ಹೊಸದಿಗಂತ ಡಿಜಿಟಲ್ ಡೆಸ್ಕ್:
ದಕ್ಷಿಣದ ಕುಂಭಮೇಳ ಖ್ಯಾತಿಯ ಕೊಪ್ಪಳದ ಗವಿಸಿದ್ದೇಶ್ವರ ಜಾತ್ರಾ ಮಹೋತ್ಸವದ ಕ್ಷಣ ಅದ್ದೂರಿಯಾಗಿ ರಥೋತ್ಸವ ನಡೆಯಿತು. ಲಕ್ಷಾಂತರ ಜನರು ಸಾಗುತ್ತಿರುವ ರಥವನ್ನು ಕಣ್ತುಂಬಿಕೊಂಡು ಪುನೀತರಾದರು.
ಪ್ರಖ್ಯಾತ ಹಿಂದೂಸ್ತಾನಿ ಗಾಯಕ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಧಾರವಾಡದ ಪಂಡಿತ್ ಎಂ.ವೆಂಕಟೇಶ್ ಕುಮಾರ್ ಧ್ವಜಾರೋಹಣ ಮಾಡುವ ಮೂಲಕ ಮಹಾರಥೋತ್ಸವಕ್ಕೆ ಚಾಲನೆ ನೀಡಿದರು. ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ರಥೋತ್ಸವ ಜರುಗಿದೆ. ರಥೋತ್ಸವದಲ್ಲಿ ನಾಡಿನ ಹಲವು ಮಠಾಧೀಶರು ಭಾಗಿಯಾಗಿದ್ದಾರೆ
ಗವಿಮಠದ ಅಂಗಳದಲ್ಲಿ ಭಕ್ತ ಸಾಗರದ ಮಧ್ಯೆ ವೈಭವದಿಂದ ರಥೋತ್ಸವ ನೆರವೇರಿತು. ನೆರೆದಿದ್ದ ಲಕ್ಷಾಂತರ ಭಕ್ತರು ರಥಕ್ಕೆ ಉತ್ತತ್ತಿ, ಹೂ, ಬಾಳೆಹಣ್ಣು ಎಸೆದು ಭಕ್ತಿ ಸಮರ್ಪಿಸಿದರು. ಇದರ ಜೊತೆಗೆ ಜೈ ಗವಿಸಿದ್ದೇಶ ಎಂಬ ನಾಮಸ್ಮರಣೆ ಮುಗಿಲು ಮುಟ್ಟಿತ್ತು.
ಮಹಾರಥೋತ್ಸವ ಹಿನ್ನೆಲೆಯಲ್ಲಿ ಬೆಳಗಿನ ಜಾವವೇ ಗವಿಮಠದ ಗುಹೆಯಲ್ಲಿ ಇರುವ 11ನೇ ಪೀಠಾಧಿಪತಿ ಲಿಂಗೈಕ್ಯ ಗವಿಸಿದ್ಧೇಶ್ವರ ಸ್ವಾಮೀಜಿಯ ಗದ್ದುಗೆಗೆ ವಿಶೇಷ ಪೂಜೆ ಸಲ್ಲಿಸಲಾಗಿತ್ತು. ಸುತ್ತಮುತ್ತಲ ಗ್ರಾಮದ ಭಕ್ತರು ಪಾದಯಾತ್ರೆ ಮೂಲಕ ಬಂದು ಮಹಾರಥೋತ್ಸವದಲ್ಲಿ ಭಾಗಿಯಾದರು.
ಗವಿಸಿದ್ದೇಶ್ವರ ರಥೋತ್ಸವಕ್ಕೆ ಗವಿಸಿದ್ದೇಶ್ವರ ರಥೋತ್ಸವವೇ ಸರಿಸಾಟಿ ಎಂದು ರಥೋತ್ಸವದ ಬಳಿಕ ತುಮಕೂರಿನ ಸಿದ್ದಲಿಂಗ ಸ್ವಾಮೀಜಿ ಹೇಳಿದ್ದಾರೆ. ಎಲ್ಲರ ಚಿತ್ತ ಅಜ್ಜನ ಜಾತ್ರೆಯತ್ತ ಇದೆ. ನಾಲ್ಕೈದು ವರ್ಷಗಳಿಂದ ಶ್ರೀಗಳು ಕರೆಯುತ್ತಿದ್ದರು. ಆದರೆ ಈ ವರ್ಷಭಾಗಿಯಾಗಿದ್ದೇನೆ. ಶ್ರೀಗಳು ಬರೀ ಜಾತ್ರೆ ಮಾಡುವುದಿಲ್ಲ. ಅವರು ಜಾಗೃತಿಯ ಜಾತ್ರೆ ಮಾಡುತ್ತಾರೆ ಗವಿಸಿದ್ದೇಶ್ವರ ಮಠ ದೊಡ್ಟದಾಗಿ ಬೆಳೆದಿದೆ ಎಂದು ಹೇಳಿದ್ದಾರೆ.
ಗವಿಸಿದ್ದೇಶ್ವರ ಜಾತ್ರಾ ಮಹೋತ್ಸವಕ್ಕೆ ಅಂದಾಜು 8 ಲಕ್ಷ ಭಕ್ತರು ಆಗಮಿಸಿದ್ದಾರೆ. ಈ ಸಂಬಂಧ ಪೊಲೀಸ್ ಅಧಿಕಾರಿಗಳು ಬಿಗಿ ಪೊಲೀಸ್ ಬಂದೋಬಸ್ತ್ ಅನ್ನು ಕೈಗೊಳ್ಳಲಾಗಿತ್ತು. ಎಲ್ಲಿಯು ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಸಿಬ್ಬಂದಿ ಎಚ್ಚರಿಕೆ ವಹಿಸಿದ್ದರು.