September 11, 2026
Friday, September 11, 2026
spot_img

ನಾಳೆಯಿಂದ ‘ಇಂಡಿಯನ್ ರೇಸಿಂಗ್ ಫೆಸ್ಟಿವಲ್’ ಆರಂಭ: ಕಿಚ್ಚಾಸ್ ಕಿಂಗ್ಸ್ ಬೆಂಗಳೂರು ಸೇರಿ 6 ತಂಡಗಳು ಭಾಗಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಭಾರತದ ಮೋಟಾರ್ ಸ್ಪೋರ್ಟ್ಸ್ ಪ್ರೇಮಿಗಳು ಕಾತರದಿಂದ ಕಾಯುತ್ತಿದ್ದ ರೇಸಿಂಗ್ ಹಬ್ಬಕ್ಕೆ ಕೊನೆಗೂ ಸಮಯ ಕೂಡಿಬಂದಿದೆ. ರೇಸಿಂಗ್ ಪ್ರಮೋಷನ್ಸ್ ಪ್ರೈವೇಟ್ ಲಿಮಿಟೆಡ್ (RPPL) ಆಯೋಜಿಸುತ್ತಿರುವ ಪ್ರತಿಷ್ಠಿತ ‘ಇಂಡಿಯನ್ ರೇಸಿಂಗ್ ಫೆಸ್ಟಿವಲ್’ (IRF) 2026ರ ನೂತನ ಆವೃತ್ತಿಗೆ ನಾಳೆಯಿಂದ ಅದ್ಧೂರಿ ಚಾಲನೆ ದೊರೆಯಲಿದೆ. ಇದರ ಭಾಗವಾಗಿ ನಡೆಯಲಿರುವ ‘ಎಫ್4 (F4) ಇಂಡಿಯನ್ ಚಾಂಪಿಯನ್‌ಶಿಪ್‌’ನ ಮೊದಲ ಸುತ್ತಿನ ಹೈ-ಸ್ಪೀಡ್ ರೇಸ್‌ಗೆ ಸೆಪ್ಟೆಂಬರ್ 12 ಮತ್ತು 13ರಂದು ಕೊಯಮತ್ತೂರಿನ ಕಾರಿ ಮೋಟಾರ್ ಸ್ಪೀಡ್‌ವೇ ವೇದಿಕೆಯಾಗಲಿದೆ.

ಈ ಬಾರಿಯ ರೇಸಿಂಗ್ ಸೀಸನ್‌ನಲ್ಲಿ ದೇಶದ ಪ್ರಮುಖ ರೇಸಿಂಗ್ ಟ್ರ್ಯಾಕ್‌ಗಳಲ್ಲಿ F4 ಚಾಂಪಿಯನ್‌ಶಿಪ್‌ನ ಆರು ಸುತ್ತುಗಳು ಹಾಗೂ ‘ಇಂಡಿಯನ್ ರೇಸಿಂಗ್ ಲೀಗ್’ (IRL)ನ ನಾಲ್ಕು ಸುತ್ತುಗಳ ರೋಮಾಂಚಕ ಸ್ಪರ್ಧೆಗಳು ನಡೆಯಲಿವೆ. ಡಿಸೆಂಬರ್‌ನಲ್ಲಿ ನವಿ ಮುಂಬೈ ಸ್ಟ್ರೀಟ್ ಸರ್ಕ್ಯೂಟ್‌ನಲ್ಲಿ ನಡೆಯಲಿರುವ ಐತಿಹಾಸಿಕ ‘ಸ್ಟ್ರೀಟ್ ರೇಸ್’ ಮೂಲಕ ಈ ಬಾರಿಯ ರೇಸಿಂಗ್ ಹಬ್ಬಕ್ಕೆ ತೆರೆ ಬೀಳಲಿದೆ.

ಎಫ್‌ಐಎ (FIA) ಪ್ರಮಾಣೀಕೃತ ‘ಎಫ್4 ಇಂಡಿಯನ್ ಚಾಂಪಿಯನ್‌ಶಿಪ್’ಕೊಯಮತ್ತೂರಿನಿಂದ ಆರಂಭವಾಗಲಿದ್ದು, ನವಿ ಮುಂಬೈನಲ್ಲಿ ನಡೆಯಲಿರುವ ಅಂತಿಮ ಸುತ್ತಿನೊಂದಿಗೆ ಮುಕ್ತಾಯಗೊಳ್ಳಲಿದೆ. ಭಾರತೀಯ ನೆಲದಲ್ಲಿ ನಡೆಯುವ ಈ ಚಾಂಪಿಯನ್‌ಶಿಪ್‌ ಮುಂದಿನ ಪೀಳಿಗೆಯ ‘ಸಿಂಗಲ್-ಸೀಟರ್’ಚಾಲಕರಿಗೆ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು, ಅಮೂಲ್ಯ ರೇಸಿಂಗ್ ಅನುಭವ ಪಡೆಯಲು ಹಾಗೂ ಪ್ರಮುಖ ‘ಸೂಪರ್ ಲೈಸೆನ್ಸ್’ ಅಂಕಗಳನ್ನು ಗಳಿಸಲು ಉತ್ತಮ ವೇದಿಕೆ ಕಲ್ಪಿಸಲಿದೆ. ಈ ಬಾರಿಯ ರೇಸಿಂಗ್ ಗ್ರಿಡ್‌ನಲ್ಲಿ ಎಂಟು ದೇಶಗಳನ್ನು ಪ್ರತಿನಿಧಿಸುವ ಚಾಲಕರು ಒಟ್ಟು ಎಂಟು ತಂಡಗಳ ಪರವಾಗಿ ಕಣಕ್ಕಿಳಿಯಲಿದ್ದಾರೆ.

ಅಕ್ಟೋಬರ್‌ನಲ್ಲಿ ಇಂಡಿಯನ್ ರೇಸಿಂಗ್ ಲೀಗ್

ಅಕ್ಟೋಬರ್‌ನಲ್ಲಿ ಇಂಡಿಯನ್ ರೇಸಿಂಗ್ ಲೀಗ್ ಕೂಡ ಸ್ಪರ್ಧೆಗೆ ಕಣಕ್ಕಿಳಿಯಲಿದೆ. ನಾಲ್ಕು ಸುತ್ತುಗಳ ಈ ಲೀಗ್ ಅಕ್ಟೋಬರ್ 24 ಮತ್ತು 25ರಂದು ಚೆನ್ನೈನ ಮದ್ರಾಸ್ ಇಂಟರ್‌ನ್ಯಾಷನಲ್ ಸರ್ಕ್ಯೂಟ್‌ನಲ್ಲಿ ಆರಂಭವಾಗಲಿದೆ. 2026ರ ಇಂಡಿಯನ್ ರೇಸಿಂಗ್ ಲೀಗ್‌ನಲ್ಲಿ ಆರು ತಂಡಗಳು ಪ್ರಶಸ್ತಿಗಾಗಿ ಸೆಣಸಲಿವೆ. ಅವುಗಳೆಂದರೆ – ಕಿಚ್ಚ ಸುದೀಪ್ ಮಾಲೀಕತ್ವದ ಕಿಚ್ಚಾಸ್ ಕಿಂಗ್ಸ್ ಬೆಂಗಳೂರು, ಜಾನ್ ಅಬ್ರಹಾಂ ಮಾಲೀಕತ್ವದ ಗೋವಾ ಏಸಸ್ ಜೆಎ ರೇಸಿಂಗ್, ಸೌರವ್ ಗಂಗೂಲಿ ನೇತೃತ್ವದ ಕೋಲ್ಕತ್ತಾ ರಾಯಲ್ ಟೈಗರ್ಸ್, ನಾಗ ಚೈತನ್ಯ ಮಾಲೀಕತ್ವದ ಹೈದರಾಬಾದ್ ಬ್ಲ್ಯಾಕ್‌ಬರ್ಡ್ಸ್, ಅರ್ಜುನ್ ಕಪೂರ್ ಬೆಂಬಲಿತ ಸ್ಪೀಡ್ ಡೀಮನ್ಸ್ ದೆಹಲಿ ಹಾಗೂ ಅಕಾರ್ಡ್ ಗ್ರೂಪ್ ಮಾಲೀಕತ್ವದ ಚೆನ್ನೈ ಟರ್ಬೋ ರೈಡರ್ಸ್.

ಈ ನಡುವೆ, ಎಫ್4 ಇಂಡಿಯನ್ ಚಾಂಪಿಯನ್‌ಶಿಪ್ ಭಾರತ ಹಾಗೂ ವಿದೇಶಗಳ ಮುಂದಿನ ಪೀಳಿಗೆಯ ಸಿಂಗಲ್-ಸೀಟರ್ ಚಾಲಕರ ಪ್ರತಿಭೆಯನ್ನು ಅನಾವರಣಗೊಳಿಸಲಿದೆ. 2026ರ ಗ್ರಿಡ್‌ನಲ್ಲಿ ಎಂಟು ರಾಷ್ಟ್ರೀಯತೆಗಳನ್ನು ಪ್ರತಿನಿಧಿಸುವ ಚಾಲಕರು ಸ್ಪರ್ಧಿಸಲಿದ್ದಾರೆ. ಅವರಲ್ಲಿ ಆರನ್ ಮೆಹ್ತಾ (ಸಿಂಗಾಪುರ), ಸ್ವರ್ಣವ್ ದಾಸ್ (ಭಾರತ), ಸಾಯಿ ಆದಿತ್ಯ (ಅಮೆರಿಕ/ಭಾರತ), ಅನಯ್ ದೋಷಿ (ಕೀನ್ಯಾ), ಭುವನ್ ಬೋನು (ಭಾರತ), ಶ್ರವಣ್ ಶಣ್ಮುಗವೇಲ್ (ಯುನೈಟೆಡ್ ಕಿಂಗ್‌ಡಮ್), ಕೃಷಯ್ ಗುಟ್ಟೆ (ಭಾರತ), ಆರ್ಯನ್ ನರೋಲಾ (ಅಮೆರಿಕ/ಭಾರತ), ಮಹ್ಲೋರಿ ಮಬುಂಡಾ (ದಕ್ಷಿಣ ಆಫ್ರಿಕಾ), ಎಂಜೊ ರುಜುಗಿರೊ (ದಕ್ಷಿಣ ಆಫ್ರಿಕಾ), ಲುವಿವೆ ಸಾಂಬುದ್ಲಾ (ದಕ್ಷಿಣ ಆಫ್ರಿಕಾ), ಎನ್‌ತಿಸಿಯೋ ಮಬುಂಡಾ (ದಕ್ಷಿಣ ಆಫ್ರಿಕಾ), ಮಥಿಯಾಸ್ ಅಲೆಕ್ಸಾಂಡರ್ ಫೋರ್ಲಾಂಡ್ (ನಾರ್ವೆ) ಮತ್ತು ಅರಿಸ್ ಕಿರಿಯಾಕೌ (ಆಸ್ಟ್ರೇಲಿಯಾ) ಸೇರಿದ್ದಾರೆ.

ಈ ಚಾಲಕರು ಕೋಲ್ಕತ್ತಾ ರಾಯಲ್ ಟೈಗರ್ಸ್, ಚೆನ್ನೈ ಟರ್ಬೋ ರೈಡರ್ಸ್, ಹೈದರಾಬಾದ್ ಬ್ಲ್ಯಾಕ್‌ಬರ್ಡ್ಸ್, ಸ್ಪೀಡ್ ಡೀಮನ್ಸ್ ದೆಹಲಿ, ಗೋವಾ ಏಸಸ್ ಜೆಎ ರೇಸಿಂಗ್, ಗಾಡ್‌ಸ್ಪೀಡ್ ಕೊಚ್ಚಿ, ಅಹಮದಾಬಾದ್ ಅಪೆಕ್ಸ್ ರೇಸರ್ಸ್ ಮತ್ತು ಕಿಚ್ಚಾಸ್ ಕಿಂಗ್ಸ್ ಬೆಂಗಳೂರು ಸೇರಿದಂತೆ ಎಂಟು ತಂಡಗಳ ಪರವಾಗಿ ಕಣಕ್ಕಿಳಿಯಲಿದ್ದಾರೆ. ಕಾರ್ಟಿಂಗ್‌ನಿಂದ ಸಿಂಗಲ್-ಸೀಟರ್ ರೇಸಿಂಗ್‌ಗೆ ಪಾದಾರ್ಪಣೆ ಮಾಡುವ ಯುವ ಚಾಲಕರಿಗೆ ಎಫ್4 ಇಂಡಿಯಾ ಪ್ರಮುಖ ವೇದಿಕೆಯಾಗಿದ್ದು, ಸ್ಪರ್ಧಾತ್ಮಕ ರೇಸಿಂಗ್ ಅನುಭವದ ಜತೆಗೆ ಸೂಪರ್ ಲೈಸೆನ್ಸ್ ಅಂಕಗಳನ್ನು ಗಳಿಸಲು ಅವಕಾಶ ಕಲ್ಪಿಸುತ್ತದೆ.

ಹೊಸ ಸೀಸನ್ ಕುರಿತು ಮಾತನಾಡಿದ ರೇಸಿಂಗ್ ಪ್ರಮೋಷನ್ಸ್ ಪ್ರೈವೇಟ್ ಲಿಮಿಟೆಡ್ (RPPL) ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಅಖಿಲೇಶ್ ರೆಡ್ಡಿ, ಇಂಡಿಯನ್ ರೇಸಿಂಗ್ ಫೆಸ್ಟಿವಲ್‌ನ ಪ್ರತಿಯೊಂದು ಸೀಸನ್ ಭಾರತದಲ್ಲಿ ಮತ್ತಷ್ಟು ಬಲಿಷ್ಠ ಹಾಗೂ ಗಮನಾರ್ಹ ಮೋಟಾರ್‌ಸ್ಪೋರ್ಟ್ ಪರಿಸರ ವ್ಯವಸ್ಥೆಯನ್ನು ನಿರ್ಮಿಸುವ ನಮ್ಮ ಉದ್ದೇಶದತ್ತ ಒಂದು ಹೆಜ್ಜೆಯಾಗಿದೆ. ಎಫ್4 ಇಂಡಿಯನ್ ಚಾಂಪಿಯನ್‌ಶಿಪ್ ಮೂಲಕ ಮುಂದಿನ ಪೀಳಿಗೆಯ ಚಾಲಕರಿಗೆ ವೇದಿಕೆ ಒದಗಿಸುವುದು, ಇಂಡಿಯನ್ ರೇಸಿಂಗ್ ಲೀಗ್ ಮೂಲಕ ದೇಶದ ಅತ್ಯುತ್ತಮ ಹಾಗೂ ಅಂತಾರಾಷ್ಟ್ರೀಯ ಪ್ರತಿಭೆಗಳನ್ನು ಒಂದೇ ವೇದಿಕೆಯಲ್ಲಿ ಕರೆತರುವುದು ಮತ್ತು ನವಿ ಮುಂಬೈ ಸ್ಟ್ರೀಟ್ ಸರ್ಕ್ಯೂಟ್‌ನ ಪಾದಾರ್ಪಣೆಯೊಂದಿಗೆ ಕ್ರೀಡೆಯನ್ನು ಹೊಸ ಪ್ರೇಕ್ಷಕರು ಹಾಗೂ ಹೊಸ ತಾಣಗಳಿಗೆ ಕೊಂಡೊಯ್ಯುವುದು ನಮ್ಮ ಉದ್ದೇಶವಾಗಿದೆ.

ಯುವ ಚಾಲಕರ ಉತ್ಸಾಹ ಮತ್ತು ಆಶಯಗಳನ್ನು ಪ್ರತಿಬಿಂಬಿಸುತ್ತಾ, ಭಾರತದ ಭುವನ್ ಬೋನು ಮಾತನಾಡಿ, “ಇಂಡಿಯನ್ ಎಫ್4 ನನ್ನ ರೇಸಿಂಗ್ ಪಯಣದ ಮುಂದಿನ ಹೆಜ್ಜೆಯಾಗಿದ್ದು, ಎಫ್1 ತಲುಪುವ ನನ್ನ ಗುರಿಯತ್ತ ಸಾಗುವಲ್ಲಿ ಇದು ಮಹತ್ವದ ಮೈಲಿಗಲ್ಲಾಗಿದೆ. ಇಲ್ಲಿಂದ ಕಲಿಯಲು, ಸ್ಪರ್ಧಿಸಲು ಹಾಗೂ ನನ್ನ ಸಾಮರ್ಥ್ಯವನ್ನು ಮತ್ತಷ್ಟು ಬೆಳೆಸಿಕೊಳ್ಳಲು ನಾನು ಎದುರು ನೋಡುತ್ತಿದ್ದೇನೆ ಎಂದರು.

ಲೈವ್ ಪ್ರಸಾರ

ಈ ಎಲ್ಲಾ ರೇಸ್‌ಗಳು ಸ್ಟಾರ್ ಸ್ಪೋರ್ಟ್ಸ್‌ ಕನ್ನಡ ವಾಹಿನಿಯಲ್ಲಿ ನೇರವಾಗಿ ಕನ್ನಡದಲ್ಲೇ ಪ್ರಸಾರವಾಗಲಿವೆ. ಇಂಗ್ಲಿಷ್ ಮತ್ತು ಹಿಂದಿ ವೀಕ್ಷಕರಿಗೆ ಸ್ಟಾರ್ ಸ್ಪೋರ್ಟ್ಸ್ ಖೇಲ್ ಹಾಗೂ ತಮಿಳು ಭಾಷೆಯಲ್ಲೂ ವೀಕ್ಷಿಸಲು ಅವಕಾಶವಿದೆ. ಇನ್ನು ಮೊಬೈಲ್‌ನಲ್ಲಿ ನೋಡುವವರಿಗಾಗಿ JioHotstar ಆ್ಯಪ್‌ನಲ್ಲಿ ಹಾಗೂ ಭಾರತದ ಹೊರಗಿನ ವೀಕ್ಷಕರಿಗಾಗಿ ಸ್ಟಾರ್ ಸ್ಪೋರ್ಟ್ಸ್‌ನ ಯೂಟ್ಯೂಬ್ ಚಾನೆಲ್‌ನಲ್ಲಿ ಲೈವ್ ಸ್ಟ್ರೀಮಿಂಗ್ ಲಭ್ಯವಿರಲಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !