ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ರಾಜ್ಯ ಸಚಿವ ಜಾರ್ಜ್ ಕುರಿಯನ್ ಅವರು ತಮ್ಮ ರಾಜ್ಯಸಭಾ ಅವಧಿ ಅಂತ್ಯವಾದ ಹಿನ್ನೆಲೆಯಲ್ಲಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ರಾಷ್ಟ್ರಪತಿಗಳು ಅಂಗೀಕರಿಸಿದ್ದಾರೆ.
ಅವರು ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹಾಲು ಉತ್ಪಾದನೆ ಸಚಿವಾಲಯದಲ್ಲಿ ರಾಜ್ಯ ಸಚಿವರಾಗಿಯೂ ಕಾರ್ಯನಿರ್ವಹಿಸುತ್ತಿದ್ದರು. ಅವರು ಕೇಂದ್ರ ಸರ್ಕಾರದಲ್ಲಿ ಕ್ರೈಸ್ತ ಸಮುದಾಯಕ್ಕೆ ಸೇರಿದ ಏಕೈಕ ಸಚಿವರಾಗಿದ್ದರು. ಅವರ ರಾಜ್ಯಸಭಾ ಅವಧಿ ಮೊನ್ನೆ ಜೂನ್ 21 ರಂದು ಅಂತ್ಯಗೊಂಡಿದೆ.
ಪ್ರಧಾನಿ ನರೇಂದ್ರ ಮೋದಿ ಅವರ ಸಲಹೆಯ ಮೇರೆಗೆ ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರು ಸಂವಿಧಾನದ 75ನೇ ವಿಧಿಯ ಷರತ್ತು (2) ರ ಅಡಿಯಲ್ಲಿ ಜಾರ್ಜ್ ಕುರಿಯನ್ ಅವರ ರಾಜೀನಾಮೆಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಂಗೀಕರಿಸಿದ್ದಾರೆ ಎಂದು ರಾಷ್ಟ್ರಪತಿ ಭವನ ಪ್ರಕಟಣೆಯಲ್ಲಿ ತಿಳಿಸಿದೆ.



