ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತದ ಕಿರಿಯರ ಕ್ರಿಕೆಟ್ ತಂಡದಲ್ಲಿ ಭರವಸೆಯ ಆಟಗಾರನಾಗಿ ಗುರುತಿಸಿಕೊಂಡಿದ್ದ ಅಮನ್‌ಪ್ರೀತ್ ಗಿಲ್ ಅವರ ಅಕಾಲಿಕ ನಿಧನ ಕ್ರಿಕೆಟ್ ವಲಯಕ್ಕೆ ಆಘಾತ ತಂದಿದೆ. ಕೇವಲ 36ನೇ ವಯಸ್ಸಿನಲ್ಲಿ ಅನಾರೋಗ್ಯಕ್ಕೆ ತುತ್ತಾಗಿ ಅವರು ಕೊನೆಯುಸಿರೆಳೆದಿದ್ದು, ಅವರ ಅಗಲಿಕೆಗೆ ಮಾಜಿ ಸಹ ಆಟಗಾರರು ಮತ್ತು ಅಭಿಮಾನಿಗಳು ಸಂತಾಪ ಸೂಚಿಸುತ್ತಿದ್ದಾರೆ.
ಚಂಡೀಗಢ ಮೂಲದ ಅಮನ್‌ಪ್ರೀತ್, ಪಂಜಾಬ್ ಪರ ದೇಶೀಯ ಕ್ರಿಕೆಟ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದರು. 2007ರಲ್ಲಿ ಶ್ರೀಲಂಕಾದಲ್ಲಿ ನಡೆದ 19 ವರ್ಷದೊಳಗಿನವರ ತ್ರಿಕೋನ ಸರಣಿಯಲ್ಲಿ ಭಾರತವನ್ನು ಪ್ರತಿನಿಧಿಸಿ ಗಮನ ಸೆಳೆದಿದ್ದರು. ಆ ತಂಡದಲ್ಲಿ ವಿರಾಟ್ ಕೊಹ್ಲಿ ಹಾಗೂ ಮನೀಶ್ ಪಾಂಡೆ ಕೂಡ ಇದ್ದರು. ಐದು ಪಂದ್ಯಗಳಲ್ಲಿ ಒಂಬತ್ತು ವಿಕೆಟ್ ಕಬಳಿಸಿ ಭಾರತದ ಯಶಸ್ಸಿನಲ್ಲಿ ಅಮನ್‌ಪ್ರೀತ್ ಮಹತ್ವದ ಪಾತ್ರ ವಹಿಸಿದ್ದರು.
ಅವರ ನಿಧನದ ಸುದ್ದಿ ತಿಳಿದು ವಿರಾಟ್ ಕೊಹ್ಲಿ ಭಾವುಕವಾಗಿ ಸಂತಾಪ ಸೂಚಿಸಿದ್ದಾರೆ. ಕುಟುಂಬಕ್ಕೆ ಈ ದುಃಖ ಭರಿಸುವ ಶಕ್ತಿ ದೊರಕಲಿ, ಆತ್ಮಕ್ಕೆ ಶಾಂತಿ ಸಿಗಲಿ ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದು ಗೌರವ ಸಲ್ಲಿಸಿದ್ದಾರೆ.



