ಹೊಸದಿಗಂತ ಡಿಜಿಟಲ್ ಡೆಸ್ಕ್:
ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಶಿರ್ಲಾಲಿನ ಜಾರ್ಕಳ ಮುಂಡ್ಲಿಯಲ್ಲಿ ನಡೆದ ಯಕ್ಷಗಾನ ಪ್ರದರ್ಶನವನ್ನು ಪೊಲೀಸರು ನಿಲ್ಲಿಸಲು ಮುಂದಾದ ಘಟನೆ ಮಂಗಳವಾರ ರಾತ್ರಿ ನಡೆದಿದೆ. ಧ್ವನಿವರ್ಧಕಕ್ಕೆ ಅನುಮತಿ ಪಡೆಯದ ಕಾರಣ ಪ್ರದರ್ಶನವನ್ನು ನಿಲ್ಲಿಸುವಂತೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ಸೂಚಿಸಿದ್ದು, ಇದಕ್ಕೆ ಗ್ರಾಮಸ್ಥರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.
ಈ ಘಟನೆ ಬಗ್ಗೆ ಆಯೋಜಕರು ಮಾತನಾಡಿ, ನಾವು ಪ್ರತಿ ವರ್ಷ ಈ ರೀತಿಯ ಯಕ್ಷಗಾನ ಪ್ರದರ್ಶನವನ್ನು ಆಯೋಜಿಸುತ್ತೇವೆ. ಈ ಬಾರಿ ಮಾತ್ರ ಪೊಲೀಸರು ಅನಗತ್ಯ ತೊಂದರೆ ಕೊಟ್ಟಿದ್ದಾರೆ ಎಂದು ದೂರಿದ್ದಾರೆ. ಅಲ್ಲದೆ, ಪಂಚಾಯತ್ ಅಭಿವೃದ್ಧಿ ಅಧಿಕಾರಿ (ಪಿಡಿಓ) ಅವರು ಸಕಾಲಿಕವಾಗಿ ಅನುಮತಿ ನೀಡದ ಕಾರಣ ಈ ಸಮಸ್ಯೆ ಉಂಟಾಗಿದೆ ಎಂದು ಅವರು ಹೇಳಿದ್ದಾರೆ.
ದೂರು ದಾಖಲು:
ಗ್ರಾಮ ಪಂಚಾಯತ್‌ನಿಂದ ಹಾಗೂ ಪೊಲೀಸ್ ಇಲಾಖೆಯಿಂದ ಯಾವುದೇ ಪರವಾನಿಗೆಯನ್ನು ಪಡೆಯದ ಯಕ್ಷಗಾನ ಸಂಸ್ಥೆಯ ಅಧ್ಯಕ್ಷರಾದ ಸದಾನಂದ ಮತ್ತು ಅಜೆಕಾರು ಮಹಾಲಕ್ಷ್ಮೀ ಸೌಂಡ್ಸ್ ಮಾಲೀಕ ಅಪ್ಪು ಅವರ ಮೇಲೆ ಪ್ರಕರಣ ದಾಖಲಾಗಿದೆ.
ಪೊಲೀಸ್ ಇಲಾಖೆಯ ಸ್ಪಷ್ಟನೆ:
ನಾವು ಕೇವಲ ನಿಯಮ ಪಾಲನೆ ಮಾಡುತ್ತಿದ್ದೇವೆ. ಧ್ವನಿವರ್ಧಕಕ್ಕೆ ಅನುಮತಿ ಇಲ್ಲದ ಕಾರಣ ಪ್ರದರ್ಶನವನ್ನು ನಿಲ್ಲಿಸುವಂತೆ ಸೂಚಿಸಿದ್ದೇವೆ” ಎಂದು ಸ್ಪಷ್ಟಪಡಿಸಿದ್ದಾರೆ. ಈ ಘಟನೆಯಿಂದ ಗ್ರಾಮದಲ್ಲಿ ತೀವ್ರ ಕೋಲಾಹಲ ಸೃಷ್ಟಿಯಾಗಿದ್ದು, ಸಾಮಾಜಿಕ ಮಾಧ್ಯಮದಲ್ಲಿ ಈ ವಿಷಯ ವೈರಲ್ ಆಗಿದೆ. ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಅಡ್ಡಿಪಡಿಸುವುದು ಸರಿಯಲ್ಲ ಎಂದು ಹಲವರು ಈ ಘಟನೆಯನ್ನು ಖಂಡಿಸಿದ್ದಾರೆ.