ಹೊಸ ದಿಗಂತ ವರದಿ, ಮದ್ದೂರು:
ಹಗರಣಗಳನ್ನು ಸುತ್ತಿಕೊಂಡಿರುವ ಬಿಜೆಪಿ ಮುಂದಿನ ವಿಧಾನ ಸಭಾ ಚುನಾವಣೆಯಲ್ಲಿ 150 ಸ್ಥಾನಗಳನ್ನು ಗೆಲ್ಲುವ ಹಗಲು ಕನಸು ಕಾಣುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಶನಿವಾರ ಲೇವಡಿ ಮಾಡಿದರು.
ಮೈಸೂರು ಜಿಲ್ಲೆಯ ಟಿ.ನರಸೀಪುರ ಪ್ರವಾಸಕ್ಕೆ ತೆರಳುವ ಮಾರ್ಗ ಮಧ್ಯೆ ಪಟ್ಟಣದ ಶಿವಪುರದಲ್ಲಿ ಕಾಂಗ್ರೆಸ್ ಮುಖಂಡರು ಹಾಗೂ ಕಾರ‌್ಯಕರ್ತರಿಂದ ಅಭಿನಂದನೆ ಸ್ವೀಕರಿಸಿದ ಬಳಿಕ ಸುದ್ಧಿಗಾರರೊಂದಿಗೆ ಮಾತನಾಡಿದರು.
ಬಿಜೆಪಿ ಸರ್ಕಾರ ಈಗಾಗಲೇ ಪಿಎಸ್‌ಐ ಮತ್ತು ಪ್ರಾಧ್ಯಾಪಕರ ಪರೀಕ್ಷೆಗಳ ಅಕ್ರಮ, ಕಮೀಷನ್ ದಂಧೆ ಸೇರಿದಂತೆ ಹಲವಾರು ಹಗರಣಗಳಲ್ಲಿ ಮುಳುಗಿದೆ. ಇಂತಹ ಭ್ರಷ್ಟ ಸರ್ಕಾರಕ್ಕೆ ಜನರ ವಿಶ್ವಾಸವಿಲ್ಲ ಎಂದು ಟೀಕಿಸಿದರು.
ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪಕ್ಷ ಸಂಘಟನೆ ದೃಷ್ಠಿಯಿಂದ ರಾಜ್ಯ ಪ್ರವಾಸ ಮಾಡುವುದರಿಂದ ರಾಜ್ಯದಲ್ಲಿ ಬಿಜೆಪಿ 150 ಸ್ಥಾನಗಳನ್ನು ಗೆಲ್ಲಲಿದೆ ಎನ್ನುವುದು ಬರೀ ಭ್ರಮೆ ಅಷ್ಟೆ. ಈ ಸರ್ಕಾರಕ್ಕೆ ಬಹುಮತ ಕೊಡುವುದಕ್ಕೆ ರಾಜ್ಯದ ಜನ ಸಿದ್ದರಿಲ್ಲ. ಬದಲಾವಣೆ ಬಯಸುತ್ತಿದ್ದಾರೆ ಎಂದು ಹೇಳಿದರು.
ಮುಂದಿನ ವಿಧಾನ ಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರುವ ಉದ್ದೇಶದಿಂದ ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್‌ಸಿಂಗ್ ಸುರ್ಜೇವಾಲ ತಮ್ಮ 30 ಮಂದಿಯ ತಂಡದೊಂದಿಗೆ ಒಂದು ವರ್ಷ ಕಾಲ ರಾಜ್ಯದಲ್ಲಿ ಠಿಕಾಣಿ ಹೂಡುತ್ತಿದ್ದಾರೆ. ಕಾಂಗ್ರೆಸ್ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರುವ ಮಹತ್ವಾಕಾಂಕ್ಷೆ ಅವರಲ್ಲೂ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.