ಗುಜರಾತ್ ಗೆ ಸಿಎಸ್; ಪಿಣರಾಯಿ ವಿರುದ್ಧ ಯೆಚೂರಿ ಗರಂ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಮಾದರಿ ಆಡಳಿತ ಅಥವಾ ರಾಜ್ಯಭಾರ ಕುರಿತು ಸಮಗ್ರ ಅಧ್ಯಯನ ನಡೆಸಲು ಕೇರಳ ಸರಕಾರದ ಮುಖ್ಯ ಕಾರ್ಯದರ್ಶಿ ಅವರನ್ನು ಗುಜರಾತ್‌ಗೆ ಕಳುಹಿಸಿದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಕ್ರಮದ ವಿರುದ್ಧ ಸಿಪಿಎಂ ಕೇಂದ್ರ ನಾಯಕತ್ವವು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ಜೊತೆ ಜೊತೆಗೆ ಭಿನ್ನಮತವೂ ಸ್ಫೋಟಗೊಂಡಿದೆ.
ಇತ್ತ ಬಿಜೆಪಿಯನ್ನು ಟೀಕಿಸುವುದನ್ನೇ ಕಾಯಕವಾಗಿರಿಸಿಕೊಂಡಿರುವ ಮತ್ತು ಮೋದಿ ಆಡಳಿತವನ್ನು ಜನವಿರೋಧಿ ಎಂಬಂತೆ ಬಿಂಬಿಸಲು ಇನ್ನಿಲ್ಲದಂತೆ ಹೆಣಗಾಡುತ್ತಿರುವ ಕಾಂಗ್ರೆಸ್‌ಗೆ ಈ ಕ್ರಮ ಇರಿಸುಮುರಿಸುಂಟು ಮಾಡಿದ್ದು, ಎಡರಂಗ ಬಿಜೆಪಿ, ಆರೆಸ್ಸೆಸ್ ಜೊತೆ ನಂಟು ಹೊಂದಿದೆ ಎಂದು ಆರೋಪಿಸಿದೆ. ಇದರೊಂದಿಗೆ ರಾಜಕೀಯ ತೀತವಾಗಿರುವ ಉತ್ತಮ ಆಡಳಿತಾತ್ಮಕ ವಿಷಯವೊಂದಕ್ಕೆ ರಾಜಕೀಯ ಬಣ್ಣ ನೀಡಿರುವ ಕಮ್ಯುನಿಸ್ಟರು ಮತ್ತು ಕಾಂಗ್ರೆಸ್ ನಡೆ ಈಗ ಚರ್ಚೆಗೆ ಕಾರಣವಾಗಿದೆ.
ಮುಖ್ಯ ಕಾರ್ಯದರ್ಶಿ ನೇತೃತ್ವದ ನಿಯೋಗದ ಗುಜರಾತ್ ಸಂದರ್ಶನದಿಂದ ಬಿಜೆಪಿಗೆ ರಾಜಕೀಯ ಲಾಭವಾಗಲಿದೆ ಎಂದು ಸಿಪಿಎಂ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ ವಾದಿಸಿದ್ದು, ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರನ್ನು ತೀಕ್ಷ್ಣವಾಗಿ ತರಾಟೆಗೆತ್ತಿಕೊಂಡಿದ್ದಾರೆ.
ಇದೇ ವೇಳೆ ಮುಖ್ಯಮಂತ್ರಿ ವಿದೇಶದಲ್ಲಿ ಚಿಕಿತ್ಸೆಯಲ್ಲಿದ್ದು ಇದರಿಂದ ಈ ಬಗ್ಗೆ ಅವರೊಂದಿಗೆ ಚರ್ಚಿಸಲು ಸಾಧ್ಯವಾಗಿಲ್ಲ ಎಂದು ಹೇಳಲಾಗುತ್ತಿದೆ. ಎಡರಂಗ ನೇತೃತ್ವದ ಕೇರಳದ ಆಡಳಿತವು ಇಡೀ ದೇಶಕ್ಕೆ ಮಾದರಿಯಾಗಿದೆ ಎಂದು ಕಣ್ಣೂರಿನಲ್ಲಿ ಜರಗಿದ ಸಿಪಿಎಂನ ಪಾರ್ಟಿ ಕಾಂಗ್ರೆಸ್‌ನಲ್ಲಿ ಘೋಷಿಸಿದ ಬೆನ್ನಲ್ಲೇ ಸರಕಾರದ ಮುಖ್ಯ ಕಾರ್ಯದರ್ಶಿಯವರನ್ನು ಗುಜರಾತ್ ಸಂದರ್ಶನಕ್ಕೆ ಕಳುಹಿಸಿರುವುದು ಸಿಪಿಎಂ ಪಕ್ಷದ ನಾಯಕರಲ್ಲಿ ಭಿನ್ನಮತ ಸೋಟಗೊಳ್ಳಲು ಕಾರಣವಾಗಿದೆ.
ಬಿಜೆಪಿಯನ್ನು ಮತ್ತು ಬಿಜೆಪಿ ಆಡಳಿತವನ್ನು ವಿರೋಸುವುದೇ ಪ್ರಧಾನ ಗುರಿ ಎಂದು ಸಿಪಿಎಂ ಸಮ್ಮೇಳನದಲ್ಲಿ ಠರಾವು ಮಂಡಿಸಲಾಗಿತ್ತು. ಆದರೆ ಇದೀಗ ಬಿಜೆಪಿ ಅಧಿಕಾರ ನಡೆಸುವ ಗುಜರಾತ್ ರಾಜ್ಯದಲ್ಲಿನ ಉತ್ತಮ ಆಡಳಿತದ ಮಾದರಿಯನ್ನು ಅಧ್ಯಯನ ನಡೆಸಲು ಸರಕಾರದ ಪ್ರಮುಖ ಪ್ರತಿನಿಧಿ ತೆರಳಿರುವುದು ಬಿಜೆಪಿ ಆಡಳಿತ ಮಾದರಿ ಅತ್ಯುತ್ತಮ ಎಂದು ಒಪ್ಪಿಕೊಂಡಂತಾಗಿದೆ. ಇದೀಗ ಸಿಪಿಎಂ ಕೇಂದ್ರ ನಾಯಕತ್ವಕ್ಕೆ ಅಸಮಾಧಾನ ಮೂಡಿಸಿದೆ ಮಾತ್ರವಲ್ಲದೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!