ಹೊಸದಿಗಂತ ಡಿಜಿಟಲ್ ಡೆಸ್ಕ್:
ಫ್ರಾನ್ಸ್‌ನ ಇವಿಯಾನ್‌ನಲ್ಲಿ ನಡೆಯುತ್ತಿರುವ ಜಿ7 ಶೃಂಗಸಭೆಯಲ್ಲಿ ಭಾಗವಹಿಸಲು ಆಗಮಿಸಿರುವ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಔಪಚಾರಿಕವಾಗಿ ಸ್ವಾಗತಿಸಲಿದ್ದಾರೆ. ಭಾರತವು ಜಿ7 ಒಕ್ಕೂಟದ ಖಾಯಂ ಸದಸ್ಯ ರಾಷ್ಟ್ರವಲ್ಲದಿದ್ದರೂ, ಜಾಗತಿಕ ನಿರ್ಧಾರಗಳಲ್ಲಿ ದೇಶಕ್ಕಿರುವ ಅಗಾಧ ಪ್ರಭಾವದಿಂದಾಗಿ ಪ್ರಧಾನಿ ಮೋದಿ ಸತತ 8ನೇ ಬಾರಿಗೆ ಈ ಶೃಂಗಸಭೆಯಲ್ಲಿ ಭಾಗವಹಿಸುತ್ತಿದ್ದು, ಜಾಗತಿಕ ದಕ್ಷಿಣದ ಧ್ವನಿಯಾಗಲಿದ್ದಾರೆ.
ಮೋದಿ-ಟ್ರಂಪ್ ಮುಖಾಮುಖಿ
ಡೊನಾಲ್ಡ್ ಟ್ರಂಪ್ ಅವರು ಮತ್ತೆ ಶ್ವೇತಭವನಕ್ಕೆ ಮರಳಿದ ನಂತರ ಉಭಯ ನಾಯಕರ ನಡುವೆ ನಡೆಯುತ್ತಿರುವ ಮೊದಲ ಮುಖಾಮುಖಿ ಸಭೆ ಇದಾಗಿದೆ. ಜೂನ್ 17 ರಂದು ನಡೆಯಲಿರುವ ಈ ದ್ವಿಪಕ್ಷೀಯ ಸಭೆಯ ಮೇಲೆ ಜಗತ್ತಿನ ಕಣ್ಣು ನೆಟ್ಟಿದೆ. ಇತ್ತೀಚಿನ ತಿಂಗಳುಗಳಲ್ಲಿ ಭಾರತ-ಅಮೆರಿಕ ನಡುವೆ ವ್ಯಾಪಾರ ಸುಂಕಗಳು ಹಾಗೂ ರಷ್ಯಾದೊಂದಿಗಿನ ಭಾರತದ ಇಂಧನ ಸಂಬಂಧಗಳ ಕಾರಣದಿಂದ ಕೆಲವು ಭಿನ್ನಾಭಿಪ್ರಾಯಗಳು ಮೂಡಿದ್ದವು. ಈ ಹಿನ್ನೆಲೆಯಲ್ಲಿ, ಮಾರುಕಟ್ಟೆ ಪ್ರವೇಶವನ್ನು ವಿಸ್ತರಿಸುವ ನಿಟ್ಟಿನಲ್ಲಿ ಪ್ರಸ್ತಾವಿತ ಭಾರತ-ಯುಎಸ್ ವ್ಯಾಪಾರ ಒಪ್ಪಂದದ ಬಗ್ಗೆ ಇಬ್ಬರೂ ನಾಯಕರು ಸುದೀರ್ಘ ಸಮಾಲೋಚನೆ ನಡೆಸಲಿದ್ದಾರೆ.
ಹಾರ್ಮುಜ್ ಜಲಸಂಧಿ ಬಿಕ್ಕಟ್ಟು ಮತ್ತು ಸುರಕ್ಷತೆ
ಜಾಗತಿಕ ಇಂಧನ ಪೂರೈಕೆಯ ಪ್ರಮುಖ ಮಾರ್ಗವಾದ ಹಾರ್ಮುಜ್ ಜಲಸಂಧಿಯ ಬಳಿ ಇತ್ತೀಚೆಗೆ ವಾಣಿಜ್ಯ ತೈಲ ಟ್ಯಾಂಕರ್‌ಗಳ ಮೇಲೆ ನಡೆದ ದಾಳಿಗಳು ಮತ್ತು ಅದರಲ್ಲಿ ಭಾರತೀಯ ನಾವಿಕರು ಸಿಲುಕಿರುವ ವಿಷಯದ ಬಗ್ಗೆ ಭಾರತ ಕಳವಳ ವ್ಯಕ್ತಪಡಿಸಿದೆ. ಈ ಪ್ರದೇಶದಲ್ಲಿ ಶಾಂತಿ ಸ್ಥಾಪಿಸಲು, ಸಂಯಮ ಮತ್ತು ಸಂವಾದದ ಮೂಲಕ ಸಂಘರ್ಷಕ್ಕೆ ಪರಿಹಾರ ಕಂಡುಕೊಳ್ಳಲು ವಾಷಿಂಗ್ಟನ್ ಜೊತೆ ಭಾರತ ಚರ್ಚಿಸಲಿದೆ. ‘ಹೊಸ ಪಾಲುದಾರಿಕೆಗಳನ್ನು ರೂಪಿಸುವುದು ಮತ್ತು ಅಂತಾರಾಷ್ಟ್ರೀಯ ಒಗ್ಗಟ್ಟಿನ ಪುನರ್ನಿರ್ಮಾಣ’ ಎಂಬ ವಿಷಯದ ಕಾರ್ಯಕಾರಿ ಸಭೆಯಲ್ಲಿ ಮೋದಿ ಪಾಲ್ಗೊಳ್ಳಲಿದ್ದಾರೆ.



