ಹೊಸದಿಗಂತ ವರದಿ,ಶಿವಮೊಗ್ಗ:
ಬೆಂಗಳೂರು ಹೊರತುಪಡಿಸಿ ಶಿವಮೊಗ್ಗ ರಾಜ್ಯದ ಭವಿಷ್ಯದ ನಗರವಾಗಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಭಿಪ್ರಾಯಿಸಿದರು.
ಜಿಲ್ಲಾಡಳಿತ, ಮಹಾನಗರ ಪಾಲಿಕೆ ಹಾಗೂ ವಿವಿಧ ಇಲಾಖೆಗಳ ಸಹಯೋಗದಲ್ಲಿ ಎನ್‌ಇಎಸ್ ಮೈದಾನದಲ್ಲಿ ಬುಧವಾರ ಆಯೋಜಿಸಲಾಗಿದ್ದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.
ಶಿವಮೊಗ್ಗ ರಾಜ್ಯದ ಟೈರ್ 2 ಸಿಟಿ ಆಗಿದೆ. ಈ ನಗರಕ್ಕೆ ಮುಂದೆ ದೊಡ್ಡ ಭವಿಷ್ಯ ಇದೆ. ಈಗಾಗಲೇ ಜಿಲ್ಲೆಯಲ್ಲಿ ಎಲ್ಲಾ ಪ್ರಮಾಣದ ಸೌಕರ್ಯಗಳನ್ನೂ ಕಲ್ಪಿಸಲಾಗಿದೆ. ವ್ಯಾಪಾರ ವಹಿವಾಟಿಗೆ ಅನುಕೂಲ ಮಾಡಿಕೊಡಲಾಗಿದೆ ಎಂದರು.
2006 ರಲ್ಲಿನ ಶಿವಮೊಗ್ಗಕ್ಕೂ, ಈಗಿನ ಶಿವಮೊಗ್ಗಕ್ಕೂ ಅಜಗಜಾಂತರ ವ್ಯತ್ಯಾಸ ಇದೆ. ರಸ್ತೆಘಿ, ಕಟ್ಟಡ, ಸೇತುವೆ, ಬಸ್ ನಿಲ್ದಾಣ, ವಿಮಾನ ನಿಲ್ದಾಣ ಸೇರಿದಂತೆ ಎಲ್ಲಾ ಸೌಕರ್ಯ ಅಭಿವೃದ್ಧಿ ಪಡಿಸಲಾಗಿದೆ. ಮಾಜಿ ಸಿಎಂ ಯಡಿಯೂರಪ್ಪ ಹಾಗೂ ಶಾಸಕ ಕೆ.ಎಸ್. ಈಶ್ವರಪ್ಪ ಅವರು ಜಿಲ್ಲೆಯನ್ನು ಸಮಗ್ರವಾಗಿ ಅಭಿವೃದ್ಧಿಪಡಿಸಿದ್ದಾರೆ ಎಂದು ಶ್ಲಾಘಿಸಿದರು.