ಗಣಪತಿ ವಿಸರ್ಜನಾ ವೇಳೆ ಡ್ಯಾನ್ಸ್ ಮಾಡಲೊಪ್ಪದ ಯುವಕರನ್ನು ಕಟ್ಟಿಹಾಕಿ ಹಲ್ಲೆ: ನಾಲ್ವರ ಬಂಧನ

ಹೊಸ ದಿಗಂತ ವರದಿ, ಮಂಡ್ಯ :

ಗಣಪತಿ ವಿಸರ್ಜನಾ ಮೆರವಣಿಗೆ ವೇಳೆ ಮನೆ ಮುಂದೆ ಡ್ಯಾನ್ಸ್ ಮಾಡಲಿಲ್ಲವೆಂಬ ಕಾರಣಕ್ಕೆ ನಾಲ್ವರು ಯುವಕರ ಕೈ ಕಾಲು ಕಟ್ಟಿ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಕೆ.ಆರ್. ಪೇಟೆ ತಾಲೂಕಿನ ಬಿ.ಬಿ. ಮಂಚನಹಳ್ಳಿ ಗ್ರಾಮದಲ್ಲಿ ನಡೆದಿದ್ದು, ಘಟನೆಗೆ ಸಂಬಂಧಿಸಿದಂತೆ ನಾಲ್ವರನ್ನು ಬಂಧಿಸಲಾಗಿದೆ.
ಗ್ರಾಮದ ರೈತ ಮುಖಂಡ ನಾಗೇಗೌಡ, ಕಾಂತರಾಜು, ಪ್ರಭಾಕರ್, ಸುಭಾಷ್, ಶಿವ, ನಂದೀಶ್, ಬಾಲರಾಜು, ಮಂಜೇಗೌಡ, ಸತೀಶ ಇತರರು ಹಲ್ಲೆ ನಡೆಸಿದವರೆನ್ನಲಾಗಿದೆ.
ಗಣಪತಿ ವಿಸರ್ಜನೆ ವೇಳೆ ತಮ್ಮ ಮನೆ ಬಳಿ ಡ್ಯಾನ್ಸ್ ಮಾಡಲು ನಿರಾಕರಿಸಿದ್ದರು. ಇದರಿಂದ ಕೆಲ ಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. ಈ ಬಗ್ಗೆ ಎಚ್ಚೆತ್ತ ಆರೋಪಿಗಳು ಮಾತುಕತೆ ಮೂಲಕ ಸಮಸ್ಯೆ ಹರಿಸುವುದಾಗಿ ಬಗೆಹರಿಸುವುದಾಗಿ ಕರೆಸಿ ಮನೆಯಲ್ಲಿ ಹಗ್ಗದಿಂದ ಕೈಕಾಲು ಕಟ್ಟಿ ಮನಸೋ ಇಚ್ಚೆ ಹಲ್ಲೆ ಮಾಡಿದ್ದಾರೆ. ಅಲ್ಲದೆ ಅವಾಚ್ಯ ಶಬ್ಧಗಳಿಂದ ನಿಂದಿಸಿ ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಲಾಗಿದೆ.
ಮನೆಯಲ್ಲಿ ಚೀರಾಟ ಕೇಳಿದ ಗ್ರಾಮಸ್ಥರು ಬಂದು ಯುವಕರ ಮೇಲೆ ಹಲ್ಲೆ ನಡೆಸುತ್ತಿರುವುದನ್ನು ಕಂಡು ಪ್ರಶ್ನಿಸಿದ್ದಾರೆ. ಆಸ್ಪತ್ರೆಗೆ ದಾಖಲಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಗ್ರಾಮಸ್ಥರ ಮಾಹಿತಿ ಮೇರೆಗೆ ಸ್ಥಳಕ್ಕೆ ಬಂದ ಪೊಲೀಸರಿಗೆ ನಮ್ಮ ಮನೇಲೆ ದಾಳಿ ಮಾಡಲು ಬಂದಿದ್ದರು. ಅದಕ್ಕೆ ಯುವಕರನ್ನು ಕಟ್ಟಿಹಾಕಿರುವುದಾಗಿ ಆರೋಪಿಗಳಲ್ಲೊಬ್ಬನಾದ ನಾಗೇಗೌಡ ತಿಳಿಸಿದ್ದ. ಪೊಲೀಸರು ಕೈಕಾಲು ಕಟ್ಟಿದ್ದ ಯುವಕರನ್ನು ಬಿಡಿಸಿ ಗಾಯಗೊಂಡ ಯುವಕರನ್ನು ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ್ದಾರೆ. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಕೆ.ಆರ್. ಆಸ್ಪತ್ರೆಗೆ ದಾಖಲಿಸಿದ್ದಾರೆ.
ಗ್ರಾಮದ ಮುಖಂಡ ಕುಮಾರ್ ನೀಡಿದ ದೂರಿನ ಮೇರೆಗೆ ಕೆ.ಆರ್. ಪೇಟೆ ಪೊಲೀಸರು ನಾಗೇಗೌಡ ಸೇರಿದಂತೆ ನಾಲ್ವರು ಆರೋಪಿಗಳನ್ನು ಬಂಧಿಸಿ, ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!