ಹೊಸದಿಗಂತ ವರದಿ, ಶಿವಮೊಗ್ಗ :
ಮಲೆನಾಡು ಪ್ರದೇಶದಲ್ಲಿ ಕಾಣಿಸಿಕೊಳ್ಳುತ್ತಿರುವ ಮಂಗನ ಕಾಯಿಲೆ ಸಂಬಂಧ ಲಸಿಕೆ ವಿತರಣೆ ಮತ್ತು ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಬೆಂಗಳೂರಿನಲ್ಲಿ ಆರೋಗ್ಯ ಸಚಿವರ ಜೊತೆ ಫೆಬ್ರವರಿ 13 ಅಥವಾ 14 ರಂದು ಸಭೆ ನಡೆಸುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ತಿಳಿಸಿದರು.
ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಶುಕ್ರವಾರ ಸಂಜೆ ಮಂಗನ ಕಾಯಿಲೆ ನಿಯಂತ್ರಣ ಸಂಬಂಧ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮಾತನಾಡಿದರು.
ಮಂಗನ ಕಾಯಿಲೆ ಮಲೆನಾಡು ಪ್ರದೇಶದಲ್ಲಿ ಸಾವು ನೋವಿಗೆ ಕಾರಣವಾಗುತ್ತಿದೆ ಆದರೂ ಇದುವರಿಗೆ ಇದಕ್ಕೊಂದು ಶಾಶ್ವತ ಪರಿಹಾರ ಕಂಡುಕೊಳ್ಳಲು ಆಗಿಲ್ಲ. ಇಷ್ಟು ವರ್ಷದವರೆಗೆ ನೀಡುತ್ತಿದ್ದ ಲಸಿಕೆಯನ್ನು ಕೂಡ ನಿಲ್ಲಿಸಲಾಗಿದೆ. ಲಸಿಕೆಯನ್ನು ಪುನಃ ನೀಡುವ ಬಗ್ಗೆ ಆರೋಗ್ಯ ಸಚಿವರು ಮತ್ತು ಹಿರಿಯ ಅಧಿಕಾರಿಗಳ ಜೊತೆ ಸಮಾಲೋಚನೆ ನಡೆಸಲಾಗುವುದು. ಮಲೆನಾಡು ಪ್ರದೇಶದ ಶಾಸಕರನ್ನು ಸಭೆಗೆ ಆಹ್ವಾನಿಸಲಾಗುವುದು ಎಂದು ತಿಳಿಸಿದರು.
ಮಂಗನ ಕಾಯಿಲೆಯಿಂದ ಸಾಕಷ್ಟು ಮಂದಿ ಮೃತಪಟ್ಟಿದ್ದಾರೆ . ಸಾವಿಗೆ ಪರಿಹಾರ ನೀಡಿದರೆ ನಮ್ಮ ಕೆಲಸ ಮುಗಿದಂತೆ ಅಲ್ಲ. ಇದುವರೆಗೂ ಸೂಕ್ತ ಲಸಿಕೆ ಇಲ್ಲದಿರುವುದು ನಾಚಿಕೆಯ ಸಂಗತಿ. ಈ ಬಗ್ಗೆ ಚರ್ಚೆ ನಡೆಸಲಾಗುವುದು ಎಂದು ತಿಳಿಸಿದರು.
ತೀರ್ಥಹಳ್ಳಿ ಶಾಸಕ ಆರಗ ಜ್ನಾನೇಂದ್ರ ಮಾತನಾಡಿ , ಮಲೆನಾಡಿನಲ್ಲಿ ಮನೆಗಳು ಇರುವುದೇ ಕಾಡಿನಲ್ಲಿ .ಜಾನುವಾರು, ನಾಯಿಗಳು ಕಾಡಿಗೆ ಹೋಗಿ ಬರುತ್ತವೆ. ಉಣ್ಣೆ ಇವುಗಳಿಂದ ಮನುಷ್ಯರಿಗೆ ಕಚ್ಚುತ್ತವೆ. ಹಾಗಾಗಿ ಕಾಯಿಲೆ ಬರುತ್ತಿದೆ. ಇದಕ್ಕೆ ಸೂಕ್ತ ಲಸಿಕೆ ಅಗತ್ಯವಿದೆ. ಆದರೆ ಕಡಿಮೆ ಪ್ರಮಾಣದ ಲಸಿಕೆ ಉತ್ಪಾದನೆ ಮಾಡಬೇಕಾಗಿರುವುದರಿಂದ ಲಸಿಕೆ ಉತ್ಪಾದಕ ಕಂಪನಿಗಳು ಮುಂದೆ ಬರುತ್ತಿಲ್ಲ. ಸರ್ಕಾರ ಇದಕ್ಕೆ ಏನಾದರೂ ಒಂದು ಪರಿಹಾರ ಕಂಡುಹಿಡಿಯಬೇಕಾಗಿದೆ ಎಂದರು.
ಕಳೆದ ತಿಂಗಳು ಹೊಸನಗರ ತಾಲೂಕಿನಲ್ಲಿ ಮಂಗನ ಕಾಯಿಲೆಯಿಂದ ಓರ್ವ ಯುವತಿ ಮೃತ ಪಟ್ಟಿದ್ದಾಳೆ, ಇದೀಗ ತೀರ್ಥಹಳ್ಳಿಯ ಮತ್ತೋರ್ವ ಯುವಕ ಮಣಿಪಾಲ್ ಆಸ್ಪತ್ರೆಗೆ ದಾಖಲಾಗುತ್ತಿದ್ದಾನೆ . ಇದನ್ನು ಕಂಡು ಜನತೆ ಭಯಭೀತರಾಗಿದ್ದಾರೆ. ಹಾಗಾಗಿ ಸೂಕ್ತ ಪರಿಹಾರದ ಅವಶ್ಯಕತೆ ಇದೆ ಎಂದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ರಾಜೇಶ್ ಸುರುಗಿಹಳ್ಳಿ ಮಗನ ಕಾಯಿಲೆ ಹರಡುವ ಬಗ್ಗೆ ಇದುವರೆಗಿನ ಸಾವುಗಳ ಬಗ್ಗೆ ಸಭೆಯಲ್ಲಿ ಮಾಹಿತಿ ನೀಡಿದರು ಜಿಲ್ಲಾಧಿಕಾರಿ ಡಾ. ಗುರುದತ್ತ ಹೆಗಡೆ, ಜಿಪಂ ಸಿಇಓ ಸ್ನೇಹನ್ ಸುಧಾಕರ್ ಲೋಖಂಡೆ, ಎಸ್ಪಿ ಮಿಥುನ್ ಕುಮಾರ್ , ಆರೋಗ್ಯ ಇಲಾಖೆ ಅಧಿಕಾರಿಗಳು ಹಾಜರಿದ್ದರು.