ವಲ್ಲಭಭಾಯಿ ಪಟೇಲ್ ಎಂದು ಹೊಗಳಿದರು. ರಾಜ್ಯಕ್ಕೆ ಎನ್​ಎಫ್‌ಎಸ್‌ಎಲ್ ಅವಶ್ಯಕತೆ ಬಹಳ ಇದೆ. ಆಧುನಿಕತೆ ಹೆಚ್ಚಾದಂತೆ ತಂತ್ರಜ್ಞಾನ ಬಳಕೆ ಹೆಚ್ಚಾಗುತ್ತಿದೆ. ನಾವು ಮೊದಲು ಈ ಸೈಬರ್ ಕ್ರೈಂ ಗಳ ಬಗ್ಗೆ ಕೇಳಿರಲಿಲ್ಲ. ಸದ್ಯ ಹೆಚ್ಚು ಚಾಲ್ತಿಯಲ್ಲಿದೆ. ಕಾನೂನು ಮತ್ತು ಟೆಕ್ನಾಲಜಿಯಲ್ಲಿ ನಾವು ಬಹಳ ಮುಂದೆ ಇದ್ದೇವೆ. ಕ್ರೈಮ್ ಆದರೆ ಎಫ್ ಎಸ್ ಎಲ್ ವರದಿ ಬರುವುದು ತಡವಾಗುತ್ತಿದೆ. ಹೀಗಾಗಿ ನಾನು ಗೃಹ ಸಚಿವ ಇದ್ದಾಗ 2 ರೀಜಿನಲ್ ಸೆಂಟರ್ ಗಳನ್ನು ತೆರೆದಿದ್ದೆ ಎಂದು ಹೇಳಿದರು.

ಕೇಂದ್ರ ಸಚಿವ ಜೋಶಿ ಮಾತನಾಡಿ, ವಲ್ಲಭಭಾಯಿ ಪಟೇಲರ ನಂತರ ಗೃಹ ಸಚಿವರ ಕಾರ್ಯ ಏನು ಎಂಬುದನ್ನು ಅಮಿತ್ ಶಾ ತೋರಿದ್ದಾರೆ. ಮೋದಿಯವರು ಪ್ರಧಾನಿ ಆದ ನಂತರ ಅನೇಕ ಪ್ರಥಮಗಳು ಆಗಿವೆ. ಜಗತ್ತಿನಲ್ಲೇ ಮೊದಲು ಫಾರೆನ್ಸಿಕ್​ ವಿವಿ ಆಗಿದ್ದು‌ ಗುಜರಾತ್ ನಲ್ಲಿ. ಇಲ್ಲಿ‌ ಕಲಿತವರಿಗೆ ಕೆಲಸ ಗ್ಯಾರಂಟಿ. ಇನ್ನು ಇಲ್ಲಿ ಕ್ಯಾಂಪಸ್​ ಬರಲು ಪ್ರಧಾನಿ ಮಾರ್ಗದರ್ಶನದಂತೆ ಅಮಿತ್ ಶಾ ಕೆಲಸ ಮಾಡಿದ್ದಾರೆ. ಈ ಜಾಗ ಕೊಟ್ಟ ಕೃಷಿ ವಿವಿಗೆ ಮತ್ತು ಸೂಚನೆ ಕೊಟ್ಟ ಸಿಎಂಗೆ ಧನ್ಯವಾದ ತಿಳಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!