ಸಣ್ಣ ವಯಸ್ಸಿನಲ್ಲಿ ಶಾಲೆಗೆ ಬಿಡೋಕೆ, ಟ್ಯೂಷನ್‌ಗೆ ಕರೆದುಕೊಂಡು ಹೋಗೋಕೆ ಅಪ್ಪ-ಅಮ್ಮ ಬರೋದು ನಮಗೆಲ್ಲ ಗೊತ್ತಿರೋ ವಿಷಯವೇ. ಆದರೆ, ಇಂಜಿನಿಯರಿಂಗ್ ಮುಗಿಸಿ, ಆಫೀಸ್‌ಗೆ ಕೆಲಸಕ್ಕೆ ಹೋಗೋ ದೊಡ್ಡ ವಯಸ್ಸಿನ ಮಕ್ಕಳ ಇಂಟರ್ವ್ಯೂಗೆ, ಅವರ ಸ್ಯಾಲರಿ ಮಾತುಕತೆಗೆ ಅಪ್ಪ-ಅಮ್ಮ ಬಂದ್ರೆ ಹೆಗಿರುತ್ತೆ ಯೋಚನೆ ಮಾಡಿ?
ಇದನ್ನೇ ಕಾರ್ಪೊರೇಟ್ ಪ್ರಪಂಚದಲ್ಲಿ ‘ಹೆಲಿಕಾಪ್ಟರ್ ಪೇರೆಂಟಿಂಗ್’ ಅಂತ ಕರೀತಾರೆ. ಅಂದ್ರೆ, ಮಕ್ಕಳು ಬೆಳೆದು ದೊಡ್ಡವರಾಗಿ, ಸ್ವಂತ ಕಾಲಿನ ಮೇಲೆ ನಿಲ್ಲೋ ವಯಸ್ಸಾಗಿದ್ದರೂ, ಹೆಲಿಕಾಪ್ಟರ್ ತರ ಅವರ ತಲೆ ಮೇಲೆಯೇ ಹಾರಾಡ್ತಾ, ಪ್ರತಿಯೊಂದು ಸಣ್ಣ-ಪುಟ್ಟ ವಿಷಯದಲ್ಲೂ ಮಧ್ಯಪ್ರವೇಶ ಮಾಡೋದು.
ಅಷ್ಟಕ್ಕೂ ಆಫೀಸಲ್ಲಿ ಆಗ್ತಿರೋದೇನು?
ಮಗ ಅಥವಾ ಮಗಳ ಇಂಟರ್‌ವ್ಯೂಗೆ ಅಪ್ಪ-ಅಮ್ಮ ಜೊತೆಗೇ ಕಾರು ಹತ್ಕೊಂಡು ಆಫೀಸ್‌ಗೆ ಬರ್ತಾರೆ. ಕೆಲವು ಪೇರೆಂಟ್ಸ್ ಅಂತೂ ಮ್ಯಾನೇಜರ್ ಹತ್ರ ಹೋಗಿ, “ನಮ್ಮ ಹುಡುಗಂಗೆ ಸಂಬಳ ಇಷ್ಟೇನಾ ಕೊಡೋದು? ಸ್ವಲ್ಪ ಜಾಸ್ತಿ ಮಾಡಿ” ಅಂತ ಚೌಕಾಸಿ ಮಾಡಿದ್ದೂ ಇದೆಯಂತೆ.
ಆಫೀಸಲ್ಲಿ ಬಾಸ್ ಏನಾದ್ರೂ ಸ್ವಲ್ಪ ಜಾಸ್ತಿ ಕೆಲಸ ಕೊಟ್ರೆ ಅಥವಾ ಸ್ವಲ್ಪ ಬೈದ್ರೆ ಮುಗಿಯಿತು. ಮನೆಗೆ ಹೋಗಿ ಮಗ ಅತ್ತ ತಕ್ಷಣ, ಮಾರನೇ ದಿನ ಅಮ್ಮನೇ ಬಾಸ್‌ಗೆ ಫೋನ್ ಮಾಡಿ, “ನಮ್ಮ ಮಗಂಗೆ ಯಾಕೆ ಅಷ್ಟೊಂದು ಟಾರ್ಚರ್ ಕೊಡ್ತೀರಾ?” ಅಂತ ಕ್ಲಾಸ್ ತಗೋತಾರಂತೆ.
ಮಗ ಅಥವಾ ಮಗಳಿಗೆ ಪ್ರಮೋಷನ್ ಸಿಗಲಿಲ್ಲ ಅಂದ್ರೆ, ಅಪ್ಪನೇ ನೇರವಾಗಿ ಹೆಚ್‌ಆರ್ ರೂಮ್‌ಗೆ ಎಂಟ್ರಿ ಕೊಟ್ಟು, “ನಮ್ಮ ಹುಡುಗ ದಿನಾ ರಾತ್ರಿವರೆಗೂ ಕೆಲಸ ಮಾಡ್ತಾನಲ್ಲ, ನಿಮಗೇನು ಕಣ್ಣಿಲ್ವಾ?” ಅಂತ ಜಗಳಕ್ಕೆ ನಿಲ್ತಾರೆ.
ಯಾಕಪ್ಪಾ ಹೀಗೆ?
ಇದರಲ್ಲಿ ಬರೀ ಹುಡುಗರದ್ದೇ ತಪ್ಪಾ ಅಂದ್ರೆ ಖಂಡಿತ ಇಲ್ಲ. ಚಿಕ್ಕಂದಿನಿಂದಲೂ ಮಕ್ಕಳಿಗೆ ಸೋಲು ಅಂದ್ರೆ ಏನು ಅಂತಾನೇ ತೋರ್ಸದೇ, ಪ್ರತಿಯೊಂದನ್ನೂ ತಂದು ಕೊಟ್ಟು ಬೆಳೆಸಿರೋ ನಮ್ಮ ಪೇರೆಂಟ್ಸ್ ಅಭ್ಯಾಸ ಇಲ್ಲೂ ಮುಂದುವರಿದಿದೆ. ಮಕ್ಕಳಿಗೆ ಸಣ್ಣ ಕಷ್ಟ ಬಂದರೂ ಅಪ್ಪ-ಅಮ್ಮಂಗೆ ತಡ್ಕೊಳೋಕೆ ಆಗಲ್ಲ. ಇನ್ನೊಂದ್ ಕಡೆ, ಈ ಜೆನ್ ಜಿ ಹುಡುಗರಿಗೆ ಹೊರಗಿನ ದುನಿಯಾದಲ್ಲಿ ಬರೋ ಜಂಜಾಟಗಳನ್ನ ತಾವೇ ಒಬ್ಬರೇ ಎದುರಿಸೋ ಧೈರ್ಯ ಸಾಲ್ತಿಲ್ಲ.
ಇದ್ರಿಂದ ತೊಂದರೆ ಏನು?
ನೋಡೋದಕ್ಕೆ ಇದು “ಅಯ್ಯೋ, ಅಪ್ಪ-ಅಮ್ಮಂಗೆ ಮಕ್ಕಳ ಮೇಲೆ ಎಷ್ಟು ಪ್ರೀತಿ ಅಲ್ವಾ” ಎಂದು ಅನಿಸಬಹುದು. ಆದರೆ ಕಾರ್ಪೊರೇಟ್ ಪ್ರಪಂಚದಲ್ಲಿ ಇದು ತೀರಾ ಡೇಂಜರ್!
ಸ್ವಂತವಾಗಿ ನಿರ್ಧಾರ ತಗೋಳೋ ಶಕ್ತಿ ಬೆಳೆಯೋದೇ ಇಲ್ಲ. ಪ್ರಾಬ್ಲಮ್ ಬಂದಾಗ ಫೇಸ್ ಮಾಡೋಕೆ ಬಾರದೇ, ಸಣ್ಣ ವಿಷಯಕ್ಕೂ ಹೆದರಿ ಓಡಿಹೋಗ್ತಾರೆ. ಆಫೀಸ್‌ನಲ್ಲಿ ಸಹೋದ್ಯೋಗಿಗಳು ಇವರನ್ನು ನೋಡಿ ನಗೋಕೆ ಶುರು ಮಾಡ್ತಾರೆ.
ಕೊನೆ ಮಾತು ಏನಪ್ಪಾ ಅಂದ್ರೆ.. ಅಪ್ಪ-ಅಮ್ಮಂದಿರು ಮಕ್ಕಳಿಗೆ ಸಪೋರ್ಟ್ ಮಾಡೋದು, ಒಳ್ಳೆ ಮಾರ್ಗದರ್ಶನ ನೀಡೋದು ಖಂಡಿತ ಬೇಕು. ಆದರೆ ಮಗ/ಮಗಳು ಆಫೀಸ್‌ಗೆ ಹೋಗೋ ವಯಸ್ಸಾದ ಮೇಲೂ ಹೆಲಿಕಾಪ್ಟರ್ ತರ ಅವರ ತಲೆ ಮೇಲೆಯೇ ಹಾರಾಡ್ತಿದ್ರೆ, ಮಕ್ಕಳು ಲೈಫ್‌ನಲ್ಲಿ ನಿಜವಾದ ‘ಲೈಫ್ ಸ್ಕಿಲ್ಸ್’ ಕಲಿಯೋದಾದ್ರೂ ಹೆಂಗೆ? ಮಕ್ಕಳನ್ನು ಸ್ವಂತ ಕಾಲಿನ ಮೇಲೆ ನಿಲ್ಲೋಕೆ ಬಿಡೋದೇ ನಿಜವಾದ ಪ್ರೀತಿ!



