ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಭಾರತೀಯ ವಾಯುಸೇನೆ ಹಾಗೂ ಭಾರತೀಯ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ ಜಂಟಿಯಾಗಿ ಅತ್ಯಾಧುನಿಕ ‘ರುದ್ರಂ-2’ ಕ್ಷಿಪಣಿಯ ಹಾರಾಟ ಪರೀಕ್ಷೆಯನ್ನು ಮಂಗಳವಾರ ಯಶಸ್ವಿಯಾಗಿ ನಡೆಸಿದೆ.
ಒಡಿಶಾದ ಚಂಡಿಪುರದಲ್ಲಿರುವ ಇಂಟಿಗ್ರೇಟೆಡ್ ಟೆಸ್ಟ್ ರೇಂಜ್ (ಐಟಿಆರ್) ನಿಯೋಜಿಸಲಾದ ಎಲೆಕ್ಟ್ರೋ-ಆಪ್ಟಿಕಲ್ ಸೆನ್ಸರ್‌ಗಳು, ರಾಡಾರ್ ಮತ್ತು ಟೆಲಿಮೆಟ್ರಿ ಕೇಂದ್ರಗಳ ಮೂಲಕ ಈ ಕಾರ್ಯಕ್ಷಮತೆಯನ್ನು ಮೌಲ್ಯೀಕರಿಸಲಾಗಿದೆ. ಈ ಪರೀಕ್ಷೆಯ ಎಲ್ಲಾ ಗುರಿಯನ್ನು ಶೇ. 100 ರಷ್ಟು ಈಡೇರಿವೆ ಎಂದು ರಕ್ಷಣಾ ಸಚಿವಾಲಯ ಅಧಿಕೃತವಾಗಿ ಪ್ರಕಟಿಸಿದೆ.
ಸ್ವದೇಶಿ ತಂತ್ರಜ್ಞಾನ
ಡಿಆರ್‌ಡಿಒ ಸಂಸ್ಥೆಗಳು ಹಾಗೂ ಹಿಂದುಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ ಸಹಯೋಗದೊಂದಿಗೆ ಸ್ವದೇಶಿ ತಂತ್ರಜ್ಞಾನದಡಿಯಲ್ಲೇ ಅಭಿವೃದ್ಧಿಪಡಿಸಿದ ಈ ಕ್ಷಿಪಣಿ ಭಾರತದ ನಿಖರ ದಾಳಿ ಸಾಮರ್ಥ್ಯಗಳನ್ನು ಬಲಪಡಿಸುವ ಮತ್ತು ರಕ್ಷಣಾ ತಂತ್ರಜ್ಞಾನದಲ್ಲಿ ಸ್ವಾವಲಂಬನೆಯನ್ನು ಹೆಚ್ಚಿಸುವ ಪ್ರಯತ್ನಗಳಲ್ಲಿ ಮಹತ್ವದ ಮೈಲಿಗಲ್ಲನ್ನು ಗುರುತಿಸಲಾಗುತ್ತದೆ.
ಆತ್ಮನಿರ್ಭರ ಭಾರತದ ಕನಸಿಗೆ ಸಿಕ್ಕ ಬಲ
ಈ ಐತಿಹಾಸಿಕ ಯಶಸ್ಸಿಗೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು, ಡಿಆರ್‌ಡಿಒ ಮತ್ತು ವಾಯುಸೇನೆಯ ವಿಜ್ಞಾನಿಗಳನ್ನು ಅಭಿನಂದಿಸಿದ್ದಾರೆ. ಈ ಮೂಲಕ ರಕ್ಷಣಾ ವಲಯದಲ್ಲಿ ಆತ್ಮನಿರ್ಭರ ಭಾರತದ ಕನಸಿಗೆ ಸಿಕ್ಕ ಬಲ ಆಗಿದೆ ಎಂದು ಕೊಂಡಾಡಿದ್ದಾರೆ.
ಶತ್ರುಗಳ ನೆಲೆಗಳಿಗೆ ನೇರ ಗುರಿ
‘ರುದ್ರಂ-2’ ಕ್ಷಿಪಣಿಯು ‘ಮ್ಯಾಕ್ 5.5’ ವೇಗದಲ್ಲಿ ಚಲಿಸಬಲ್ಲದು. ಸುಮಾರು 300 ಕಿ.ಮೀ ದೂರದಲ್ಲಿರುವ ಶತ್ರುಗಳ ನೆಲೆಗಳನ್ನು ಸುಖೋಯ್ ಸು-30 ಎಂಕೆಯ್ ನಂತಹ ಸುಧಾರಿತ ಯುದ್ಧವಿಮಾನಗಳ ಮೂಲಕ 3 ರಿಂದ 15 ಕಿ.ಮೀ ಎತ್ತರದಿಂದಲೇ ಧ್ವಂಸಗೊಳಿಸಬಹುದು. ಅದೇ ರೀತಿ ‘ರುದ್ರಂ-2’, ಶತ್ರುಗಳ ರೇಡಾರ್ ಹೊರಸೂಸುವ ರೇಡಿಯೋ ತರಂಗಾಂತರಗಳನ್ನು ಪತ್ತೆಹಚ್ಚಿ ದಾಳಿ ಮಾಡುವ ‘ಆಂಟಿ-ರೇಡಿಯೇಶನ್’ ಸಾಮರ್ಥ್ಯ ಹೊಂದಿದೆ. ಇದರ ಸುಧಾರಿತ ಹೈಬ್ರಿಡ್ ಗೈಡೆನ್ಸ್ ಆರ್ಕಿಟೆಕ್ಚರ್ ಶತ್ರುಗಳ ನಿದ್ದೆಗೆಡಿಸಲಿದೆ.



