September 29, 2026
Tuesday, September 29, 2026
spot_img

ಉದ್ಯಮಿ ಮನೆ ಮುಂದೆ ಗ್ಯಾಂಗ್‌ಸ್ಟರ್ಸ್ ಅಟ್ಟಹಾಸ: ನಾಲ್ವರು ಶೂಟರ್ಸ್ ಖಲಾಸ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಹರಿಯಾಣದ ಅತ್ಯಂತ ಪ್ರಸಿದ್ಧ ಹಾಗೂ ಐಷಾರಾಮಿ ವಸತಿ ಪ್ರದೇಶವಾದ ಗುರುಗ್ರಾಮ್‌ನ ‘ಸುಶಾಂತ್ ಲೋಕ್’ ಇತ್ತೀಚೆಗೆ ರಣರಂಗವಾಗಿ ಮಾರ್ಪಟ್ಟಿತ್ತು. ವಿದೇಶದಲ್ಲಿ ತಲೆಮರೆಸಿಕೊಂಡಿರುವ ಕುಖ್ಯಾತ ಗ್ಯಾಂಗ್‌ಸ್ಟರ್ ದೀಪಕ್ ನಂದಲ್ ಸೂಚನೆಯಂತೆ ಬಂದಿದ್ದ ಐದು ಜನ ಶೂಟರ್‌ಗಳು ಹಾಗೂ ಹರಿಯಾಣ ಕ್ರೈಂ ಬ್ರಾಂಚ್ ಪೊಲೀಸರ ನಡುವೆ ಭೀಕರ ಸಶಸ್ತ್ರ ಸಂಘರ್ಷ ನಡೆದಿದೆ. ಈ ಶೂಟೌಟ್‌ನಲ್ಲಿ ನಾಲ್ವರು ದುಷ್ಕರ್ಮಿಗಳು ಸ್ಥಳದಲ್ಲೇ ಹತರಾಗಿದ್ದಾರೆ.

ಹಣಕ್ಕಾಗಿ ಉದ್ಯಮಿ ಮನೆಗೆ ಲಗ್ಗೆ

ಗುರುವಾರ ರಾತ್ರಿ ಸುಮಾರು 9.50 ರ ವೇಳೆಗೆ ಕಪ್ಪು ಬಣ್ಣದ ಸ್ಕಾರ್ಪಿಯೋ ವಾಹನದಲ್ಲಿ ಬಂದ ಶೂಟರ್‌ಗಳು, ಹಫ್ತಾ ವಸೂಲಿಗೆ ಒಪ್ಪದ ಪ್ರಮುಖ ಉದ್ಯಮಿ ವಿಶಾಲ್ ಬೆರಿ ಅವರ ಬಂಗಲೆಯ ಮೇಲೆ ಮನಸೋಇಚ್ಛೆ ಗುಂಡು ಹಾರಿಸಿದ್ದಾರೆ. ಈ ದಾಳಿಯ ದೃಶ್ಯವನ್ನು ವಿದೇಶದಲ್ಲಿರುವ ತಮ್ಮ ಬಾಸ್‌ಗೆ ತೋರಿಸಲು ಮೊಬೈಲ್‌ನಲ್ಲಿ ವಿಡಿಯೋ ಕೂಡ ರೆಕಾರ್ಡ್ ಮಾಡಲಾಗುತ್ತಿತ್ತು. ಆದರೆ, ಇಂಟೆಲಿಜೆನ್ಸ್ ನೀಡಿದ ನಿಖರ ಮಾಹಿತಿ ಮೇರೆಗೆ 30ಕ್ಕೂ ಹೆಚ್ಚು ಪೊಲೀಸರ ದಂಡು ಈಗಾಗಲೇ ಅಲ್ಲಿ ಜಾಲ ಹೆಣೆದು ಕಾಯುತ್ತಿತ್ತು.

120 ಸೆಕೆಂಡ್‌ಗಳ ಭೀಕರ ಶೂಟೌಟ್‌

ಪೊಲೀಸರು ಸುತ್ತುವರಿಯುತ್ತಿದ್ದಂತೆ ತಪ್ಪಿಸಿಕೊಳ್ಳಲು ಯತ್ನಿಸಿದ ಗ್ಯಾಂಗ್, ಆಟೋಮ್ಯಾಟಿಕ್ ಪಿಸ್ತೂಲ್‌ಗಳಿಂದ ಸತತ 40ಕ್ಕೂ ಹೆಚ್ಚು ರೌಂಡ್ ಫೈರಿಂಗ್ ನಡೆಸಿದೆ. ಇದಕ್ಕೆ ಪ್ರತಿಯಾಗಿ ಪೊಲೀಸರು ಲಾಂಗ್ ರೇಂಜ್ ಗನ್‌ಗಳ ಮೂಲಕ ತಿರುಗೇಟು ನೀಡಿದ್ದಾರೆ. ಕೇವಲ ಎರಡು ನಿಮಿಷಗಳ ಕಾಲ ನಡೆದ ಈ ಭೀಕರ ಕಾಳಗದಲ್ಲಿ ಒಟ್ಟು 60ಕ್ಕೂ ಹೆಚ್ಚು ಸುತ್ತು ಗುಂಡುಗಳು ಸಿಡಿದಿವೆ.

ದಾಳಿಯ ಪರಿಣಾಮವಾಗಿ ಶೂಟರ್‌ಗಳಾದ ದೀಪಾ (35), ನಿತಿನ್ (22), ಅಂಕಿತ್ (18) ಹಾಗೂ ಒಬ್ಬ ಅಪ್ರಾಪ್ತ ವಿದ್ಯಾರ್ಥಿ ಸಾವನ್ನಪ್ಪಿದ್ದಾರೆ. ಶಿವಂ ಎಂಬಾತ ತೀವ್ರ ಗಾಯಗೊಂಡಿದ್ದು, ಮೇದಾಂತ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಕಾರ್ಯಾಚರಣೆಯಲ್ಲಿ ಮೂವರು ಪೊಲೀಸರೂ ಗಾಯಗೊಂಡಿದ್ದಾರೆ. ಸದ್ಯ ಘಟನಾ ಸ್ಥಳದಿಂದ ಐದು ಅತ್ಯಾಧುನಿಕ ಪಿಸ್ತೂಲ್‌ಗಳು ಹಾಗೂ ಕಾರನ್ನು ವಶಪಡಿಸಿಕೊಳ್ಳಲಾಗಿದ್ದು, ಇಡೀ ಪ್ರದೇಶ ಪೊಲೀಸ್ ಕಾವಲಿನಲ್ಲಿದೆ.

Must Read