ಹೊಸ ದಿಗಂತ ವರದಿ, ಅಂಕೋಲಾ:
ಪಂಚ ರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ನಾಲ್ಕು ರಾಜ್ಯಗಳಲ್ಲಿ ಬಿಜೆಪಿ ಜಯಭೇರಿ ಬಾರಿಸಿರುವುದನ್ನು ಭಾರತೀಯ ಜನತಾ ಪಕ್ಷದ ಅಂಕೋಲಾ ಘಟಕದ ಕಾರ್ಯಕರ್ತರು ಪಟ್ಟಣದ ತಹಶೀಲ್ಧಾರರ ಕಚೇರಿ ಎದುರು ಇರುವ ವೃತ್ತದ ಬಳಿ ಸೇರಿ ಪಟಾಕಿ ಸಿಡಿಸಿ ಸಂಭ್ರಮಾಚರಣೆ ನಡೆಸಿದರು.
ಬಿಜೆಪಿ ಹಿರಿಯ ಮುಖಂಡ ಭಾಸ್ಕರ ನಾರ್ವೇಕರ್ ಮಾತನಾಡಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರದಲ್ಲಿ ದೇಶದ ಜನತೆ ವಿಶ್ವಾಸ ಇಟ್ಟಿದೆ ಎನ್ನುವುದಕ್ಕೆ ಚುನಾವಣಾ ಫಲಿತಾಂಶವೇ ಸಾಕ್ಷಿ, ಕರ್ನಾಟಕದಲ್ಲಿ ಮುಂಬರುವ ಚುನಾವಣೆಯಲ್ಲಿ ಸಹ ಬಿಜೆಪಿ ಹೆಚ್ಚಿನ ಸ್ಥಾನವನ್ನು ಪಡೆದು ಮತ್ತೊಮ್ಮೆ ಸರ್ಕಾರ ರಚಿಸಲಿದೆ ಎಂದರು.
ಬಿಜೆಪಿ ಹಿಂದುಳಿದ ಮೋರ್ಛಾ ರಾಜ್ಯ ಕಾರ್ಯಕಾರಿಣಿ ಸದಸ್ಯ ರಾಜೇಂದ್ರ ನಾಯ್ಕ ಅವರು ಮಾತನಾಡಿ ದೇಶದ ಮತ್ತು ಜನ ಸಾಮಾನ್ಯರ ರಕ್ಷಣೆ ಬಿಜೆಪಿಯಿಂದ ಮಾತ್ರ ಸಾಧ್ಯ ಎಂದು ಜನರು ಬಿಜೆಪಿ ಪರ ಮತ ಚಲಾಯಿಸುವ ಮೂಲಕ ತೋರಿಸಿದ್ದಾರೆ ಎಂದರು.
ಪುರಸಭೆ ಅಧ್ಯಕ್ಷೆ ಶಾಂತಲಾ ನಾಡಕರ್ಣಿ ಮಾತನಾಡಿ ಮತದಾರರು ಅಭಿವೃದ್ಧಿಪರ ಮತ್ತು ಜನಪರ ಸರ್ಕಾರ ಬಯಸಿ ಬಿಜೆಪಿಯನ್ನು ಗೆಲ್ಲಿಸಿದ್ದಾರೆ ಎಂದರು.
ಬಿಜೆಪಿ ಮಂಡಲ ಅಧ್ಯಕ್ಷ ಸಂಜಯ ನಾಯ್ಕ, ಪುರಸಭೆ ನಾಮ ನಿರ್ದೇಶಿತ ಸದಸ್ಯ ನಾಗೇಶ ಕಿಣಿ, ಕಾರ್ಯಕರ್ತ ಚಂದ್ರಕಾಂತ ನಾಯ್ಕ ಮಾತನಾಡಿದರು.
ಮಂಡಲ ಕಾರ್ಯದರ್ಶಿ ರಾಮಚಂದ್ರ ಹೆಗಡೆ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು.
ಬಿಜೆಪಿ ಪ್ರಮುಖರುಗಳಾದ ಕೃಷ್ಣಕುಮಾರ ಮಹಾಲೆ, ದಾಮೋದರ ರಾಯ್ಕರ,ಅನುರಾಧಾ ನಾಯ್ಕ, ಸುಲಕ್ಷಾ ಭೋವಿ, ಸದಾನಂದ ನಾಯಕ, ಬಾಲಕೃಷ್ಣ ನಾಯ್ಕ, ಗಣಪತಿ ನಾಯ್ಕ, ಸುಭಾಷ ನಾಯ್ಕ, ಮಂಜುನಾಥ ವಿ.ನಾಯ್ಕ ಮೊದಲಾದವರು ಪಾಲ್ಗೊಂಡಿದ್ದರು.
ಬಿಜೆಪಿ ಸಂಭ್ರಮಾಚರಣೆಯಲ್ಲಿ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥ ವಿ.ನಾಯ್ಕ
ತಾಲೂಕು ಯುವ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ಉತ್ಸಾಹಿ ತರುಣ ಮಂಜುನಾಥ ವಿ.ನಾಯ್ಕ ಅವರು ಬಿಜೆಪಿ ಸಂಭ್ರಮಾಚರಣೆಯಲ್ಲಿ ಕಾಣಿಸಿಕೊಂಡಿದ್ದು ಅವರು ಬಿಜೆಪಿಯತ್ತ ಬರುತ್ತಿರವುದು ಖಚಿತಗೊಂಡಿದೆ, ಈ ಹಿಂದೆ ಸಹ ಒಂದೆರಡು ಕಾರ್ಯಕ್ರಮಗಳಲ್ಲಿ ಬಿಜೆಪಿ ಮುಖಂಡರೊಂದಿಗೆ ಅವರು ಕಂಡು ಬಂದಿದ್ದರು ಇದೀಗ ನಾಲ್ಕು ರಾಜ್ಯಗಳಲ್ಲಿ ಕಾಂಗ್ರೆಸ್ ಸೇರಿದಂತೆ ಮತ್ತಿತರ ಪಕ್ಷಗಳ ವಿರುದ್ಧ ಬಿಜೆಪಿ ಜಯಗೊಳಿಸಿದ ಸಂಭ್ರಮಾಚರಣೆಯಲ್ಲಿ ಅವರು ಬಹಿರಂಗವಾಗಿ ಪಾಲ್ಗೊಂಡಿರುವುದು ಕಂಡು ಬಂದಿರುವುದು ಅವರು ಬಿಜೆಪಿಯತ್ತ ಆಕರ್ಷಿತರಾಗಿರುವಂತೆ ಕಂಡು ಬಂದಿದೆ.