ಫೇಸ್‌ಬುಕ್‌ ಮಾತೃಸಂಸ್ಥೆ ಮೆಟಾದಿಂದ 11 ಸಾವಿರ ಉದ್ಯೋಗಿಗಳಿಗೆ ಗೇಟ್‌ಪಾಸ್‌: ಮಾರ್ಕ್ ಝುಕರ್​ಬರ್ಗ್ ಘೋಷಣೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಫೇಸ್‌ಬುಕ್‌ನ ಮಾತೃಸಂಸ್ಥೆ ಮೆಟಾ ಫ್ಲಾಟ್‌ಫಾರ್ಮ್‌ ಇಂಕ್‌ 11,000 ಉದ್ಯೋಗಿಗಳನ್ನು ಕೆಲಸದಿಂದ ವಜಾಗೊಳಿಸಲಿದೆ ಎಂದು ಕಂಪನಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ (ಸಿಇಒ) ಮಾರ್ಕ್ ಝುಕರ್​ಬರ್ಗ್ ಬಹಿರಂಗಪಡಿಸಿದ್ದಾರೆ.

ಅಧಿಕೃತ ಬ್ಲಾಗ್​ಪೋಸ್ಟ್​ನಲ್ಲಿ ಉದ್ಯೋಗಿಗಳನ್ನು ಉದ್ದೇಶಿಸಿ ಬರೆದ ಪತ್ರದಲ್ಲಿ ಜಾಗತಿಕವಾಗಿ ಕಂಪನಿಯ ಶೇಕಡಾ 13ರಷ್ಟು ಉದ್ಯೋಗಿಗಳನ್ನು ವಜಾಗೊಳಿಸುವುದಾಗಿ ಉಲ್ಲೇಖಿಸಿದ್ದಾರೆ.

ಕಂಪನಿಯು ಅಪಾರ ನಷ್ಟ ಅನುಭವಿಸುತ್ತಿದ್ದು ಈ ಕಠಿಣ ಕ್ರಮ ಅನಿವಾರ್ಯವಾಗಿದೆ ಎಂದು ಅವರು ತಿಳಿಸಿದ್ದಾರೆ.

‘ಮೆಟಾದ ಇತಿಹಾಸದಲ್ಲೇ ತುಂಬಾ ಕಠಿಣ ನಿರ್ಧಾರ ಕೈಗೊಳ್ಳುತ್ತಿರುವ ಬಗ್ಗೆ ನಾನಿಂದು ಮಾಹಿತಿ ಹಂಚಿಕೊಳ್ಳುತ್ತಿದ್ದೇನೆ. ಕಂಪನಿಯ ಉದ್ಯೋಗಿಗಳ ಪ್ರಮಾಣದಲ್ಲಿ ಶೇಕಡಾ 13ರಷ್ಟನ್ನು ಕಡಿತ ಮಾಡಲು ನಿರ್ಧರಿಸಿದ್ದೇನೆ. 11,000ಕ್ಕೂ ಹೆಚ್ಚು ಪ್ರತಿಭಾವಂತ ಉದ್ಯೋಗಿಗಳು ನಮ್ಮ ತಂಡದಿಂದ ಹೊರಹೋಗಬೇಕಿದೆ. ವೆಚ್ಚವನ್ನು ಕಡಿತಗೊಳಿಸಲು ಈ ಕ್ರಮ ಕೈಗೊಳ್ಳಲಾಗುತ್ತಿದೆ. ಒಂದನೇ ತ್ರೈಮಾಸಿಕ ಅವಧಿಯಲ್ಲಿ ನೇಮಕಾತಿ ಪ್ರಕ್ರಿಯೆಗೆ ತಡೆ ಹಿಡಿಯಲಾಗಿತ್ತು. ಅದು ಹಾಗೆಯೇ ಮುಂದುವರಿಯಲಿದೆ. ಈ ಮೂಲಕ ಕಂಪನಿಯನ್ನು ಇನ್ನಷ್ಟು ದಕ್ಷವಾಗಿ ಕಾರ್ಯನಿರ್ವಹಿಸುವಂತೆ ಮಾಡಬೇಕಿದೆ ಎಂದು ಹೇಳಿದ್ದಾರೆ.

ಈ ನಿರ್ಧಾರ ಯಾಕೆ ತೆಗೆದುಕೊಳ್ಳಬೇಕಾಯಿತು ಮತ್ತು ನಾವು ಯಾಕೆ ಈ ಸ್ಥಿತಿಗೆ ಬಂದೆವು ಎಂಬುದನ್ನು ವಿವರಿಸುವ ಹೊಣೆಗಾರಿಕೆ ನನ್ನದು. ಇದು ಎಲ್ಲರಿಗೂ ಕಠಿಣ ಸಮಯವಾಗಿದೆ ಎಂಬುದು ನನಗೆ ತಿಳಿದಿದೆ ಮತ್ತು ಇದರಿಂದ ತೊಂದರೆಗೊಳಗಾದವರ ಬಗ್ಗೆ ವಿಷಾದವಿದೆ ಎಂದು ಅವರು ಹೇಳಿದ್ದಾರೆ.

ಪ್ರತಿಯೊಬ್ಬರಿಗೂ ಬೀಳ್ಕೊಡುಗೆ ಮಾಡುವುದಕ್ಕಾಗಿ ಇ-ಮೇಲ್ ವಿಳಾಸವನ್ನು ಉಳಿಸಿಕೊಳ್ಳಲಿದ್ದೇವೆ. ಉದ್ಯೋಗ ಕಡಿತದಿಂದ ತೊಂದರೆಗೆ ಒಳಗಾಗುವ ಉದ್ಯೋಗಿಯು ಪ್ರಶ್ನೆಗಳನ್ನು ಕೇಳಲು ಮತ್ತು ಇತರರೊಂದಿಗೆ ಸಂವಹನ ನಡೆಸಲು ಅರ್ಹರಾಗಿರುತ್ತಾರೆ. ಅದಕ್ಕೆ ಅವಕಾಶ ನೀಡಲಾಗುವುದು ಎಂದು ಅವರು ತಿಳಿಸಿದ್ದಾರೆ.

ವಜಾಗೊಳ್ಳುವ ಅಮೆರಿಕದ ಉದ್ಯೋಗಿಗಳಿಗೆ 16 ವಾರಗಳ ಬೇರ್ಪಡಿಕೆ ವೇತನ (Severance pay) ನೀಡಲಾಗುವುದು ಎಂದೂ ಝುಕರ್​ಬರ್ಗ್ ಮಾಹಿತಿ ನೀಡಿದ್ದಾರೆ. ಜೊತೆಗೆ ಉದ್ಯೋಗಿಗಳ ಕುಟುಂಬದವರಿಗೆ ಒದಗಿಸಲಾಗಿರುವ ಆರೋಗ್ಯ ಸೌಲಭ್ಯಗಳು 6 ತಿಂಗಳವರೆಗೆ ಮುಂದುವರಿಯಲಿದೆ ಎಂದೂ ಅವರು ಹೇಳಿದ್ದಾರೆ.

ವೀಸಾ ಪಡೆದು ಇಲ್ಲಿದ್ದರೆ (ಅಮೆರಿಕ) ಇದು ವಿಶೇಷವಾಗಿ ಕಷ್ಟಕರ ಸಮಯ ಎಂಬುದು ಎಂದು ನನಗೆ ತಿಳಿದಿದೆ. ಉದ್ಯೋಗದಿಂದ ತೆರವಾಗುವುದಕ್ಕೂ ಮೊದಲು ನೊಟೀಸ್ ಅವಧಿ ಮತ್ತು ವೀಸಾ ಸಂಬಂಧಿತ ಕೆಲವು ಗ್ರೇಸ್ ಅವಧಿಗಳು ನಿಮಗೆ ದೊರೆಯಲಿವೆ. ಅಂದರೆ ಪ್ರತಿಯೊಬ್ಬರೂ ತಮ್ಮ ವಲಸೆ ಸ್ಥಿತಿಗತಿ ಹಾಗೂ ಸಂಬಂಧಿತ ಯೋಜನೆಗಳನ್ನು ರೂಪಿಸಲು ಮತ್ತು ಅದಕ್ಕಾಗಿ ಕಾರ್ಯನಿರ್ವಹಿಸಲು ಸಮಯಾವಕಾಶ ದೊರೆಯಲಿದೆ. ಇದಕ್ಕಾಗಿ ವ್ಯವಸ್ಥೆ ಮಾಡಲಾಗುವುದು ಎಂದು ಝುಕರ್​ಬರ್ಗ್ ಭರವಸೆ ನೀಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!