Thursday, December 1, 2022

Latest Posts

ಹಿಮಾಚಲ ಚುನಾವಣಾ ಕಣದಲ್ಲಿ 128 ಕೋಟಿಯ ಶ್ರೀಮಂತ, 3,000 ರೂ. ಹೊಂದಿರುವ ಬಡವ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಹಿಮಾಚಲ ಪ್ರದೇಶ ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ಸಮೀಪಿಸಿದೆ. ಆಡಳಿತಾರೂಢ ಬಿಜೆಪಿ ಮತ್ತೊಂದು ಅವಧಿಗೆ ತನ್ನ ಪ್ರಾಬಲ್ಯವನ್ನು ಮುಂದುವರೆಸಲು ನೋಡುತ್ತಿದೆ. ಮತ್ತೊಂದೆಡೆ ಕಾಂಗ್ರೆಸ್ ಮತ್ತು ಹೊಸತಾಗಿ ಕಣಕ್ಕೆ ಪ್ರವೇಶಿಸಿರುವ ಎಎಪಿ ಕೇಸರಿ ಪಕ್ಷವನ್ನು ಸೋಲಿಸುವ ಗುರಿಯನ್ನು ಹೊಂದಿವೆ.
ರಾಜ್ಯದ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿರುವ  ಅತ್ಯಂತ ಶ್ರೀಮಂತ ಮತ್ತು ಬಡ ಅಭ್ಯರ್ಥಿಗಳ ಪಟ್ಟಿ ಇಲ್ಲಿದೆ:
ಇವರೇ ನೋಡಿ ಅತ್ಯಂತ ಶ್ರೀಮಂತ ಅಭ್ಯರ್ಥಿ!
ಆಡಳಿತಾರೂಢ ಭಾರತೀಯ ಜನತಾ ಪಕ್ಷದ ಚೋಪಾಲ್ ಕ್ಷೇತ್ರದ ಶಾಸಕ ಬಲ್ಬೀರ್ ಸಿಂಗ್ ವರ್ಮಾ ಅವರು ಈ ಬಾರಿಯ ಚುನಾವಣೆಯಲ್ಲಿ ಅತ್ಯಂತ ಶ್ರೀಮಂತ ಅಭ್ಯರ್ಥಿಯಾಗಿದ್ದಾರೆ. ವರ್ಮಾ ಅವರ ಒಟ್ಟು ಆಸ್ತಿ 128 ಕೋಟಿ ರೂ. ಎರಡನೇ ಸ್ಥಾನದಲ್ಲಿ ಶಿಮ್ಲಾ ಗ್ರಾಮಾಂತರ ಕಾಂಗ್ರೆಸ್ ಶಾಸಕ ವಿಕ್ರಮಾದಿತ್ಯ ಸಿಂಗ್ ಇದ್ದಾರೆ. ಸಿಂಗ್ 101 ಕೋಟಿಗೂ ಅಧಿಕ ಮೌಲ್ಯದ ಆಸ್ತಿ ಘೋಷಿಸಿದ್ದಾರೆ.
ಮುಂದಿನ ಸಾಲಿನಲ್ಲಿ ದಿವಂಗತ ಕಾಂಗ್ರೆಸ್ ನಾಯಕ ಮತ್ತು ರಾಜ್ಯ ಕ್ಯಾಬಿನೆಟ್ ಸಚಿವ ಗುರುಮುಖ್ ಸಿಂಗ್ ಬಾಲಿ ಅವರ ಪುತ್ರ ಆರ್ ಎಸ್ ಬಾಲಿ ಇದ್ದಾರೆ. ನಗ್ರೋಟಾ ಕ್ಷೇತ್ರದ ಬಾಲಿ ಕ್ಷೇತ್ರದಿಂದ ಸ್ಪರ್ಧಿಸುತ್ತಿರುವ ಕಾಂಗ್ರೆಸ್ ಅಭ್ಯರ್ಥಿ ಬಾಲಿ ಒಟ್ಟು ಆಸ್ತಿ 92 ಕೋಟಿ ರೂ. ಈ ಪಟ್ಟಿಯಲ್ಲಿ 4ನೇ ಸ್ಥಾನದಲ್ಲಿರುವ ಮತ್ತೊಬ್ಬ ಕಾಂಗ್ರೆಸ್ ನಾಯಕ ರಾಮ್ ಕುಮಾರ್ ಡೂನ್ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ.  ಕುಮಾರ್ ಅವರ ಒಟ್ಟು ಆಸ್ತಿ 73 ಕೋಟಿ ರೂಗಳಾಗಿದೆ.
ಶಹಪುರ್ ಕ್ಷೇತ್ರದಿಂದ ಸ್ಪರ್ಧಿಸಿರುವ ಆಮ್ ಆದ್ಮಿ ಅಭಿಷೇಕ್ ಸಿಂಗ್ 65 ಕೋಟಿ ರೂ.ಗೂ ಅಧಿಕ ಆಸ್ತಿ ಹೊಂದಿದ್ದು, ಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದ್ದಾರೆ.

ಅತ್ಯಂತ ಬಡ ಅಭ್ಯರ್ಥಿಗಳು:
ರಾಷ್ಟ್ರೀಯ ದೇವಭೂಮಿ ಪಕ್ಷದ ಕೈಲಾಶ್ ಚಂದ್ ಅವರು ಈ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ಅತ್ಯಂತ ಬಡ ಅಭ್ಯರ್ಥಿಯಾಗಿದ್ದಾರೆ. ಸರ್ಕಾಘಾಟ್ ಕ್ಷೇತ್ರದಿಂದ ಸ್ಪರ್ಧಿಸಿರುವ ಚಂದ್ ಅವರ ಒಟ್ಟು ಆಸ್ತಿ ಕೇವಲ 3,000 ರೂ.
ಚಂದ್ ನಂತರದ ಶ್ರೇಯಾಂಕವು ಹಿಂದೂ ಸಮಾಜ ಪಕ್ಷದ ನಾಯಕಿ ಅಮೃತಾ ಚೌಧರಿ ಅವರಿಗೆ ಸೇರಿದೆ.  ಭಟ್ಟಿಯಾಟ್ ಕ್ಷೇತ್ರದಿಂದ ಸ್ಪರ್ಧಿಸುತ್ತಿರುವ ಅಮೃತಾ ಒಟ್ಟು ಆಸ್ತಿ ಮೌಲ್ಯ 5,500 ರೂ. ಹಮೀರ್‌ಪುರ ಕ್ಷೇತ್ರದಿಂದ ಸ್ಪರ್ಧಿಸಿರುವ ಸ್ವತಂತ್ರ ಅಭ್ಯರ್ಥಿ ಆಶಿಶ್ ಕುಮಾರ್ ಅವರ ಹೆಸನಲ್ಲಿ ಕೇವಲ 7,440 ರೂ.ಗಳಿದ್ದು ಮೂರನೇ ಬಡ ಅಭ್ಯರ್ಥಿಯಾಗಿದ್ದಾರೆ.
ನಾಲ್ಕು ಮತ್ತು ಐದನೇ ಸ್ಥಾನದಲ್ಲಿ ಸ್ವತಂತ್ರ ಅಭ್ಯರ್ಥಿಗಳಾದ ಚಂದರ್ ಭಾನ್ ಮತ್ತು ಬಾಬಾ ಲಾಲ್ ಗಿರಿ ಇದ್ದಾರೆ. ಸುಳ್ಯದಿಂದ ಸ್ಪರ್ಧಿಸಿರುವ ಭಾನ್ ಒಟ್ಟು 10,000 ರೂಪಾಯಿ ಆಸ್ತಿ ಹೊಂದಿದ್ದರೆ, ಜೋಗಿಂದರ್‌ನಗರ ಕ್ಷೇತ್ರದಿಂದ ಸ್ಪರ್ಧಿಸಿರುವ ಗಿರಿ ಕೇವಲ 21,000 ರೂಪಾಯಿ ಮೌಲ್ಯದ ಆಸ್ತಿ ಹೊಂದಿದ್ದಾರೆ.
ಹಿಮಾಚಲ ಪ್ರದೇಶದಲ್ಲಿ ಒಂದೇ ಹಂತದಲ್ಲಿ ನವೆಂಬರ್ 12 ರಂದು ಚುನಾವಣೆ ನಡೆಯಲಿದ್ದು, ಡಿಸೆಂಬರ್ 8 ರಂದು ಮತ ಎಣಿಕೆ ನಡೆಯಲಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!