ಹೊಸದಿಗಂತ ಡಿಜಿಟಲ್ ಡೆಸ್ಕ್:
ಶಿವಮೊಗ್ಗದಲ್ಲಿ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದ ಕಾಮುಕರಿಗೆ ಶಿವಮೊಗ್ಗ ಜಿಲ್ಲಾ ಎರಡನೇ ಪೋಕ್ಸೋ ನ್ಯಾಯಾಲಯ 20 ವರ್ಷಗಳ ಕಠಿಣ ಶಿಕ್ಷೆ ಹಾಗೂ ತಲಾ ಒಂದು ಲಕ್ಷ ರೂಪಾಯಿ ದಂಡ ವಿಧಿಸಿದೆ.
ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ಅನಾರೋಗ್ಯದಿಂದ ಅಡ್ಮಿಟ್ ಆಗಿದ್ದ ತಾಯಿಯನ್ನು ನೋಡಿಕೊಳ್ಳಲು ಬಂದಿದ್ದ ಬಾಲಕಿ ಮೇಲೆ ಮನೋಜ್, ಪ್ರಜ್ವಲ್, ವಿನಯ್ ಹಾಗೂ ಪ್ರದೀಪ್ ಅತ್ಯಾಚಾರ ಎಸಗಿದ್ದಾರೆ.
ತಾಯಿಗೆ ಊಟ ತರಲು ಬಾಲಕಿ ಆಸ್ಪತ್ರೆಯಿಂದ ಹೊರಬಂದ ವೇಳೆ ನಾಲ್ವರು ಆಕೆಯನ್ನು ಓಮ್ನಿ ಕಾರ್‌ನಲ್ಲಿ ಕಿಡ್ನಾಪ್ ಮಾಡಿದ್ದಾರೆ. ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಅತ್ಯಾಚಾರ ಎಸಗಿ ಮತ್ತೆ ಆಸ್ಪತ್ರೆಗೆ ಕರೆತಂದು ಬಿಟ್ಟು ಹೋಗಿದ್ದಾರೆ.
ಈ ಬಗ್ಗೆ ಆಸ್ಪತ್ರೆ ಭದ್ರತಾ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದ್ದು, ಬಾಲಕಿ ಅತ್ಯಾಚಾರದ ಮಾಹಿತಿ ನೀಡಿದ್ದಾಳೆ. ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸಿ ಚಾರ್ಜ್ ಶೀಟ್ ಸಲ್ಲಿಸಲಾಗಿತ್ತು. ಕೋರ್ಟ್ ನಾಲ್ವರು ಅತ್ಯಾಚಾರಿಗಳಿಗೆ ಕಠಿಣ ಶಿಕ್ಷೆ ವಿಧಿಸಿದೆ, ದಂಡ ಕಟ್ಟಲು ವಿಫಲವಾದರೆ ಆರು ತಿಂಗಳು ಹೆಚ್ಚು ಶಿಕ್ಷೆ ಅನುಭವಿಸಬೇಕಿದೆ. ಆರೋಪಿಗಳು ನೀಡುವ ಹಣವನ್ನು ಬಾಲಕಿಗೆ ನೀಡುವಂತೆ ಕೋರ್ಟ್ ಸೂಚನೆ ನೀಡಿದೆ.