February 16, 2026
Monday, February 16, 2026
spot_img

‘ಸಿರಿಧಾನ್ಯದಿಂದ ಮೈಕ್ರೋಚಿಪ್‌’ವರೆಗೆ…ಗಣರಾಜ್ಯೋತ್ಸವ ಪರೇಡ್‌ಗೆ ಕರ್ನಾಟಕದ ಸ್ತಬ್ಧಚಿತ್ರ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಜ.26ರಂದು ನಡೆಯುವ ಈ ಬಾರಿಯ ಗಣರಾಜ್ಯೋತ್ಸವದ ಪಥಸಂಚಲನಕ್ಕೆ ಕರ್ನಾಟಕದ ‘ಸಿರಿಧಾನ್ಯದಿಂದ ಮೈಕ್ರೋಚಿಪ್‌ವರೆಗೆ (ಮಿಲ್ಲೆಟ್ ಟು ಮೈಕ್ರೋಚಿಪ್) ಎನ್ನುವ ಸ್ತಬ್ಧಚಿತ್ರ ಆಯ್ಕೆಯಾಗಿದೆ.

ಈ ಕುರಿತು ರಾಜ್ಯ ಸರ್ಕಾರ ಮಾಹಿತಿ ಹಂಚಿಕೊಂಡಿದೆ. ಕೃಷಿ, ಕೈಗಾರಿಕೆ ಹಾಗೂ ಆಧುನಿಕ ತಂತ್ರಜ್ಞಾನದ ಬಳಕೆಯಲ್ಲಿ ಮುಂಚೂಣಿಯಲ್ಲಿರುವ ರಾಜ್ಯ ಪಯಣವನ್ನು ಈ ಸ್ತಬ್ಧಚಿತ್ರ ಸಂಕೇತಿಸುತ್ತದೆ.

ಕೃಷಿಯಿಂದ ಕೈಗಾರಿಕೆಯವರೆಗೆ ಹಾಗೂ ಆಧುನಿಕ ತಂತ್ರಜ್ಞಾನದ ಬಳಕೆಯಲ್ಲಿ ನಮ್ಮ ರಾಜ್ಯ ಮುಂಚೂಣಿಯಲ್ಲಿದೆ. ಈ ಪಯಣವನ್ನು ಸಂಕೇತಿಸುವಂತೆ, ಸಿರಿಧಾನ್ಯದಿಂದ ಮೈಕ್ರೋಚಿಪ್ ವರೆಗೆ (ಮಿಲ್ಲೆಟ್ ಟು ಮೈಕ್ರೋಚಿಪ್) ಎನ್ನುವ ಸ್ತಬ್ಧಚಿತ್ರವನ್ನು 2026ರ ಜನವರಿ 26ರಂದು ನವದೆಹಲಿಯಲ್ಲಿ ನಡೆಯುವ ಗಣರಾಜ್ಯೋತ್ಸವದ ಅಂಗವಾಗಿ ಕೆಂಪು ಕೋಟೆಯಲ್ಲಿ ಆಯೋಜಿಸುವ ಭಾರತ ಪರ್ವದಲ್ಲಿ ಕರ್ನಾಟಕವು ಪ್ರದರ್ಶಿಸುತ್ತಿದೆ.

ಕರ್ನಾಟಕ ರಾಜ್ಯದ ಪರವಾಗಿ ಗಣರಾಜ್ಯೋತ್ಸವದ ಪಥಸಂಚಲನ ಮತ್ತು ಭಾರತ ಪರ್ವದಲ್ಲಿ ಪಾಲ್ಗೊಳ್ಳುವ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಪ್ರತಿ ವರ್ಷ ತನ್ನ ವೈಶಿಷ್ಟ್ಯಪೂರ್ಣ ಸ್ತಬ್ಧಚಿತ್ರಗಳ ಮೂಲಕವೇ ದೇಶದ ಗಮನ ಸೆಳೆಯುತ್ತಿದೆ. ಈ ಬಾರಿ ಕೃಷಿ, ಶಿಕ್ಷಣ, ವಿಜ್ಞಾನ, ಉನ್ನತ ತಂತ್ರಜ್ಞಾನ ಹಾಗೂ ಮೈಕ್ರೋಚಿಪ್‍ಗಳ ಉತ್ಪಾದನೆಯಲ್ಲಿ ಸಾಧಿಸಿರುವ ಸಮತೋಲನಯುತ ಪ್ರಗತಿಯನ್ನು ಸ್ತಬ್ಧಚಿತ್ರದಲ್ಲಿ ತೋರಿಸಲಾಗಿದೆ ಎಂದು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಆಯುಕ್ತರಾದ ಹೇಮಂತ್ ಎಂ ನಿಂಬಾಳ್ಕರ್ ಅವರು ತಿಳಿಸಿದ್ದಾರೆ.

ಸಿರಿಧಾನ್ಯಗಳ ಉತ್ಪಾದನೆ ಮತ್ತು ಪೌಷ್ಟಿಕ ಆಹಾರದ ಬಳಕೆಯನ್ನು ಉತ್ತೇಜಿಸುವಲ್ಲಿ ಕರ್ನಾಟಕವು ದೇಶದ ಪ್ರಮುಖ ರಾಜ್ಯಗಳಲ್ಲಿ ಒಂದಾಗಿದೆ. ಮಾಹಿತಿ ತಂತ್ರಜ್ಞಾನ ಹಾಗೂ ಜೈವಿಕ ತಂತ್ರಜ್ಞಾನ ಕ್ಷೇತ್ರಗಳಲ್ಲಿ ಬೆಂಗಳೂರು ಜಾಗತಿಕವಾಗಿ ಗಮನ ಸೆಳೆದಿದೆ. ಮೈಕ್ರೋಚಿಪ್, ಎಲೆಕ್ಟ್ರಾನಿಕ್ಸ್ ಹಾಗೂ ಸೆಮಿಕಂಡಕ್ಟರ್ ವಲಯಗಳಲ್ಲಿನ ಆವಿಷ್ಕಾರಗಳು ಕರ್ನಾಟಕವನ್ನು ಶ್ರೇಷ್ಠ ತಂತ್ರಜ್ಞಾನ ಕೇಂದ್ರವಾಗಿಸಿದೆ. ಇವೆಲ್ಲವೂ ಈ ಬಾರಿ ಸ್ತಬ್ಧಚಿತ್ರದಲ್ಲಿ ಮೇಳೈಸಿವೆ.

ಸಂಶೋಧನೆ, ನವೀನತೆ ಮತ್ತು ಕೌಶಲ್ಯಾಭಿವೃದ್ಧಿಗೆ ನೀಡಲಾಗಿರುವ ವಿಶೇಷ ಆದ್ಯತೆಯ ಮೂಲಕ ಯುವಶಕ್ತಿಗೆ ಉದ್ಯಮಶೀಲ ಅವಕಾಶಗಳನ್ನು ಒದಗಿಸಿ, ಭವಿಷ್ಯದ ಆರ್ಥಿಕತೆಗೆ ಭದ್ರ ಬುನಾದಿಯನ್ನು ಕರ್ನಾಟಕ ನಿರ್ಮಿಸುತ್ತಿದೆ. ಹೂಡಿಕೆ ಸ್ನೇಹಿ ನೀತಿಗಳ ಮೂಲಕ ಉತ್ಪಾದನಾ ವಲಯದಲ್ಲಿ ಗರಿಷ್ಠ ಬೆಳವಣಿಗೆಯನ್ನು ಸಾಧಿಸಿರುವ ಕರ್ನಾಟಕವು ಕೈಗಾರಿಕಾ ಅಭಿವೃದ್ಧಿಯಲ್ಲಿಯೂ ಮುಂಚೂಣಿಯಲ್ಲಿದೆ. ಜೊತೆಗೆ, ಸ್ಟಾರ್ಟ್‌ಅಪ್ ಕ್ಯಾಪಿಟಲ್ ಆಫ್ ಇಂಡಿಯಾ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ರಾಜ್ಯವು ನವ ದೆಹಲಿಯಲ್ಲಿ ಪ್ರದರ್ಶಿಸುತ್ತಿರುವ ಈ ಸ್ತಬ್ಧಚಿತ್ರವು ಎಲ್ಲರ ಮನಸೂರೆಗೊಳ್ಳುವ ವಿಶ್ವಾಸವಿದೆ.

2026ರ ಜನವರಿ 26ರಂದು ನಡೆಯುವ ದೆಹಲಿ ಗಣರಾಜ್ಯೋತ್ಸವದ ಸ್ತಬ್ಧಚಿತ್ರಕ್ಕಾಗಿ ಇಲಾಖೆಯು ಕಿತ್ತೂರು ರಾಣಿ ಚೆನ್ನಮ್ಮ ಮತ್ತು ರಾಣಿ ಅಬ್ಬಕ್ಕದೇವಿ, ಕರ್ನಾಟಕ ಪುಷ್ಪ ವೈಭವ, ಹಲಗಲಿ ಬೇಡರು, ‘ಸಿರಿಧಾನ್ಯದಿಂದ ಮೈಕ್ರೋಚಿಪ್’ ವರೆಗೆ ಎಂಬ ನಾಲ್ಕು ವಿಷಯಗಳನ್ನು ಆಯ್ಕೆ ಮಾಡಿ ಕಳುಹಿಸಿತ್ತು.

ಮೊದಲ ಸಭೆಯಲ್ಲಿಯೇ ಸಿರಿಧಾನ್ಯದಿಂದ ಮೈಕ್ರೋಚಿಪ್‌ವರೆಗೆ ಎಂಬ ವಿಷಯವನ್ನು ಪರಿಣಿತರ ಸಮಿತಿಯು ಒಮ್ಮತದಿಂದ ಅಂತಿಮಗೊಳಿಸಿತ್ತು. ಅದಕ್ಕನುಗುಣವಾಗಿ ಮಣ್ಣಿನಲ್ಲಿ ಸಿರಿಧಾನ್ಯಗಳನ್ನು ಬೆಳೆಸಿದ ದೇಶೀಯ ಜ್ಞಾನದಿಂದ ಮೈಕ್ರೋಚಿಪ್‍ಗಳನ್ನು ಉತ್ಪಾದಿಸುವ ಸೂಕ್ಷ್ಮತೆಯನ್ನು ಈ ಸ್ತಬ್ಧಚಿತ್ರ ಮನಮುಟ್ಟುವಂತೆ ಕಟ್ಟಿಕೊಡುತ್ತದೆ.

ವಿಷಯ ಆಯ್ಕೆಯ ಬಳಿಕ ಅದನ್ನು ವಿವಿಧ ಸ್ತರಗಳನ್ನು ನಿರೂಪಿಸಬೇಕಾಗಿತ್ತು. ಕರ್ನಾಟಕದ ಬಗೆಗಿನ ಅಭಿಮಾನ, ನಾಡಿನ ಹಿರಿಮೆ ಹಾಗೂ ಸಂಸ್ಕೃತಿಯ ಮಹತ್ವವನ್ನು ಎತ್ತಿಹಿಡಿಯುವ ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರ ಪ್ರೋತ್ಸಾಹದ ನುಡಿಗಳೇ ಈ ಸವಾಲಿನ ಕೆಲಸಕ್ಕೆ ಮುನ್ನುಡಿ ಬರೆದವು. ವಾರ್ತಾ ಮತ್ತು ಸಾರ್ವಜನಿಕ ಸಂರ್ಪಕ ಇಲಾಖೆಯ ಕಾರ್ಯದರ್ಶಿಗಳಾದ ಶ್ರೀಮತಿ ಬಿ.ಬಿ. ಕಾವೇರಿ ಅವರ ಸಲಹೆ – ಸೂಚನೆಗಳು ಸ್ತಬ್ಧಚಿತ್ರದ ಕೆಲಸವನ್ನು ಸುಗಮವಾಗಿಸಿತ್ತು.

ಸ್ತಬ್ಧಚಿತ್ರದಲ್ಲಿ ಏನಿರಲಿದೆ?
ಸ್ತಬ್ಧಚಿತ್ರದ ಮುಂಭಾಗದಲ್ಲಿ ಉದಯಿಸುತ್ತಿರುವ ಸೂರ್ಯ ನಿರಂತರ ಪ್ರಗತಿ ಮತ್ತು ಚಲನಶೀಲತೆಯ ಸಂಕೇತವಾಗಿ ಹೊಳೆಯುತ್ತಿದೆ. ದೊಡ್ಡ ಮಡಿಕೆಗಳಲ್ಲಿ ಪ್ರದರ್ಶಿಸಲಾದ ವಿವಿಧ ಸಿರಿಧಾನ್ಯಗಳು ಕೃಷಿ ಸಮೃದ್ಧಿಯನ್ನು ತೋರಿಸುತ್ತವೆ. ಬೆಳೆದ ಫಸಲನ್ನು ಎತ್ತಿಹಿಡಿದಿರುವ ರೈತ, ಆತನ ಪತ್ನಿ ಹಾಗೂ ಉಲ್ಲಾಸದಿಂದ ಕಾಣಿಸುತ್ತಿರುವ ಮಕ್ಕಳು ಗ್ರಾಮೀಣ ಶಕ್ತಿಯ ಜೀವಂತ ಚಿತ್ರಣವಾಗಿದ್ದಾರೆ. ಮಧ್ಯಭಾಗದಲ್ಲಿ ತಿರುಗುತ್ತಿರುವ ಅಣುವಿನ ಮಾಲಿಕ್ಯೂಲ್‍ಗಳ ಮಾದರಿ ತಂತ್ರಜ್ಞಾನ ಪ್ರಗತಿಯನ್ನು ಸೂಚಿಸುತ್ತದೆ. ಕೃತಕ ಬುದ್ಧಿಮತ್ತೆಯ ರೋಬೋಟ್ ಕಂಪ್ಯೂಟರ್ ನಲ್ಲಿ ಕಾರ್ಯನಿರ್ವಹಿಸುತ್ತಿರುವುದು ಭವಿಷ್ಯದ ಆವಿಷ್ಕಾರಗಳ ಸಂಕೇತವಾಗಿದೆ. ಇಕ್ಕೆಲಗಳಲ್ಲಿ ಬಾಹ್ಯಾಕಾಶ ಕ್ಷೇತ್ರವನ್ನು ಪ್ರತಿನಿಧಿಸುವ ರಾಕೆಟ್ ಮತ್ತು ವಿಜ್ಞಾನಿ, ಟೆಲಿಮೆಡಿಸಿನ್ ಮೂಲಕ ಮಾರ್ಗದರ್ಶನ ನೀಡುತ್ತಿರುವ ವೈದ್ಯೆ ಹಾಗೂ ಕೃಷಿಭೂಮಿಯಲ್ಲಿ ಡ್ರೋನ್ ಬಳಸುತ್ತಿರುವ ಮಹಿಳೆಯು ವಿಜ್ಞಾನ, ಆರೋಗ್ಯ ಮತ್ತು ಆಧುನಿಕ ಕೃಷಿಯ ಸಮನ್ವಯವನ್ನು ತೋರಿಸುತ್ತಾರೆ. ಕೈಗಾರಿಕಾ ವಲಯವನ್ನು ಪ್ರತಿನಿಧಿಸುವಂತೆ ಯಂತ್ರೋಪಕರಣಗಳೊಂದಿಗೆ ಕಾರ್ಯನಿರ್ವಹಿಸುತ್ತಿರುವ ಕಾರ್ಮಿಕರು ಉತ್ಪಾದನಾ ಶಕ್ತಿಗೆ ಸಾಕ್ಷಿಯಾಗಿದ್ದಾರೆ.

ಇಡೀ ಸ್ತಬ್ಧಚಿತ್ರದ ಆಕರ್ಷಣೆಯ ಕೇಂದ್ರಬಿಂದುವಾಗಿ ಕೊನೆಯಲ್ಲಿ ಮಿನುಗುತ್ತಿರುವ ಮೈಕ್ರೋಚಿಪ್ ಹಾಗೂ ಬಂಗಾರದ ಬಣ್ಣದ ಸರ್ಕ್ಯೂಟ್‍ಗಳ ಮಧ್ಯೆ ರೋಬೋಟ್‍ನ ಮುಖವನ್ನು ಸಾಂಕೇತಿಕವಾಗಿ ಚಿತ್ರಿಸಲಾಗಿದೆ. ಇದು ಪರಂಪರೆಯಿಂದ ಪ್ರಗತಿಯತ್ತ, ಮಣ್ಣಿನಿಂದ ಯಂತ್ರಗಳತ್ತ ಸಾಗುತ್ತಿರುವ ಕರ್ನಾಟಕದ ಆತ್ಮನಿರ್ಭರ ಪಯಣದ ಸಾರವಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !