ಮಾರ್ಚ್ 12ರಿಂದ ‘ಪಿಂಕ್ ಬಾಲ್’ ಟೆಸ್ಟ್

ಹೊಸ ದಿಗಂತ ಡಿಜಿಟಲ್ ಡೆಸ್ಕ್ :

ಮಾರ್ಚ್ 12 ರಿಂದ ಭಾರತ ಮತ್ತು ಶ್ರೀಲಂಕಾ ನಡುವೆ ಪಿಂಕ್ ಬಾಲ್ ಟೆಸ್ಟ್ ನಡೆಯಲಿದೆ. ಮೊದಲ ಟೆಸ್ಟನ್ನು ನಿರಾಯಾಸವಾಗಿ ಗೆದ್ದಿರುವ ರೋಹಿತ್ ಪಡೆಯು ಅಹರ್ನಿಶಿಯಾಗಿ ನಡೆಯುವ ಎರಡನೇ ಟೆಸ್ಟ್ ಕೂಡ ಗೆಲ್ಲುವ ಮೂಲಕ ಸರಣಿ ಸ್ವೀಪ್ ಮಾಡುವ ಗುರಿ ಹೊಂದಿದೆ.
ಬೆಂಗಳೂರಿಗೆ ಬಂದಿಳಿಯುವ ಮುನ್ನ ಭಾರತೀಯ ತಂಡವು ಮೊಹಾಲಿಯಲ್ಲಿ ಪಿಂಕ್ ಬಾಲ್‌ನಲ್ಲಿ ಅಭ್ಯಾಸ ನಡೆಸಿ ಬಂದಿದೆ.
ಭಾರತವು ಪಂದ್ಯ ಗೆಲ್ಲುವ ಫೇವರಿಟ್ ಆದರೂ ಪಿಂಕ್ ಬಾಲ್ ಟೆಸ್ಟ್‌ನಲ್ಲಿ ಯಾವುದನ್ನೂ ಖಚಿತವಾಗಿ ಹೇಳಲಾಗದು ಎಂದು ಬೌಲರ್ ಅಶ್ವಿನ್ ಹೇಳುತ್ತಾರೆ. ಪಿಂಕ್ ಬಾಲ್ ಟೆಸ್ಟ್‌ಗೆ ಪಿಚ್ ನಿರ್ಮಿಸುವುದು ಕಷ್ಟಕರ. ಯಾವುದನ್ನೂ ನಿಖರವಾಗಿ ಅಂದಾಜಿಸಲಾಗದು ಎಂಬುದಾಗಿ ಅವರು ನುಡಿಯುತ್ತಾರೆ. ‘ನಾವು ಈವರೆಗೆ ಮೂರು ಪಿಂಕ್ ಬಾಲ್ ಟೆಸ್ಟ್ ಆಡಿದ್ದೇವೆ. ಮೂರೂ ಪಂದ್ಯಗಳಲ್ಲಿ ವಿಭಿನ್ನ ಅನುಭವ ಪಡೆದಿದ್ದೇವೆ ‘ ಎಂದು ಅವರು ತಿಳಿಸುತ್ತಾರೆ.
ಕುಲದೀಪ್ ಬದಲಿಗೆ ತಂಡಕ್ಕೆ ಸೇರಿಸಲ್ಪಟ್ಟಿರುವ ಅಕ್ಷರ್ ಪಟೇಲ್ ಈ ಪಂದ್ಯದಲ್ಲಿ ಆಡುವರೆ ಇಲ್ಲವೇ ಎಂಬುದು ಸ್ಪಷ್ಟವಾಗಿಲ್ಲ. ಅವರನ್ನು ಸೇರಿಸಿಕೊಂಡರೆ ಒಬ್ಬ ವೇಗಿಯನ್ನು ಕೈಬಿಡಬೇಕಾಗುವುದು. ಆದರೆ ಭಾರತದಲ್ಲಿ ನಡೆದ ಎರಡೂ ಪಿಂಕ್ ಬಾಲ್ ಟೆಸ್ಟ್‌ಗಳಲ್ಲಿ ಭಾರತದ ಜಯದಲ್ಲಿ ವೇಗಿಗಳೇ ಪ್ರಧಾನ ಪಾತ್ರ ವಹಿಸಿದ್ದರು.
ಸಾಮಾನ್ಯವಾಗಿ ಬೆಂಗಳೂರಿನ ಪಿಚ್ ಮೊದಲ ಮೂರು ದಿನ ಬ್ಯಾಟರ್‌ಗಳಿಗೆ ಅನುಕೂಲಕರವಾಗಿದ್ದು, ಕೊನೆಯ ಎರಡು ದಿನ ಸ್ಪಿನ್ನರ್‌ಗಳಿಗೆ ಅನುಕೂಲವಾಗಿರುತ್ತದೆ. ಆದರೆ ಪಿಂಕ್ ಎಸ್‌ಜಿ ಚೆಂಡುಗಳು ಈ ಪಿಚ್‌ನಲ್ಲಿ ಯಾವ ರೀತಿ ವರ್ತಿಸುತ್ತವೆಯೆಂದು ಕಾದು ನೋಡಬೇಕು.
ಭಾರತಕ್ಕೆ ಟೆಸ್ಟ್ ರ‍್ಯಾಂಕಿಂಗಿನಲ್ಲಿ ಅಗ್ರಸ್ಥಾನಕ್ಕೇರುವ ಅವಕಾಶವೂ ಇದೆ. ಭಾರತವು ಲಂಕಾವನ್ನು ಸೋಲಿಸಿ, ಅತ್ತ ಪಾಕಿಸ್ಥಾನವು ಆಸ್ಟ್ರೇಲಿಯಾವನ್ನು ಸೋಲಿಸಿದರೆ ಭಾರತವು ಮತ್ತೆ ಅಗ್ರರ‍್ಯಾಂಕಿಂಗ್ ಪಡೆಯಲಿದೆ.
ಇದೇವೇಳೆ, ಮಾಜಿ ನಾಯಕ ವಿರಾಟ್ ಕೊಹ್ಲಿ ತಮ್ಮ ಶತಕದ ಬರವನ್ನು ನೀಗಿಸಿಕೊಳ್ಳುವ ಉದ್ದೇಶ ಹೊಂದಿದ್ದಾರೆ. 2019ರ ನವೆಂಬರ್ ಬಳಿಕ ಒಂದೂ ಶತಕ ಬಾರಿಸದಿರುವ ಅವರು ಈ ಪಂದ್ಯದಲ್ಲಾದರೂ ಶತಕ ಬಾರಿಸುವ ಗುರಿ ಹೊಂದಿದ್ದಾರೆ.
ಗರಿಷ್ಠ ರನ್ ಗಳಿಕೆಯಲ್ಲಿ ಕೊಹ್ಲಿ ಇಬ್ಬರು ಖ್ಯಾತ ಬ್ಯಾಟರ್‌ಗಳನ್ನು ದಾಟುವ ಅವಕಾಶಗಳೂ ಲಭ್ಯವಿವೆ. 8007 ಟೆಸ್ಟ್ ರನ್ ಗಳಿಸಿರುವ ಕೊಹ್ಲಿ ರನ್ ಗಳಿಕೆಯಲ್ಲಿ 32ನೇ ಸ್ಥಾನದಲ್ಲಿದ್ದು, 22 ರನ್ ಗಳಿಸಿದರೆ ಮಾರ್ಕ್ ವೋ ಅವರನ್ನು ದಾಟಲಿದ್ದಾರೆ. ಅವರು 26 ರನ್ ಮಾಡಿದರೆ ಗ್ಯಾರಿ ಸೋಬರ್ಸ್ ಗಳಿಕೆಯನ್ನು ದಾಟುತ್ತಾರೆ.
ಪ್ರಸ್ತುತ ಭಾರತೀಯ ಬ್ಯಾಟರ್‌ಗಳಲ್ಲಿ ಕೊಹ್ಲಿ 5ನೇ ಸ್ಥಾನದಲ್ಲಿದ್ದಾರೆ. ವೀರೇಂದ್ರ ಸೆಹ್ವಾಗ್‌ರನ್ನು ಮೀರಿಸಲು ಅವರು 578 ರನ್ ಗಳಿಸಬೇಕಾಗಿದೆ.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!