Wednesday, February 8, 2023

Latest Posts

ನಾಯಕತ್ವಕ್ಕಾಗಿ ಡಿಕೆಶಿಯಿಂದ ಪಾದಯಾತ್ರೆ ಡ್ರಾಮಾ: ನಳಿನ್ ಕುಮಾರ್ ಕಟೀಲು

ದಿಗಂತ ವರದಿ, ಮಂಗಳೂರು:

ರಾಜ್ಯದಲ್ಲಿ ಕೊರೋನಾ ಸೋಂಕು ಏರಿಕೆಯಾಗುತ್ತಿರುವುದರಿಂದ ಜನರ ಆರೋಗ್ಯದ ದೃಷ್ಟಿಯಿಂದ ಸರಕಾರ ಜಾರಿಗೊಳಿಸಿರುವ ಕಾನೂನುಗಳಿಗೆ ಕಾಂಗ್ರೆಸ್ ಗೌರವ ನೀಡದೆ, ಕೇವಲ ನಾಯಕತ್ವಕ್ಕಾಗಿ ಡಿಕೆಶಿ ಮೇಕೆದಾಟು ಪಾದಯಾತ್ರೆ ಎಂಬ ಡ್ರಾಮಾ ನಡೆಸುತ್ತಿದ್ದಾರೆ. ರಾಜ್ಯದ ನಾಗರಿಕರು ಎಲ್ಲವನ್ನು ಗಮನಿಸುತ್ತಿದ್ದು, ಮುಂದಿನ ದಿನಗಳಲ್ಲಿ ಇದಕ್ಕೆ ಸೂಕ್ತ ಉತ್ತರವನ್ನು ಕಾಂಗ್ರೆಸ್ ಪಕ್ಷಕ್ಕೆ ನೀಡಲಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ, ಸಂಸದ ನಳಿನ್ ಕುಮಾರ್ ಕಟೀಲು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮೇಕೆದಾಟು ಯೋಜನೆಯ ವಿರುದ್ಧ ನ್ಯಾಯಾಲಯದಲ್ಲಿರುವ ದಾವೆ ಇತ್ಯರ್ಥವಾದ ತಕ್ಷಣ ರಾಜ್ಯ ಸರಕಾರ ಸೂಕ್ತ ಕ್ರಮ ಕೈಗೊಳ್ಳಲಿದೆ. ಆದರೆ ಕಾಂಗ್ರೆಸ್ ಪಕ್ಷಕ್ಕೆ ಜನರ ಬಗ್ಗೆ ಕಾಳಜಿ ಇದ್ದರೆ ತಮಿಳುನಾಡಿನಲ್ಲಿರುವ ತಮ್ಮವರ ಜತೆ ಮಾತುಕತೆ ನಡೆಸಿ ವಿವಾದ ಇತ್ಯರ್ಥ ಪಡಿಸಿಬಹುದಲ್ಲವೇ? ವಿವಾದ ಕೋರ್ಟ್‌ಲ್ಲಿರುವ ವಿಷಯ ಗೊತ್ತಿದ್ದರೂ, ಜನತೆಗೆ ತಪ್ಪು ಸಂದೇಶ ನೀಡಲು ಪ್ರಯತ್ನಿಸುವ ನಿಮ್ಮ ರಾಜಕೀಯ ಉದ್ದೇಶದ ಅರಿವು ಜನತೆಗಿದೆ. ರಾಜ್ಯದಲ್ಲಿ ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಇದ್ದ ಸಂದರ್ಭ 2014ರಿಂದ 2018ರ ವರೆಗೆ ಯೋಜನೆಯ ಡಿಪಿಆರ್‌ನ್ನು ಯಾಕೆ ಸುಮ್ಮನೆ ಇಟ್ಟುಕೊಂಡಿದ್ದೀರಿ? ರಾಜ್ಯದ ಜನತೆಗೆ ಈ ಬಗ್ಗೆ ಡಿಕೆಶಿ ಉತ್ತರಿಸಲಿ ಎಂದು ಅವರು ಹೇಳಿದ್ದಾರೆ.
ನೆಲದ ಕಾನೂನಿನ ಬಗ್ಗೆ ಗೌರವವಿಲ್ಲ 
ಕೊರೋನಾ ಸೋಂಕು ವ್ಯಾಪಕವಾಗಿ ಹರಡದಂತೆ ಹಾಗೂ ಜನರು ಇನ್ನಷ್ಟು ಸಂಕಷ್ಟಕ್ಕೆ ಒಳಗಾಗದಂತೆ ಮುನ್ನೆಚ್ಚರಿಕೆಯ ಕ್ರಮವಾಗಿ ವಿವಿಧ ನಿರ್ಬಂಧ ಜಾರಿಗೊಳಿಸಲಾಗಿದೆ. ಈ ಹಿಂದೆ ರಾಜ್ಯವನ್ನು ಆಡಳಿತ ನಡೆಸಿದ ನಾಯಕರೇ ಈ ನೆಲದ ಕಾನೂನನ್ನು ಉಲ್ಲಂಘಿಸಿ ಕಾನೂನಿಗೆ ಗೌರವ ನೀಡದೆ, ಗೂಂಡಾಗಿರಿ, ದರ್ಪ ಪ್ರದರ್ಶಿಸುತ್ತಿರುವುದು ಕಾಂಗ್ರೆಸ್ ಸಂಸ್ಕೃತಿಯನ್ನು ತೋರಿಸುತ್ತದೆ. ಜನರ ಆರೋಗ್ಯದ ಬಗ್ಗೆ, ಹಿತಾಸಕ್ತಿಯ ಬಗ್ಗೆ ಕೊಂಚವು ಕಾಳಜಿ ಇಲ್ಲದ ಕಾಂಗ್ರೆಸ್ ಮುಂದೆ ರಾಜ್ಯದಲ್ಲಿ ನಿರ್ನಾಮವಾಗುವುದರಲ್ಲಿ ಸಂಶಯವಿಲ್ಲ.
ರಾಜ್ಯದ ಹಿತದೃಷ್ಟಿ, ಇಲ್ಲಿನ ನಾಗರಿಕರ ಬಗ್ಗೆ ಕಾಳಜಿ ಇದ್ದರೆ ಕೊರೋನಾ ನಿಯಂತ್ರಣಕ್ಕೆ ಪೂರಕವಾಗಿ ವರ್ತಿಸಲಿ. ಬದಲಾಗಿ ರಾಜಕೀಯ ಲಾಭಕ್ಕಾಗಿ ಪಾದಯಾತ್ರೆ ಹೆಸರಿನಲ್ಲಿ ಜನಸೇರಿಸಿ ಕೊರೋನಾ ವ್ಯಾಪಕವಾಗಿ ಹರಡುವಂತೆ ಮಾಡಿದರೆ, ಅದಕ್ಕೆ ಕಾಂಗ್ರೆಸ್ ಪಕ್ಷ ದೊಡ್ಡ ಬೆಲೆ ತೆರಬೇಕಾಗುತ್ತದೆ ಎಂದು ನಳಿನ್ ಎಚ್ಚರಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!