September 10, 2026
Thursday, September 10, 2026
spot_img

ಭಾರತದ ಪ್ರವಾಸೋದ್ಯಮದಲ್ಲಿ ಜೆನ್ ಝೀ ಹವಾ : ಏರ್‌ಬಿಎನ್‌ಬಿ ವರದಿಯಲ್ಲಿ ಅಚ್ಚರಿಯ ಮಾಹಿತಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಭಾರತದ ಜೆನ್ ಝೀ ಪ್ರಯಾಣಿಕರು ಪ್ರವಾಸೋದ್ಯಮದಲ್ಲಿ ಹೊಸ ಅಲೆ ಎಬ್ಬಿಸುತ್ತಿದ್ದಾರೆ ಎಂದು ಏರ್‌ಬಿಎನ್‌ಬಿ ಇತ್ತೀಚೆಗೆ ಬಿಡುಗಡೆ ಮಾಡಿದ ವರದಿಯಲ್ಲಿ ತಿಳಿಸಿದೆ.

ಏರ್‌ಬಿಎನ್‌ಬಿ ವರದಿಯ ಪ್ರಕಾರ, ಈ ವರ್ಷದ ಬೇಸಿಗೆಯ ಪ್ರವಾಸದ ಹುಡುಕಾಟದಲ್ಲಿ ಶೇ. 40ಕ್ಕಿಂತ ಹೆಚ್ಚು ಪಾಲು ಜೆನ್ ಝೀ ಪ್ರಯಾಣಿಕರದ್ದಾಗಿದ್ದು, ಇವರು ವಾರ್ಷಿಕವಾಗಿ ಶೇ. 60ರಷ್ಟು ವೇಗವಾಗಿ ಬೆಳೆಯುತ್ತಿರುವ ಪ್ರಯಾಣಿಕರ ವರ್ಗವಾಗಿದ್ದಾರೆ. ಜೆನ್‌ ಝೀ ಗಳು ಕೇವಲ ಸ್ಥಳಗಳನ್ನು ನೋಡುವುದಕ್ಕಿಂತ ಹೆಚ್ಚಾಗಿ ಸಂಗೀತ ಕಚೇರಿಗಳು, ಹಬ್ಬಗಳು, ಸಾಂಸ್ಕೃತಿಕ ಚಟುವಟಿಕೆಗಳು ಮತ್ತು ವಿಭಿನ್ನ ಆಹಾರಗಳನ್ನು ಹುಡುಕುವುದಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿದ್ದಾರೆ.

ಪ್ರಯಾಣದ ಬಗ್ಗೆ ಜೆನ್ ಝೀ ಮತ್ತು ಮಿಲೇನಿಯಲ್ಸ್ ಅಭಿಪ್ರಾಯ:
ಶೇ. 55% ರಷ್ಟು ಜೆನ್ ಝೀ ಮತ್ತು ಶೇ. 42% ರಷ್ಟು ಮಿಲೇನಿಯಲ್ಸ್ 2026ರಲ್ಲಿ ಕಳೆದ ವರ್ಷಕ್ಕಿಂತ ಹೆಚ್ಚಿನ ಪ್ರವಾಸ ಕೈಗೊಳ್ಳಲು ಪ್ಲ್ಯಾನಿಂಗ್‌ ಮಾಡುತ್ತಿದ್ದಾರೆ. ಹಾಗಾಗಿ ಇವರು ಕೈಗೆಟುಕುವ ದರದ ಹೊಟೇಲ್‌ಗಳು ಮತ್ತು ಪ್ರಯಾಣದ ಸೌಲಭ್ಯಗಳಿಗೆ ಹೆಚ್ಚಿನ ಆದ್ಯತೆ ನೀಡುತ್ತಾರೆ.

ಜೆನ್ ಝೀ ಮತ್ತು ಮಿಲೇನಿಯಲ್ಸ್‌ಗಳು ಪರಿಸರ ಸ್ನೇಹಿ ಪ್ರಯಾಣಕ್ಕೆ ಹೆಚ್ಚಿನ ಮಹತ್ವ ನೀಡುತ್ತಿದ್ದಾರೆ.

ಇವರು ಪ್ರಯಾಣದ ಬುಕಿಂಗ್‌ಗಾಗಿ ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳನ್ನು ಬಳಸಲು ಇಷ್ಟಪಡುತ್ತಾರೆ. ಫೋನ್ ಕರೆಗಳಿಗಿಂತ ಆನ್‌ಲೈನ್ ಮೂಲಕ ಸುಲಭವಾಗಿ ಬುಕ್ ಮಾಡಲು ಮತ್ತು ಗ್ರಾಹಕ ಸೇವೆ ಪಡೆಯಲು ಬಯಸುತ್ತಾರೆ.

ಮಿಲೇನಿಯಲ್ಸ್ ಹೆಚ್ಚಾಗಿ ಕೆಲಸದ ಒತ್ತಡದಿಂದ ವಿರಾಮ ಪಡೆಯಲು, ವಿಶ್ರಾಂತಿಯುತವಾದ ಪ್ರಯಾಣವನ್ನು ಆಯ್ಕೆ ಮಾಡುತ್ತಾರೆ.

ಜೆನ್ ಝೀ ಪ್ರವಾಸಿಗರಲ್ಲಿ ಸುಮಾರು 20% ರಷ್ಟು ಜನರು ಒಂಟಿಯಾಗಿ ಪ್ರವಾಸ ಮಾಡಲು ಇಷ್ಟಪಡುತ್ತಾರೆ. ಅದರಲ್ಲೂ ಭಾರತದಲ್ಲಿ ಮಹಿಳಾ ಸೋಲೋ ಟ್ರಾವೆಲರ್‌ಗಳ ಸಂಖ್ಯೆಯಲ್ಲಿ ಶೇ. 31.9% ಏರಿಕೆಯಾಗಿದೆ.

ಮೆಟ್ರೋ ನಗರಗಳಿಗಿಂತ ಸಣ್ಣ ನಗರಗಳು ಅಥವಾ ಗ್ರಾಮೀಣ ಭಾಗಗಳಿಗೆ ಭೇಟಿ ನೀಡಲು ಶೇ. 84% ಯುವ ಪ್ರವಾಸಿಗರು ಇಷ್ಟಪಡುತ್ತಾರೆ.

ಒಟ್ಟಾರೆಯಾಗಿ, ಈ ಎರಡು ತಲೆಮಾರುಗಳು ಪ್ರಯಾಣವನ್ನು ಕೇವಲ ಪ್ರವಾಸವಾಗಿ ನೋಡದೆ, ಜೀವನದ ಅವಿಭಾಜ್ಯ ಅಂಗವಾಗಿ ಮತ್ತು ಹೊಸ ವಿಷಯಗಳನ್ನು ಕಲಿಯುವ ಅವಕಾಶವಾಗಿ ನೋಡುತ್ತಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !