ಹೊಸದಿಗಂತ ಡಿಜಿಟಲ್ ಡೆಸ್ಕ್:
ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ನೀಡಿರುವ ಭರವಸೆ ಮೇರೆಗೆ ಕಸದ ಲಾರಿ ಹಾಗೂ ಆಟೋ ಚಾಲಕರು ತಮ್ಮ ಮುಷ್ಕರವನ್ನು ಹಿಂಪಡೆದಿದ್ದಾರೆ.
ಮನೆ ಮನೆಗಳಿಂದ ಕಸ ಸಂಗ್ರಹಿಸುವ ಹಾಗೂ ವಿಲೇವಾರಿ ಮಾಡುವ ವಾಹನಗಳ ಚಾಲಕರು ಮತ್ತು ಸಹಾಯಕರು ತಮ್ಮ ಸೇವೆಯನ್ನು ಬಿಬಿಎಂಪಿಯಲ್ಲಿ ಕಾಯಂ ವಿಲೀನ ಮಾಡಿಕೊಳ್ಳುವಂತೆ ಆಗ್ರಹಿಸಿ ಸೋಮವಾರದಿಂದ ಆಮರಣಾಂತ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದರು.
ಪಿಡಿ ಸಾಲಪ್ಪನವರ ವರದಿ ಜಾರಿಗೊಳಿಸಬೇಕು. 2023ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯಲ್ಲಿ ಮತ್ತು ರಾಹುಲ್ ಗಾಂಧಿಯವರು ನೀಡಿದ ಭರವಸೆಯಂತೆ ಚಾಲಕರು, ಸಹಾಯಕರು, ಲೋಡರ್ಸ್‌ಗಳ ಸೇವೆಯನ್ನು ಕಾಯಂ ವಿಲೀನಗೊಳಿಸಬೇಕು ಎಂದು ಹೇಳಿದ್ದರು.
ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಸೋಮವಾರದಿಂದ ಕರ್ನಾಟಕ ಸಂರಕ್ಷಣಾ ಟ್ರೇಡ್ ಯೂನಿಯನ್ ಸಂಘಟನೆಯಡಿ ಅನಿರ್ದಿಷ್ಟಾವಧಿ ಪ್ರತಿಭಟನೆ ನಡೆಸುತ್ತಿದ್ದರು. ಕಳೆದ ಎರಡು ದಿನಗಳಿಂದ ನಡೆಯುತ್ತಿದ್ದ ಹೋರಾಟದಿಂದ ನಗರದಲ್ಲಿ ತ್ಯಾಜ್ಯ ವಿಲೇವಾರಿ ಸಮಸ್ಯೆ ಎದುರಾಗಿತ್ತು. ಸಾವಿರ ಟನ್ಗೂ ಹೆಚ್ಚಿನ ಕಸ ವಿಲೇವಾರಿಯಾಗಿರಲಿಲ್ಲ. ಬುಧವಾರದಿಂದ ಕಸ ಸಂಗ್ರಹ ವಿಲೇವಾರಿ ಕೆಲಸ ಆರಂಭಿಸುವುದಾಗಿ ಮುಖಂಡರು ಹೇಳಿದ್ದಾರೆ