October 15, 2026
Thursday, October 15, 2026
spot_img

ಹಾರಂಗಿ ಜಲಾಶಯದಿಂದ ನಾಲ್ಕು ಸಾವಿರ ಕ್ಯುಸೆಕ್ ನೀರು ಬಿಡುಗಡೆ: ನದಿ ತೀರದ ನಿವಾಸಿಗಳಿಗೆ ಮುನ್ನೆಚ್ಚರಿಕೆ

ಹೊಸದಿಗಂತ ವರದಿ ಮಡಿಕೇರಿ:

ಕುಶಾಲನಗರ ಜಿಲ್ಲೆಯ ಪ್ರಮುಖ ಜಲಾಶಯವಾದ  ಹಾರಂಗಿ ಅಣೆಕಟ್ಟೆ ಬಹುತೇಕ ಭರ್ತಿಯಾದ ಹಿನ್ನೆಲೆಯಲ್ಲಿ ಅಣೆಕಟ್ಟೆಯ ನಾಲ್ಕು ಕ್ರೆಸ್ಟ್ ಗೇಟ್’ಗಳ ಮೂಲಕ ನದಿಗೆ 4000 ಕ್ಯುಸೆಕ್ ನೀರನ್ನು ಹೊರಬಿಡಲಾಗುತ್ತಿದೆ.

ಮಳೆ ಕೊರತೆಯ ನಡುವೆಯೂ ರಾಜ್ಯದಲ್ಲಿ ಭರ್ತಿಯಾದ ಮೊದಲ ಜಲಾಶಯ ಇದಾಗಿದ್ದು, ಜಲಾನಯನ ಪ್ರದೇಶದಲ್ಲಿ ಮತ್ತಷ್ಟು ಮಳೆಯಾಗುವ ನಿರೀಕ್ಷೆ ಇರುವುದರಿಂದ ಅಣೆಕಟ್ಟೆಯ ಸುರಕ್ಷತೆಯ ದೃಷ್ಟಿಯಿಂದ ಮತ್ತು ನೀರಿನ ಸಮತೋಲನ ಕಾಯ್ದುಕೊಳ್ಳುವ ದಿಸೆಯಲ್ಲಿ ಶನಿವಾರ ಅಪರಾಹ್ನ ಸಂಪ್ರದಾಯದಂತೆ ಕ್ರೆಸ್ಟ್ ಗೇಟ್’ಗಳಿಗೆ ಪೂಜೆ ಸಲ್ಲಿಸಿ, ಅಣೆಕಟ್ಟೆಯ ಕೆಳ ಭಾಗದ ಗ್ರಾಮಗಳ ಮತ್ತು ಹಾರಂಗಿ ಹಾಗೂ ಕಾವೇರಿ ನದಿ ತೀರದ ಜನ ಜಾನುವಾರುಗಳ ಸಂರಕ್ಷಣೆಯ ದೃಷ್ಟಿಯಿಂದ ಮುನ್ನೆಚ್ಚರಿಕೆ ಕ್ರಮವಾಗಿ ಸೈರನ್ ಮೊಳಗಿಸಿ ನಾಲ್ಕು ಕ್ರೆಸ್ಟ್ ಗೇಟ್’ಗಳ ಮೂಲಕ ಹಂತ ಹಂತವಾಗಿ ನೀರನ್ನು ನದಿಗೆ ಹರಿಸಲಾಯಿತು.

ಜಲಾಶಯಕ್ಕೆ ನಾಲ್ಕು ಸಾವಿರ ಕ್ಯುಸೆಕ್ ನೀರು ಹರಿದುಬರುತ್ತಿದ್ದು, ಅಷ್ಟೇ ಪ್ರಮಾಣದ ನೀರನ್ನು ಹೊರಬಿಡಲಾಗುತ್ತಿದೆ.

ಈ ಸಂದರ್ಭ ಕುಶಾಲನಗರ ತಾಲೂಕು ಹೆಚ್ಚುವರಿ ತಹಶೀಲ್ದಾರ್ ಕೆ.ಕೆ‌. ಕೃಷ್ಣಮೂರ್ತಿ, ನೀರಾವರಿ ಇಲಾಖೆಯ ಅಧೀಕ್ಷಕ ಅಭಿಯಂತರ ಸತೀಶ್,  ಕಾರ್ಯಪಾಲಕ ಅಭಿಯಂತರ ಎಂ.ಎಸ್.ಮಹೇಶ್, ಸಹಾಯಕ ಕಾರ್ಯಪಾಲಕ ಅಭಿಯಂತರ ಐ. ಕೆ. ಪುಟ್ಟಸ್ವಾಮಿ, ಅಣೆಕಟ್ಟೆಯ ಉಸ್ತುವಾರಿ ಇಂಜಿನಿಯರ್ ಕಿರಣ್ ದೇವಯ್ಯ ಸೇರಿದಂತೆ ಸಿಬ್ಬಂದಿ ವರ್ಗದವರು ಹಾಜರಿದ್ದರು.

Must Read