ಪೋಕ್ಸೋ ಕಾಯಿದೆ ಬಗ್ಗೆ ಹೆಣ್ಣುಮಕ್ಕಳಿಗೆ ತಿಳಿದಿರುವುದು ಅಗತ್ಯ: ಮಹದೇವಿ ಎಂ.ಮರಕಟ್ಟಿ

ಹೊಸದಿಗಂತ ವರದಿ ಚಿತ್ರದುರ್ಗ:

ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ ಪ್ರಕರಣಗಳು ಜಾಸ್ತಿಯಾಗುತ್ತಿದ್ದು, ಪೋಕ್ಸೋ ಕಾಯಿದೆ ಬಗ್ಗೆ ಹೆಣ್ಣುಮಕ್ಕಳು, ಮಹಿಳೆಯರು ತಿಳಿದುಕೊಂಡಿರುವುದು ಅಗತ್ಯ ಎಂದು ಜಿಲ್ಲಾ ಕಾರಾಗೃಹ ಅಧೀಕ್ಷಕಿ ಮಹದೇವಿ ಎಂ.ಮರಕಟ್ಟಿ ಹೇಳಿದರು.

ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಿ.ಸಿ. ಟ್ರಸ್ಟ್ ವತಿಯಿಂದ ಮಹಿಳಾ ಜ್ಞಾನವಿಕಾಸ ಕಾರ್ಯಕ್ರಮದಡಿ ತ.ರಾ.ಸು.ರಂಗಮಂದಿರದಲ್ಲಿ ಸೋಮವಾರ ನಡೆದ ತಾಲ್ಲೂಕು ಮಟ್ಟದ ಮಹಿಳಾ ವಿಚಾರಗೋಷ್ಟಿ ಉದ್ಘಾಟಿಸಿ ಅವರು ಮಾತನಾಡಿದರು. ಪೋಕ್ಸೋ ಪ್ರಕರಣಗಳು ಹೆಚ್ಚಾಗುತ್ತಿದ್ದು, ಶಾಲಾ-ಕಾಲೇಜುಗಳಿಗೆ ಹೋಗುವ ಹೆಣ್ಣು ಮಕ್ಕಳ ಮೇಲೆ ವಿಶೇಷ ನಿಗಾ ಇರಿಸಿ ಅನಾಹುತಗಳನ್ನು ತಪ್ಪಿಸುವಲ್ಲಿ ತಾಯಂದಿರ ಪಾತ್ರ ಮುಖ್ಯ. ಸೂಕ್ಷ್ಮವಾದ ವಿಚಾರಗಳನ್ನು ನಿರ್ಲಕ್ಷಿಸಬೇಡಿ ಎಂದು ಸ್ವಸಹಾಯ ಸಂಘದ ಮಹಿಳೆಯರಲ್ಲಿ ಮನವಿ ಮಾಡಿದರು.

ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ನಾಡಿನಾದ್ಯಂತ ಇಂತಹ ಉಪಯುಕ್ತ ಕಾರ್ಯಕ್ರಮಗಳನ್ನು ಮಾಡಿಕೊಂಡು ಬರುತ್ತಿದೆ. ಯೋಜನೆಯಿಂದ ಸಿಗುವ ತರಬೇತಿಗಳನ್ನು ಸದುಪಯೋಗಪಡಿಸಿಕೊಂಡು ಸ್ವಾವಲಂಭಿಗಳಾಗಿ ಬದುಕು ಕಟ್ಟಿಕೊಳ್ಳಿ. ಕೇವಲ ಅಡುಗೆ ಮನೆಗೆ ಮೀಸಲಾಗಿರುವ ಮಹಿಳೆಯರನ್ನು ಮನೆಯಿಂದ ಹೊರ ತಂದು ಸ್ವಾವಲಂಭಿಗಳಾಗಿ ಬದುಕುವುದನ್ನು ಕಲಿಸುತ್ತಿದೆ. ತರಬೇತಿಗಳನ್ನು ಪಡೆದು ಮನೆಯಲ್ಲಿ ಕುಳಿತರೆ ಪ್ರಯೋಜನವಿಲ್ಲ. ದುಡಿಮೆಯ ಮಾರ್ಗ ಕಂಡುಕೊಂಡು ಮಾರ್ಕೆಟಿಂಗ್ ವ್ಯವಸ್ಥೆಯನ್ನು ಕಲ್ಪಿಸಿಕೊಳ್ಳುವ ಕೌಶಲ್ಯ ನಿಮ್ಮಲ್ಲಿರಬೇಕು ಎಂದು ಹೇಳಿದರು.

ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ಅವರ ಸಹೋದರಿ ವೀಣಾ ಮಾತನಾಡಿ, ಮಹಿಳಾ ಸ್ವಸಹಾಯ ಸಂಘ ಎಂದಾಕ್ಷಣ ಸಾಲ ಪಡೆದು ಮಕ್ಕಳ ಮದುವೆ ಮಾಡುವುದು, ಮನೆ ಕಟ್ಟಿಸಿಕೊಳ್ಳುವುದು ಇಷ್ಟಕ್ಕೆ ಮಾತ್ರ ಸೀಮಿತವಾಗಬಾರದು. ತರಬೇತಿ ಪಡೆದುಕೊಂಡು ಸ್ವಂತ ಕಾಲ ಮೇಲೆ ನಿಂತು ಸ್ವಾವಲಂಭಿಯಾಗಿ ಬದುಕುವ ಸಾಮರ್ಥ್ಯ ಕಂಡುಕೊಳ್ಳಬೇಕು. ನೀವುಗಳು ಸಿದ್ದಪಡಿಸುವ ಗುಣಮಟ್ಟದ ವಸ್ತುಗಳಿಗೆ ಬೆಂಗಳೂರಿನಲ್ಲಿ ಮಾರುಕಟ್ಟೆ ಮಾಡಿಕೊಡುವುದಾಗಿ ಭರವಸೆ ನೀಡಿದರು.

ನಗರಸಭೆ ಮಾಜಿ ಉಪಾಧ್ಯಕ್ಷೆ ಶ್ರೀದೇವಿ ಚಕ್ರವರ್ತಿ ವಿಚಾರಗೋಷ್ಟಿಯ ಅಧ್ಯಕ್ಷತೆ ವಹಿಸಿದ್ದರು. ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಿ.ಸಿ. ಟ್ರಸ್ಟ್ ಪ್ರಾದೇಶಿಕ ನಿರ್ದೇಶಕಿ ಬಿ.ಗೀತಾ, ನಗರಸಭೆ ಸದಸ್ಯೆ ಪಿ.ಕೆ.ಮೀನಾಕ್ಷಿ, ಜಿಲ್ಲಾ ಜನಜಾಗೃತಿ ವೇದಿಕೆ ಉಪಾಧ್ಯಕ್ಷ ಕೆ.ಆರ್.ಮಂಜುನಾಥ್, ಸದಸ್ಯರುಗಳಾದ ರೂಪ ಜನಾರ್ಧನ್, ನಾಗರಾಜ್, ಕಿರಣ್‌ಶಂಕರ್ ವೇದಿಕೆಯಲ್ಲಿದ್ದರು.

ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಜಿಲ್ಲಾ ನಿರ್ದೇಶಕ ದಿನೇಶ್ ಪೂಜಾರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ತಾಲ್ಲೂಕು ಯೋಜನಾಧಿಕಾರಿ ಬಿ.ಅಶೋಕ್, ಜ್ಞಾನವಿಕಾಸ ಸಮನ್ವಯಾಧಿಕಾರಿ ಸುಧಾ, ವಲಯ ಮೇಲ್ವಿಚಾರಕ ಸಂದೀಪ್ ವಿಚಾರಗೋಷ್ಠಿಯಲ್ಲಿ ಹಾಜರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!