ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೇರಳದಲ್ಲಿ ಮಹಿಳೆಯರಿಗಾಗಿ ಆರಂಭಿಸಲಾದ ‘ಪ್ರಿಯದರ್ಶಿನಿ’ ಉಚಿತ ಬಸ್ ಪ್ರಯಾಣ ಯೋಜನೆ ಮೊದಲ ದಿನವೇ ಭಾರೀ ಯಶಸ್ಸು ಕಂಡಿದ್ದು, ಒಂದೇ ದಿನದಲ್ಲಿ ಸುಮಾರು 13 ಲಕ್ಷಕ್ಕೂ ಹೆಚ್ಚು ಮಹಿಳೆಯರು ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಉಚಿತವಾಗಿ ಪ್ರಯಾಣಿಸಿದ್ದಾರೆ.
ಈ ಅಂಕಿ-ಅಂಶ ಕೇವಲ ಒಂದು ಸಂಖ್ಯೆ ಅಲ್ಲ. ಇದು ಕೇರಳದ ಸಾರ್ವಜನಿಕ ಸಾರಿಗೆ ವ್ಯವಸ್ಥೆಯಲ್ಲಿ ದೊಡ್ಡ ಬದಲಾವಣೆಯ ಸೂಚನೆ ಎಂದು ವಿಶ್ಲೇಷಿಸಲಾಗುತ್ತಿದೆ. ಕಳೆದ ಸೋಮವಾರ ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಸುಮಾರು 7.34 ಲಕ್ಷ ಮಹಿಳೆಯರು ಪ್ರಯಾಣಿಸಿದ್ದರು. ಆದರೆ ಉಚಿತ ಪ್ರಯಾಣ ಯೋಜನೆ ಜಾರಿಯಾದ ಮೊದಲ ದಿನವೇ ಆ ಸಂಖ್ಯೆ 13.29 ಲಕ್ಷಕ್ಕೆ ಏರಿಕೆಯಾಗಿದೆ. ಬಸ್ ನಿಲ್ದಾಣಗಳು, ನಗರ ಮಾರ್ಗಗಳು ಮತ್ತು ಗ್ರಾಮೀಣ ಪ್ರದೇಶಗಳಲ್ಲಿಯೂ ಮಹಿಳೆಯರ ಸಂಚಾರದಲ್ಲಿ ಗಮನಾರ್ಹ ಏರಿಕೆ ಕಂಡುಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ:
ಸಾರಿಗೆ ತಜ್ಞರ ಪ್ರಕಾರ, ಇದುವರೆಗೆ ಖಾಸಗಿ ಬಸ್‌ಗಳನ್ನು ಬಳಸುತ್ತಿದ್ದ ಅನೇಕ ಮಹಿಳೆಯರು ಈಗ ಸರ್ಕಾರಿ ಬಸ್‌ಗಳತ್ತ ಮುಖ ಮಾಡಿದ್ದಾರೆ. ದಿನನಿತ್ಯದ ಕೆಲಸ, ಕಾಲೇಜು, ಮಾರುಕಟ್ಟೆ, ಆಸ್ಪತ್ರೆ ಮತ್ತು ಇತರ ಅಗತ್ಯಗಳಿಗಾಗಿ ಸಂಚರಿಸುವ ಮಹಿಳೆಯರಿಗೆ ಈ ಯೋಜನೆ ದೊಡ್ಡ ಆರ್ಥಿಕ ನೆರವಾಗಲಿದೆ ಎನ್ನಲಾಗಿದೆ.
ಖಾಸಗಿ ಬಸ್ ವಲಯದಲ್ಲಿ ಆತಂಕ
ಮಹಿಳೆಯರಿಗೆ ಖುಷಿ ನೀಡಿರುವ ಈ ಯೋಜನೆ ಖಾಸಗಿ ಬಸ್ ಮಾಲೀಕರಲ್ಲಿ ಆತಂಕ ಹುಟ್ಟಿಸಿದೆ. ಉಚಿತ ಪ್ರಯಾಣ ಇರುವ ಮಾರ್ಗಗಳಲ್ಲಿ ಮಹಿಳೆಯರು ಸಹಜವಾಗಿಯೇ ಕೆಎಸ್‌ಆರ್‌ಟಿಸಿ ಬಸ್‌ಗಳನ್ನು ಆಯ್ಕೆ ಮಾಡಬಹುದು. ಇದರ ಪರಿಣಾಮವಾಗಿ ಖಾಸಗಿ ಬಸ್‌ಗಳ ಆದಾಯದಲ್ಲಿ ದೊಡ್ಡ ಕುಸಿತ ಉಂಟಾಗುವ ಭೀತಿ ವ್ಯಕ್ತವಾಗಿದೆ. ಈಗಾಗಲೇ ಇಂಧನ ಬೆಲೆ ಏರಿಕೆ, ಚಾಲಕ-ನಿರ್ವಾಹಕರ ವೇತನ, ವಾಹನ ನಿರ್ವಹಣೆ ಮತ್ತು ಸಂಚಾರ ದಟ್ಟಣೆ ಸಮಸ್ಯೆಗಳಿಂದ ಬಳಲುತ್ತಿರುವ ಖಾಸಗಿ ಸಾರಿಗೆ ಕ್ಷೇತ್ರಕ್ಕೆ ಇದು ಮತ್ತೊಂದು ಸವಾಲಾಗಿ ಪರಿಣಮಿಸಿದೆ. ಮೊದಲ ದಿನದ ಅಂಕಿ-ಅಂಶಗಳು ಈಗಾಗಲೇ ಗಮನ ಸೆಳೆದಿವೆ. ಮುಂದಿನ ದಿನಗಳಲ್ಲಿ ಪ್ರಯಾಣಿಕರ ಸಂಖ್ಯೆ ಇನ್ನಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎಂದು ಕೆಎಸ್‌ಆರ್‌ಟಿಸಿ ನಿರೀಕ್ಷಿಸಿದೆ.



