Saturday, September 23, 2023

Latest Posts

ಗಾಂಧೀಜಿ ಕಂಡ ಗ್ರಾಮ ಸ್ವರಾಜ್ಯದ ಕನಸು ಇಂದು ನನಸು: ಸಚಿವ ಶಿವರಾಮ ಹೆಬ್ಬಾರ್

ಹೊಸ ದಿಗಂತ ವರದಿ,ಹಾವೇರಿ:

ಮಹಾತ್ಮಾಗಾಂಧೀಜಿ ಅವರು ಕಂಡ ಗ್ರಾಮ ಸ್ವರಾಜ್ಯದ ಕನಸು ಇಂದು ನನಸಾಗಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನೇತೃತ್ವದ ಸರ್ಕಾರ ಸಾಮಾನ್ಯ ಜನರ ಅಗತ್ಯ ಸೇವೆಗಳನ್ನು ಜನರ ಮನೆಬಾಗಿಲಿಗೆ ತಲುಪಿಸುವ ಯೋಜನೆ ಜಾರಿಗೆ ತಂದಿದೆ ಎಂದು ಕಾರ್ಮಿಕ ಸಚಿವರು ಹಾಗೂ ಹಾವೇರಿ ಜಿಲ್ಲಾ ಉಸ್ತುವಾರಿ ಸಚಿವರಾದ ಅರಬೈಲ್ ಶಿವರಾಮ ಹೆಬ್ಬಾರ ಹೇಳಿದರು.
ಬುಧವಾರ ಮುಖ್ಯಂತ್ರಿಗಳು ಬೆಂಗಳೂರಿನಲ್ಲಿ ವರ್ಚುಯಲ್ ಮೂಲಕ ಜಿಲ್ಲೆಯ ಶಿಗ್ಗಾಂವ ತಾಲೂಕು ಎನ್.ಎಂ.ತಡಸ ಗ್ರಾಮ ಪಂಚಾಯತಿಯಲ್ಲಿ ಆಯೋಜಿಸಿದ್ದ ಗ್ರಾಮ ಒನ್ ಸೇವಾ ಕೇಂದ್ರ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಈ ಯೋಜನೆಯಲ್ಲಿ ಸಾರ್ವಜನಿಕರಿಗೆ ದೊರೆಯುವ ವಿವಿಧ ಪತ್ರಗಳಾದ ಸಂಧ್ಯಾಸುರಕ್ಷಾ, ರಹವಾಸಿ ಪ್ರಮಾಣಪತ್ರ, ಪಹಣಿ, ಆಯುಷ್ಮಾನ್ ಭಾರತ ಆರೋಗ್ಯ ಕರ್ನಾಟಕ ಕಾರ್ಡ್ ಸಾಂಕೇತಿಕವಾಗಿ ಫಲಾನುಭವಿಗಳಿಗೆ ವಿತರಿಸಿ ಮಾತನಾಡಿದರು.
ಈ ಯೋಜನೆಯಿಂದ ಜನತೆಗೆ ಸುಲಭವಾಗಿ ಸೇವೆಗಳು ದೊರೆಯಲಿದ್ದು, ಜನಸಾಮಾನ್ಯರಿಗೆ ಅನುಕೂಲವಾಗಲಿದೆ. ೭೫೦ ಪ್ರಕಾರ ಸೇವೆಗಳನ್ನು ನೀವು ವಾಸಿಸುವ ಸ್ಥಳದಿಂದಲೇ ಪಡೆಯಬಹುದು. ಇಂತಹ ಯೋಜನೆ ಜಾರಿಗೆ ತಂದಿರುವ ಮುಖ್ಯಮಂತ್ರಿಗಳಿಗೆ ಕೃತಜ್ಞನತೆ ಸಲ್ಲಿಸುತ್ತೇನೆ ಎಂದರು.
ನಾನು ಹಾಗೂ ಮುಖ್ಯಮಂತ್ರಿಗಳು ಎರಡು ದಶಕದ ಸ್ನೇಹಿತರಾಗಿದ್ದು, ಇಬ್ಬರು ಸೇರಿ ಈ ರಾಜ್ಯ ಅಭಿವೃದ್ಧಿ ಜೊತೆಗೆ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುತ್ತೇವೆ. ನಿಮ್ಮೆಲ್ಲರ ಸಹಕಾರ ಅಗತ್ಯವಾಗಿದೆ ಎಂದು ಹೇಳಿದರು.
ಜಿ.ಪಂ ಸಿಇಒ ಮಹಮ್ಮದ ರೋಷನ್ ಅವರು ಮಾತನಾಡಿ, ಜಿಲ್ಲೆಯ ೨೭೮ ಗ್ರಾಮ ಪಂಚಾಯತಿಗಳಲ್ಲಿ ಗ್ರಾಮ ಒನ್ ಕೇಂದ್ರ ಆರಂಭಿಸಲಾಗುತ್ತಿದೆ. ಗ್ರೇಡ್-೧ ಗ್ರಾಮ ಪಂಚಾಯತಿಗಳಲ್ಲಿ ಎರಡು ಹಾಗೂ ಗ್ರೇಡ್-೨ ಗ್ರಾಮ ಪಂಚಾಯತಿಗಳಲ್ಲಿ ಒಂದು ಗ್ರಾಮ ಒನ್ ಸೇವಾ ಕೇಂದ್ರಗಳನ್ನು ಆರಂಭಿಸಲಾಗುತ್ತಿದೆ. ಗ್ರಾಮಸ್ಥರು ಈ ಸೇವಾ ಕೇಂದ್ರಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಗ್ರಾ.ಪಂ ಅಧ್ಯಕ್ಷರು, ಅಪರ ಜಿಲ್ಲಾಧಿಕಾರಿ ಡಾ.ಎನ್.ತಿಪ್ಪೇಸ್ವಾಮಿ, ಸವಣೂರು ಉಪವಿಭಾಗಾಧಿಕಾರಿ ಅನ್ನಪೂರ್ಣ ಮುದಕಮ್ಮನವರ, ಶಿಗ್ಗಾಂವ ತಹಶೀಲ್ದಾರ ಶಿವಾನಂದ ರಾಣೆ, ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!