ಹಿಂದು ನಿಂದನೆಯೊಂದಿಗೆ ಕೆಟ್ಟಕಾಲಕ್ಕೆ ಕಾಲಿಟ್ಟ ಕಾಂಗ್ರೆಸ್: ಜನಸ್ಪಂದನದಲ್ಲಿ ಸಿಎಂ ಬೊಮ್ಮಾಯಿ ವಾಗ್ದಾಳಿ

ಹೊಸ ದಿಗಂತ ಡಿಜಿಟಲ್ ಡೆಸ್ಕ್

ಹಿಂದು ನಿಂದನೆಗೆ ಇಳಿಯುವದರೊಂದಿಗೆ ಕಾಂಗ್ರೆಸ್ ಪಕ್ಷಕ್ಕೆ ಕೆಟ್ಟ ಕಾಲ ಬಂದಿದೆ ಎಂದು ಬೆಳಗಾವಿಯಲ್ಲಿ ನಡೆದ ಜನಸ್ಪಂದನ ಯಾತ್ರೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಾಗ್ದಾಳಿ ನಡೆಸಿದರು.

“ಒಂದೆಡೆ ಶಿವಕುಮಾರ್- ಸಿದ್ರಾಮಣ್ಣನ ಜಗಳ ಮುಗಿದಿಲ್ಲ. ಖರ್ಗೆಯವರು ಮುಳುಗುವ ಹಡಗಾದ ಕಾಂಗ್ರೆಸ್ ಪಕ್ಷದ ಅಖಿಲ ಭಾರತ ಅಧ್ಯಕ್ಷರಾದ ಬಳಿಕ ಸತೀಶ್ ಜಾರಕಿಹೊಳಿ ಹಿಂದೂ ಎಂದರೆ ಹೊಲಸು ಶಬ್ದ ಎಂದು ಹೇಳಿದ್ದಾರೆ. ಹಿಂದೂ ಸಂಸ್ಕೃತಿ ಬಗ್ಗೆ ಅವಹೇಳನ ಮಾಡಿದ ಜಾರಕಿಹೊಳಿ ಚರ್ಚೆಗೆ ಬನ್ನಿ ಎನ್ನುತ್ತಾರೆ” ಎಂದು ಟೀಕಿಸಿದರು ಬೊಮ್ಮಾಯಿ.

ಹಲವು ವಿಕೃತ ಮನಸ್ಸುಗಳು ವಿಕೃತ ಪುಸ್ತಕ ಬರೆದಿರುತ್ತಾರೆ. ಪ್ರಾಂಜಲ ಮನಸ್ಸಿನಿಂದ ಸತ್ಯ ಹೊರಬರುತ್ತದೆ. ಸನಾತನ ಧರ್ಮ ಹಿಂದೂ ಧರ್ಮ. ಅದು ಇಡೀ ಜಗತ್ತಿಗೆ ಬೆಳಕು ತೋರುವ, ಮಾನವೀಯತೆ ಸಾರುತ್ತದೆ. ಇಂಥ ಹಿಂದೂ ಧರ್ಮದ ಬಗ್ಗೆ ಕ್ಷುಲ್ಲಕ ಮಾತನಾಡಿದ್ದಾರೆ ಮತ್ತು ಇದರ ವಿರುದ್ಧ ಕಾಂಗ್ರೆಸ್ಸಿಗರು ಮಾತನಾಡುವುದಿಲ್ಲ ಎಂದಾದರೆ ಅದು ಕಾಂಗ್ರೆಸ್ ಪಕ್ಷಕ್ಕೆ ಕೆಟ್ಟ ಕಾಲ ಎಂದು ವಿಶ್ಲೇಷಿಸಿದರು.
“ಅಧಿಕಾರಕ್ಕಾಗಿ ದೇಶ, ಜನಾಂಗ ಒಡೆಯುವ ಕಾರ್ಯ ಕಾಂಗ್ರೆಸ್ಸಿಗರದು. ನಕ್ಸಲೈಟರಿಗೆ ಬೆಂಬಲ ಕೊಟ್ಟದ್ದಲ್ಲದೆ ಧರ್ಮ ಒಡೆಯುವ ಯತ್ನವನ್ನು ಕಾಂಗ್ರೆಸ್ ಮಾಡಿತ್ತು. ನಾವು ಮನಸ್ಸನ್ನು ಜೋಡಿಸುವವರು. ಆದರೆ, ದೇಶ ಛಿದ್ರ ಮಾಡುವವರಿಗೆ ಪುಷ್ಟಿ ಕೊಡುವ ಚಿಂತನೆ ಕಾಂಗ್ರೆಸ್ಸಿಗರಲ್ಲಿದೆ” ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಾಗ್ದಾಳಿ ನಡೆಸಿದರು.

ಜತೆಯಲ್ಲೇ ಬಿಜೆಪಿ ಸರ್ಕಾರದ ಕಾರ್ಯಗಳನ್ನು ಪಟ್ಟಿ ಮಾಡಿದ ಮುಖ್ಯಮಂತ್ರಿ ಬೊಮ್ಮಾಯಿ, “ಅತಿವೃಷ್ಟಿ ಹಾನಿ ಸಂಬಂಧ ಪರಿಹಾರ ಹೆಚ್ಚಿಸಲಾಗಿದೆ. ರೈತ ವಿದ್ಯಾನಿಧಿ ಯೋಜನೆ ಜಾರಿಗೊಳಿಸಿದ್ದೇವೆ. 10 ಲಕ್ಷ ರೈತ ಕುಟುಂಬಕ್ಕೆ ಪ್ರಯೋಜನ ಸಿಕ್ಕಿದೆ. ರೈತ ಕೂಲಿಕಾರರು, ಕಾರ್ಮಿಕರ ಮಕ್ಕಳಿಗೆ ವಿದ್ಯಾನಿಧಿ ಕೊಡಲಾಗುತ್ತಿದೆ. ಈ ಯೋಜನೆ ದುಡಿಯುವ ವರ್ಗಕ್ಕೆ ಶಕ್ತಿ ತುಂಬುತ್ತಿದೆ” ಎಂದು ವಿವರಿಸಿದರು.
ಸಿದ್ದರಾಮಯ್ಯರ ಅವಧಿಯಲ್ಲಿ ಹಿಂದುಳಿದವರು ಹಿಂದೆಯೇ ಉಳಿದರು. ಕಾಂಗ್ರೆಸ್ ನಾಯಕರು ಮುಂದೆ ಹೋದರು. ಆದರೆ, ನಾವು ಮೀಸಲಾತಿ ಪ್ರಮಾಣ ಹೆಚ್ಚಿಸುವ ಮೂಲಕ ಸಾಮಾಜಿಕ ನ್ಯಾಯ ನೀಡುತ್ತಿದ್ದೇವೆ. ಎಲ್ಲದಕ್ಕೂ ಅಪಸ್ವರ ಎತ್ತುವ ಸಿದ್ರಾಮಣ್ಣನಿಗೆ ತಮ್ಮ ಆಡಳಿತದ ಅವಧಿಯಲ್ಲಿ ಕುರಿಗಾರರ- ಲಂಬಾಣಿ ಜನಾಂಗದ ನೆನಪಾಗಲಿಲ್ಲವೇ ಎಂದು ಪ್ರಶ್ನಿಸಿದರು.

ಸಚಿವ ಗೋವಿಂದ ಕಾರಜೋಳ ಅವರು ಮಾತನಾಡಿ, ಇಲ್ಲಿನ ಸಮಾರಂಭ ವಿಜಯೋತ್ಸವದ ರೀತಿಯಲ್ಲಿದೆ ಎಂದರಲ್ಲದೆ ಉತ್ತರ ಕರ್ನಾಟಕದ ಅಭಿವೃದ್ಧಿ- ಎಲ್ಲ ನೀರಾವರಿ ಯೋಜನೆಗಳನ್ನು ಅನುಷ್ಠಾನಕ್ಕೆ ತರುವ ಆಶಯವನ್ನು ಈಡೇರಿಸಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಬೆಂಬಲ ಕೊಡುವಂತೆ ಮನವಿ ಮಾಡಿದರು.

ಸಚಿವರಾದ ಶಶಿಕಲಾ ಜೊಲ್ಲೆ ಅವರು ಮಾತನಾಡಿ, “ಇಲ್ಲಿ ಸಮಾವೇಶದಲ್ಲಿ ತಾಯಂದಿರ ಸಂಖ್ಯೆಯೂ ಹೆಚ್ಚಾಗಿದೆ. ಇಲ್ಲಿನ ಜನಸಾಗರ ನೋಡಿದರೆ ಬಿಜೆಪಿ ಮತ್ತೆ ಗೆಲ್ಲುವ ವಿಶ್ವಾಸ ವ್ಯಕ್ತವಾಗಿದೆ. ಯಡಿಯೂರಪ್ಪ, ಬೊಮ್ಮಾಯಿ ಅವರ ಸರಕಾರ ಭಾಗ್ಯಲಕ್ಷ್ಮಿ ಯೋಜನೆ ಮೂಲಕ ಹೆಣ್ಮಕ್ಕಳಿಗೆ ಧೈರ್ಯ ಕೊಟ್ಟಿದೆ. ಬೇಟಿ ಬಚಾವೊ, ಬೇಟಿ ಪಡಾವೊ ಮೂಲಕ ಕೇಂದ್ರ ಸರಕಾರವೂ ಹೆಣ್ಣುಮಕ್ಕಳಿಗೆ ಪ್ರೋತ್ಸಾಹ ಕೊಟ್ಟಿದೆ. ಮನೆ ಮನೆಗೆ ಕುಡಿಯುವ ನೀರು ಒದಗಿಸಲಾಗುತ್ತಿದೆ” ಎಂದು ಮೆಚ್ಚುಗೆ ಸೂಚಿಸಿದರು.

ಮಾಜಿ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರು ಮಾತನಾಡಿ, 2023ನೇ ಇಸವಿಯಲ್ಲಿ ಸ್ಥಳೀಯ ಮತ್ತು ರಾಜ್ಯದೆಲ್ಲೆಡೆ ಜನರು ಬಿಜೆಪಿಯನ್ನು ಗೆಲ್ಲಿಸಲಿದ್ದಾರೆ ಎಂದು ನುಡಿದರು.

2023ರಲ್ಲಿ ಇನ್ನಷ್ಟು ಅಭಿವೃದ್ಧಿ ಕಾರ್ಯ ಮಾಡಲು ಬಸವರಾಜ ಬೊಮ್ಮಾಯಿ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಲು ಜನತೆ ಸಿದ್ಧರಿದ್ದಾರೆ ಎಂದರು.

ಸಚಿವ ಬೈರತಿ ಬಸವರಾಜ, ಮುಖಂಡ ಪ್ರಭಾಕರ ಕೋರೆ, ಶಾಸಕರು, ಜನಪ್ರತಿನಿಧಿಗಳು, ಪಕ್ಷದ ಮುಖಂಡರು, ಕಾರ್ಯಕರ್ತರು ಭಾಗವಹಿಸಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!