ಗಂಗಾ ಕಲ್ಯಾಣ ಯೋಜನೆ: ಒಂದು ತಿಂಗಳಲ್ಲಿ ಸಮಸ್ಯೆ ಪರಿಹರಿಸಲು ಸದನ‌ ಸಮಿತಿ ನಿರ್ದೇಶನ

ಹೊಸದಿಗಂತ ವರದಿ, ಮಡಿಕೇರಿ:

ಗಂಗಾ ಕಲ್ಯಾಣ ಯೋಜನೆಯಡಿ ಈಗಾಗಲೇ ಕೊರೆದಿರುವ 39 ಕೊಳವೆ ಬಾವಿಗಳಿಗೆ ಉಚಿತ ವಿದ್ಯುತ್ ಸಂಪರ್ಕ ಕಲ್ಪಿಸುವಲ್ಲಿ ಸೆಸ್ಕ್ ವ್ಯವಸ್ಥಾಪಕ ನಿರ್ದೇಶಕರು ಹಾಗೂ ವಿವಿಧ ನಿಗಮಗಳ ವ್ಯವಸ್ಥಾಪಕ ನಿರ್ದೇಶಕರ ಜೊತೆ ಸಭೆ ನಡೆಸಿ, ಪರಿಹಾರ ಸಂಬಂಧ ಒಂದು ತಿಂಗಳಲ್ಲಿ ವರದಿ ನೀಡುವಂತೆ ಕರ್ನಾಟಕ ವಿಧಾನ ಪರಿಷತ್ತಿನ ಗಂಗಾ ಕಲ್ಯಾಣ ವಿಶೇಷ ಸದನ ಸಮಿತಿ ಅಧ್ಯಕ್ಷ ಡಾ.ವೈ.ಎ.ನಾರಾಯಣಸ್ವಾಮಿ ಅವರು ಜಿಲ್ಲಾಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಗಂಗಾ ಕಲ್ಯಾಣ ಯೋಜನೆಯಡಿ 2015 ರಿಂದ 2020ರವರೆಗಿನ ಅವಧಿಯಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗ ಹಾಗೂ ಅಲ್ಪಸಂಖ್ಯಾತರ ವರ್ಗಕ್ಕೆ ಸೇರಿದ ಫಲಾನುಭವಿಗಳಿಗೆ ಕೊರೆಸಲಾದ ಕೊಳವೆ ಬಾವಿಗಳಿಗೆ ಸಂಬಂಧಿಸಿದಂತೆ ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಮಂಗಳವಾರ ಅಹವಾಲು ಸ್ವೀಕರಿಸಿ ಅವರು ಮಾತನಾಡಿದರು.
ಗಂಗಾ ಕಲ್ಯಾಣ ಯೋಜನೆಯಡಿ ಕೊರೆದ ಕೊಳವೆ ಬಾವಿಗಳಿಗೆ ಉಚಿತವಾಗಿ ವಿದ್ಯುತ್ ಕಲ್ಪಿಸಬೇಕು. ಆದರೆ ಕೊಡಗು ಜಿಲ್ಲೆಯಲ್ಲಿ ಉಚಿತ ವಿದ್ಯುತ್ ಸಂಪರ್ಕ ಕಲ್ಪಿಸುವ ಯೋಜನೆ ಇಲ್ಲದಿರುವ ಬಗ್ಗೆ ಮಾಹಿತಿ ಇದೆ. ಆದ್ದರಿಂದ ಈ ಬಗ್ಗೆ ಸಮಸ್ಯೆ ಬಗೆಹರಿಸುವಲ್ಲಿ ಉನ್ನತ ಅಧಿಕಾರಿಗಳ ಜತೆ ಚರ್ಚಿಸಿ ವರದಿ ನೀಡುವಂತೆ ಜಿಲ್ಲಾಧಿಕಾರಿ ಅವರಿಗೆ ಡಾ.ವೈ.ಎ.ನಾರಾಯಣಸ್ವಾಮಿ ಸಲಹೆ ಮಾಡಿದರು.
ಕೊಡಗು ಜಿಲ್ಲೆಯಲ್ಲಿ ಗಂಗಾ ಕಲ್ಯಾಣ ಯೋಜನೆಯಡಿ ಕೊರೆದ ಕೊಳವೆ ಬಾವಿಗಳಿಗೆ ಉಚಿತ ವಿದ್ಯುತ್ ಸಂಪರ್ಕ ಒದಗಿಸುವಲ್ಲಿ ಸರ್ಕಾರದ ಗಮನ ಸೆಳೆಯಲಾಗುವುದು ಎಂದೂ ನಾರಾಯಣಸ್ವಾಮಿ ಅವರು ಹೇಳಿದರು.
ಸಮಿತಿ ಸದಸ್ಯ ಬಸವರಾಜ ಪಾಟೀಲ್ ಹಿಟಗಿ ಅವರು ಗಂಗಾ ಕಲ್ಯಾಣ ಯೋಜನೆಯನ್ನು ಪ್ರತಿಯೊಬ್ಬರೂ ಅರ್ಥ ಮಾಡಿಕೊಳ್ಳಬೇಕು. ಬಡವರು‌ ಕೂಡಾ ಆರ್ಥಿಕವಾಗಿ ಇತರರಂತೆ ಬದುಕು ಕಟ್ಟಿಕೊಳ್ಳಬೇಕು ಎಂಬುದು ಸರ್ಕರದ ಉದ್ದೇಶವಾಗಿದೆ. ಆ ನಿಟ್ಟಿನಲ್ಲಿ ಗಂಗಾ ಕಲ್ಯಾಣ ಯೋಜನೆಯಡಿ ಕೊರೆಯುವ ಕೊಳವೆ ಬಾವಿಗಳಿಗೆ ಉಚಿತವಾಗಿ ವಿದ್ಯುತ್ ಸಂಪರ್ಕ ಕಲ್ಪಿಸಬೇಕು ಎಂದು ಹೇಳಿದರು.
ವಿಧಾನ ಪರಿಷತ್ ಸದಸ್ಯ ಹಾಗೂ ಸಮಿತಿ ಸದಸ್ಯರಾದ ಸುನಿಲ್ ಸುಬ್ರಮಣಿ ಅವರು ಹಲವು ವರ್ಷಗಳಿಂದ ಕೊಡಗು ಜಿಲ್ಲೆಯ ಎಲ್ಲಾ ಕೃಷಿಕರಿಗೆ 10 ಹೆಚ್‍ಪಿವರೆಗೆ ಉಚಿತ ವಿದ್ಯುತ್ ಸಂಪರ್ಕ ಕಲ್ಪಿಸಬೇಕೆಂದು ಪ್ರಯತ್ನಗಳು ನಡೆಯುತ್ತಿದ್ದು, ಮುಂದಿನ ಬಜೆಟ್‍ನಲ್ಲಿ ಮುಖ್ಯಮಂತ್ರಿ ಅವರು ಈ ಬಗ್ಗೆ ಪ್ರಕಟಿಸಬಹುದು ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಮಧ್ಯಪ್ರವೇಶಿಸಿ ಮಾತನಾಡಿದ ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಅವರು, ಕೊಡಗು ಜಿಲ್ಲೆಯಲ್ಲಿ 10 ಹೆಚ್‍ಪಿ ವರೆಗೆ ಉಚಿತವಾಗಿ ವಿದ್ಯುತ್ ಕಲ್ಪಿಸಬೇಕು ಎಂಬ ಹೋರಾಟ ನಡೆಯುತ್ತಿದೆ ಎಂದು ಗಮನಕ್ಕೆ ತಂದರು.
ಮತ್ತೊಬ್ಬ ಸದಸ್ಯ ಪ್ರತಾಪ್ ಸಿಂಹ ನಾಯಕ್ ಅವರು, ಈಗಾಗಲೇ ಕೊರೆದಿರುವ ಕೊಳವೆ ಬಾವಿಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಬೇಕು. ಮುಂದಿನ ದಿನಗಳಲ್ಲಿ ಇಂತಹ ಸಮಸ್ಯೆಗಳು ಉಂಟಾಗದಂತೆ ಎಚ್ಚರ ವಹಿಸಬೇಕು ಎಂದು ನಿರ್ದೇಶನ ನೀಡಿದರು. ಸಮಿತಿ ಸದಸ್ಯ ಎಂ.ಎ.ಗೋಪಾಲಸ್ವಾಮಿ ಅವರು, ಬಡವರಿಗೆ ಸರ್ಕಾರದ ಸೌಲಭ್ಯಗಳನ್ನು ಕಲ್ಪಿಸುವಲ್ಲಿ ಪ್ರತಿಯೊಬ್ಬರೂ ಮುಂದಾಗಬೇಕು. ಗಂಗಾ ಕಲ್ಯಾಣ ಯೋಜನೆಯನ್ನು ಬಲಪಡಿಸಬೇಕು. ಯೋಜನೆಗಳು ದುರುಪಯೋಗ ಆಗದಂತೆ ತಡೆಯಬೇಕು. ಬಡವರ ಕಣ್ಣೀರು ಒರೆಸುವ ಕೆಲಸ ಆಗಬೇಕು ಎಂದರು.
ಅಹವಾಲು ಸಲ್ಲಿಕೆ:ಸಭೆಯ ಆರಂಭದಲ್ಲಿ ಮನವಿ ಸಲ್ಲಿಸಿದ ದಿಡ್ಡಳ್ಳಿ ಗ್ರಾಮದ ಮುತ್ತಮ್ಮ ಅವರು ಕೊಳವೆಬಾವಿ ಕೊರೆದ ನಂತರ ವಿದ್ಯುತ್ ಸಂಪರ್ಕ ನೀಡದೆ ಸತಾಯಿಸುತ್ತಿದ್ದಾರೆ. ಮೋಟಾರ್ ಅಳವಡಿಸದೆ ತುಕ್ಕು ಹಿಡಿಯುತ್ತಿವೆ. ವಿದ್ಯುತ್ ಬಿಲ್ ಮಾತ್ರ ಬರುತ್ತಿದೆ ಎಂದು ಅಳಲು ತೋಡಿಕೊಂಡರು.
ಚೆನ್ನಯ್ಯನಕೋಟೆ ಗ್ರಾ,ಪಂ.ವ್ಯಾಪ್ತಿ ಹಾಡಿಯ ಚಂದ್ರ ಅವರು, ಅರಣ್ಯ ಹಕ್ಕುಪತ್ರ ಭೂಮಿಯಲ್ಲಿ ಕೊಳವೆ ಬಾವಿ ಕೊರೆಯಲಾಗಿದೆ. ಆದರೆ ವಿದ್ಯುತ್ ಸಂಪರ್ಕ ಕಲ್ಪಿಸಲು ತೊಂದರೆ ನೀಡುತ್ತಿದ್ದಾರೆ ಎಂದು ಅಧ್ಯಕ್ಷರ ಗಮನಕ್ಕೆ ತಂದರು.
ಸಿದ್ದಪ್ಪ ಮತ್ತು ರಾಜಣ್ಣ ಅವರು ವಿದ್ಯುತ್ ಮಾರ್ಗ ಇದೆ. ಆದರೆ ಕೊಳವೆ ಬಾವಿಗೆ ವಿದ್ಯುತ್ ಸಂಪರ್ಕ ಕಲ್ಪಿಸಿಲ್ಲ. ವಿದ್ಯುತ್ ಬಿಲ್ ಮಾತ್ರ ಪ್ರತೀ ತಿಂಗಳು ಬರುತ್ತಿದ್ದು, ಸಾಲಗಾರರನ್ನಾಗಿ ಮಾಡುತ್ತಿರುವುದರಿಂದ ಬದುಕು ಸಾಗಿಸುವುದೇ ದುಸ್ತರವಾಗಿದೆ ಎಂದು ನೋವು ತೋಡಿಕೊಂಡರು.
ಕಳೆದ 16 ವರ್ಷಗಳಿಂದ ಕೊಳವೆ ಬಾವಿಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಿಲ್ಲ. ಅರಣ್ಯ ಹಕ್ಕು ಕಾಯ್ದೆಯಡಿ ನೀಡಿರುವ ಭೂಮಿಯಲ್ಲಿ ಜೀವನ ಸಾಗಿಸಲಾಗುತ್ತಿದೆ. ಇದಕ್ಕೂ ಸರಿಯಾದ ರೀತಿಯಲ್ಲಿ ವ್ಯವಸ್ಥೆ ಇಲ್ಲದಿರುವುದು ಆದಿವಾಸಿ ಜನರ ಬದುಕು-ಬವಣೆ ಹೇಳತೀರದು ಎಂದರು.
ಗಂಭೀರ ಪರಿಗಣನೆ: ಮಾಹಿತಿ ಪಡೆದ ಸಮಿತಿ ಅಧ್ಯಕ್ಷ ನಾರಾಯಣ ಸ್ವಾಮಿ ಅವರು ಕೊಳವೆ ಬಾವಿಗಳಿಗೆ ಉಚಿತವಾಗಿ ವಿದ್ಯುತ್ ಸಂಪರ್ಕ ಕಲ್ಪಿಸದಿರುವುದರಿಂದ ಇಲ್ಲಿನ ಜನರಿಗೆ ಅನ್ಯಾಯವಾಗಿದ್ದು, ಇದನ್ನು ಸಮಿತಿ ಗಂಭೀರವಾಗಿ ಪರಿಗಣಿಸಿದೆ. ಕೊಳವೆ ಬಾವಿ ಕೊರೆದ ಪಂಪ್‍ಸೆಟ್‍ನಿಂದ ಯಾವ ಬೆಳೆಗೆ ನೀರು ಬಳಸುತ್ತಾರೆ ಎಂಬುದು ಮುಖ್ಯವಲ್ಲ. ಗಂಗಾ ಕಲ್ಯಾಣ ಯೋಜನೆಯಡಿ ಕೊರೆಸಿದ ಎಲ್ಲಾ ಕೊಳವೆ ಬಾವಿಗಳಿಗೂ ಉಚಿತವಾಗಿ ವಿದ್ಯುತ್ ಸಂಪರ್ಕ ಕಲ್ಪಿಸಬೇಕು ಎಂದು ಅವರು ತಿಳಿಸಿದರು.
ಕೊಳವೆ ಬಾವಿ ಕೊರೆಯಲು ಲಾರಿಯೇ ಹೋಗಿದ್ದ ಮೇಲೆ ವಿದ್ಯುತ್ ಸಂಪರ್ಕ ಕಲ್ಪಿಸಲು ಏಕೆ ತೊಂದರೆ ಎಂದು ಅಧ್ಯಕ್ಷರು ಪ್ರಶ್ನಿಸಿದರು. ಕೊಳವೆ ಬಾವಿಗೆ 2018-19 ರಲ್ಲಿ ಟೆಂಡರ್ ಆಹ್ವಾನಿಸಿ ಇದುವರೆಗೆ ಕೊಳವೆ ಬಾವಿ ಕೊರೆಯದಿದ್ದಲ್ಲಿ ತಕ್ಷಣವೇ ಕೊರೆಸುವಂತೆ ಸೂಚಿಸಿದರು.
ಸೆಸ್ಕ್ ಎಇಇ ಸುರೇಶ್ ಅವರು ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದಿಂದ ಆಗಬೇಕಿರುವ ಕೆಲಸವನ್ನು ನಿರ್ವಹಿಸಲಾಗಿದೆ ಎಂದರು.

ಅಂಬೇಡ್ಕರ್ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕ ಚಂದ್ರಶೇಖರ್ ಅವರು ಗಂಗಾ ಕಲ್ಯಾಣ ಯೋಜನೆಯಡಿ ವಾಲ್ಮೀಕಿ ಪರಿಶಿಷ್ಟ ಪಂಗಡ ಅಭಿವೃದ್ಧಿ ನಿಗಮದಿಂದ 39 ಕೊಳವೆ ಬಾವಿಗಳಿಗೆ ವಿದ್ಯುದ್ದೀಕರಣಗೊಳಿಸಲು ಬಾಕಿ ಇದೆ ಎಂದು ಮಾಹಿತಿ ನೀಡಿದರು.
ವಿವಿಧ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಾದ ಸುರೇಶ್ ಕುಮಾರ್, ಟಿ.ಕುಮಾರ್, ಕವಿತಾ ವಾರಂಗಲ್, ರವಿ, ನಾಸಿರ್ ಹಾಗೂ ಹಿಂದುಳಿದ ವರ್ಗ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕಿ ಶೋಭಾ ಅವರು ಗಂಗಾ ಕಲ್ಯಾಣ ಯೋಜನೆ ಅನುಷ್ಠಾನ ಸಂಬಂಧಿಸಿದಂತೆ ಹಲವು ಮಾಹಿತಿ ನೀಡಿದರು.
ಜಿ.ಪಂ.ಸಿಇಒ ಭನ್ವರ್ ಸಿಂಗ್ ಮೀನಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕ್ಷಮಾ ಮಿಶ್ರಾ, ನಗರಸಭೆ ಅಧ್ಯಕ್ಷೆ ಅನಿತಾ ಪೂವಯ್ಯ ಮತ್ತಿತರರು ಇದ್ದರು.
ಕೊಳವೆ ಬಾವಿ ಪರಿಶೀಲನೆ: ಕರ್ನಾಟಕ ವಿಧಾನ ಪರಿಷತ್ತಿನ ಗಂಗಾ ಕಲ್ಯಾಣ ವಿಶೇಷ ಸದನ ಸಮಿತಿ ಅಧ್ಯಕ್ಷ ಡಾ.ವೈ.ಎ.ನಾರಾಯಣಸ್ವಾಮಿ ಮತ್ತು ಸದಸ್ಯರು ಮಂಗಳವಾರ ತೊರೆನೂರು ಗ್ರಾಮಕ್ಕೆ ಭೇಟಿ ನೀಡಿ ಕೊಳವೆ ಬಾವಿ ಪರಿಶೀಲಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!