ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ’ಮಾಚಿದೇವ ಶ್ರೀ ಪ್ರಶಸ್ತಿ’

ಹೊಸದಿಗಂತ ವರದಿ, ಚಿತ್ರದುರ್ಗ:

ಜಗದ್ಗುರು ಶ್ರೀ ಮಾಚಿದೇವ ಮಹಾಸಂಸ್ಥಾನ ಮಠದ ಶಂಕುಸ್ಥಾಪನೆಯ ೧೩ನೇ ವಾರ್ಷಿಕೋತ್ಸವ, ಮಹಾಸ್ವಾಮಿಗಳವರ ೨೩ನೇ ಜಂಗಮದೀಕ್ಷೆ ಹಾಗೂ ೩೮ನೇ ಜನ್ಮದಿನ ಮತ್ತು ಡಾ. ಶ್ರೀ ಬಸವ ಮಾಚಿದೇವ ಮಹಾಸ್ವಾಮಿಗಳವರ ೪ನೇ ಪಟ್ಟಾಧಿಕಾರ ಮಹೋತ್ಸವದ ಅಂಗವಾಗಿ ಜ.೫ ಮತ್ತು ೬ ರಂದು ಕಾಯಕ ಜನೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಮಡಿವಾಳ ಗುರುಪೀಠದ ಡಾ. ಶ್ರೀ ಬಸವ ಮಾಚಿದೇವ ಸ್ವಾಮೀಜಿ ತಿಳಿಸಿದರು.
ಮಠದ ಆವರಣದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜ.೫ ರಂದು ನಡೆಯುವ ಕಾರ್ಯಕ್ರಮವನ್ನು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಉದ್ಘಾಟಿಸುವರು. ಡಾ. ಬಸವ ಮಾಚಿದೇವ ಮಹಾಸ್ವಾಮಿಗಳವರ ಪೀಠಾರೋಹಣ, ವಧುವರರ ಸಮಾವೇಶ, ಸರಳ ಸಾಮೂಹಿಕ ವಿವಾಹ, ಮಹಿಳಾ ಸಮಾವೇಶ, ಸುಪ್ರಸಿದ್ಧ ಕಲಾಕಾರರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
ಜ.೬ ರಂದು ನಡೆಯುವ ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪ್ರಪ್ರಥಮ ’ಮಾಚಿದೇವ ಶ್ರೀ ಪ್ರಶಸ್ತಿ’ ನೀಡಲಾಗುವುದು. ಪ್ರಶಸ್ತಿಯು ೨೫ ಸಾವಿರ ರೂ. ನಗದು ಹಾಗೂ ಪ್ರಶಸ್ತಿ ಫಲಕವನ್ನು ಒಳಗೊಂಡಿದೆ. ಮಡಿವಾಳ ಜನಾಂಗೀಯ ಅಧ್ಯಯನ ಮಾಡಿ ಮಡಿವಾಳರನ್ನು ಪರಿಶಿಷ್ಟ ಜಾತಿಯಲ್ಲಿ ಸೇರ್ಪಡೆ ಮಾಡಬೇಕೆಂದು ಸರ್ಕಾರಕ್ಕೆ ಶಿಫಾರಸ್ಸು ಮಾಡಿ ವರದಿ ಸಲ್ಲಿಸಿರುವ ಮೈಸೂರು ವಿಶ್ವವಿದ್ಯಾಲಯದ ಪ್ರೊ.ಅನ್ನಪೂರ್ಣಮ್ಮ ಅವರಿಗೆ ಪ್ರಪ್ರಥಮ ’ಮಲ್ಲಿಗೆಮ್ಮ ಮಾತೋಶ್ರೀ ಪ್ರಶಸ್ತಿ’ ಪ್ರದಾನ ಮಾಡಲಾಗುವುದು. ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಅಧ್ಯಕ್ಷತೆ ವಹಿಸುವರು ಎಂದರು.
ಮಡಿವಾಳ ಸಮುದಾಯದ ಪ್ರಗತಿಗೆ ದೋಭಿ ಘಾಟಗಳ ನಿರ್ಮಾಣ, ಸಮುದಾಯ ಭವನಗಳ ನಿರ್ಮಾಣ, ವಸತಿ ಮನೆಗಳ ಹಂಚಿಕೆಯಲ್ಲಿ ಗಣನೀಯವಾಗಿ ಸಹಾಯ ಮಾಡಿರುವ ತೋಟಗಾರಿಕೆ ಇಲಾಖೆ ಸಚಿವ ಆರ್.ಮುನಿರತ್ನ, ಕೊಪ್ಪಳ ಸಂಸದ ಕರಡಿ ಸಂಗಣ್ಣ, ಹಗರಿಬೊಮ್ಮಹಳ್ಳಿ ಶಾಸಕ ಭೀಮಾ ನಾಯಕ, ಚಿಕ್ಕಪೇಟೆ ಶಾಸಕ ಉದಯ ಗರುಡಾಚಾರ್, ಮಾಜಿ ಸಚಿವ ಹೆಚ್.ಆಂಜನೇಯ ಅವರಿಗೆ ’ಮಾಚಿದೇವ ರತ್ನ’ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ತಿಳಿಸಿದರು.

ಮಡಿವಾಳ ಸಮಾಜವನ್ನು ಕಟ್ಟುವಲ್ಲಿ ಅನುಪಮ ಸೇವೆ ಮಾಡಿರುವ ಶರಣ ಸಾಹಿತಿ ಸಂಶೋಧಕ ರೋಣ ತಾಲೂಕಿನ ಬಸವಂತಪ್ಪ ಮಡಿವಾಳರ, ಗುಲಬರ್ಗಾ ವಿಶ್ವವಿದ್ಯಲಯ ಕುಲಪತಿಗಳಾದ ಡಾ. ದಯಾನಂದ ಅಗಸರ, ಕಬ್ಬು ಅಭಿವೃದ್ಧಿ ಮತ್ತು ಸಕ್ಕರೆ ಇಲಾಖೆ ಆಯುಕ್ತರಾದ ಶಿವಾನಂದ ಕಲಕೇರಿ, ನಗರಾಭಿವೃದ್ಧಿ ಪ್ರಾಧಿಕಾರ ಆಯುಕ್ತ ಶರಣಪ್ಪ ರಾಯಚೂರು, ಸಮಾಜದ ಮುಖಂಡರಾದ ಹರಪನಹಳ್ಳಿ ಅಶೋಕ, ಉಮೇಶ ಎಲ್., ಮಹದೇವಪ್ಪ ಯಾದಗಿರಿ, ಕೆ.ವಿ, ಅಮರನಾಥ, ಶಂಕ್ರಣ್ಣ ತಿಪಟೂರು, ಬಿ.ಆರ್. ಪ್ರಕಾಶ, ಡಾ.ವಿ. ಬಸವರಾಜ, ಮಂಜುನಾಥ ಸ್ವರೂಪ ಇವರುಗಳಿಗೆ ’ಮಾಚಿದೇವ ಸೇವಾ ರತ್ನ’ ಪ್ರಶಸ್ತಿ ಮತ್ತು ಮಡಿವಾಳ ಸಮುದಾಯದ ವಿವಿಧ ಪ್ರತಿಭಾವಂತರಿಗೆ, ಕಲಾವಿದರಿಗೆ ವಿವಿಧ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಗುವುದು ಎಂದರು.
ಚಿತ್ರದುರ್ಗ ಮುರುಘಾಮಠದ ಡಾ ಶಿವಮೂರ್ತಿ ಮುರುಘಾ ಶರಣರು, ಕಲಘಟಗಿ ಶ್ರೀ ಗುರುದೇವ ತಪೋವನದ ಪೀಠಾಧಿಪತಿಗಳಾದ ಗುರುಮಾತಾ ನಂದಾತಾಯಿಯವರು, ಸ್ವಾತಂತ್ರ್ಯ ಹೋರಾಟಗಾರರಾದ ಮಾತಾಜಿ ಚನ್ನಮ್ಮಾ ಹಳ್ಳಿಕೇರಿಯವರು ಮತ್ತು ಹರಗುರು ಚರಮೂರ್ತಿಗಳು ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯ ವಹಿಸಲಿದ್ದಾರೆ ಎಂದು ಹೇಳಿದರು.
ಶ್ರೀಮಠದ ಕಾರ್ಯರ್ಶಿ ಡಾ.ಸಂಗಮೇಶ ಕಲಹಾಳ, ಜಿಲ್ಲಾ ಮಡಿವಾಳರ ಸಂಘದ ಅಧ್ಯಕ್ಷ ರಾಮಜ್ಜ, ಜಿಲ್ಲಾ ಕಾರ್ಯದರ್ಶಿ ಕರವೇ ಮಂಜುನಾಥ, ಮಠದ ಧರ್ಮದರ್ಶಿಗಳಾದ ಪ್ರೊ. ಎ.ಆರ್.ಮಂಜುನಾಥ, ಶಂಕ್ರಣ್ಣ ತಿಪಟೂರು, ರಾಜ್ಯ ಮಹಿಳಾ ಅಧ್ಯಕ್ಷೆ ವಿಜಯಲಕ್ಷ್ಮೀ, ಪದಾಧಿಕಾರಿಗಳಾದ ಭಾರತಿ, ರುದ್ರ್ರಾಣಿ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!