Tuesday, February 27, 2024

ಪೊಲೀಸ್ ದೌರ್ಜನ್ಯ ಖಂಡಿಸಿ ಚಿಕ್ಕಮಗಳೂರಿನಲ್ಲಿ ವಕೀಲರ ಪ್ರತಿಭಟನೆ

ಹೊಸ ದಿಗಂತ ವರದಿ, ಚಿತ್ರದುರ್ಗ:

ಚಿಕ್ಕಮಗಳೂರಿನಲ್ಲಿ ವಕೀಲ ಪ್ರೀತಮ್ ಮೇಲೆ ಪೊಲೀಸರು ಅಮಾನುಷವಾಗಿ ಹಲ್ಲೆ ನಡೆಸಿರುವುದನ್ನು ವಿರೋಧಿಸಿ ವಕೀಲರ ಸಂಘದ ವತಿಯಿಂದ ಶನಿವಾರ ಪ್ರತಿಭಟನೆ ನಡೆಸಿ ಅಪರ ಜಿಲ್ಲಾಧಿಕಾರಿ ಮೂಲಕ ರಾಜ್ಯದ ಮುಖ್ಯಮಂತ್ರಿ ಹಾಗೂ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.

ನ್ಯಾಯಾಲಯದ ಆವರಣದಿಂದ ಹೊರಟ ನೂರಾರು ವಕೀಲರುಗಳು ಪ್ರಮುಖ ಬೀದಿಗಳಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದರು. ಗಾಂಧಿ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಪೊಲೀಸರ ದೌರ್ಜನ್ಯವನ್ನು ಖಂಡಿಸಿದರು. ಮೆರವಣಿಗೆಯುದ್ದಕ್ಕೂ ವಕೀಲರುಗಳು ಪೊಲೀಸರ ದೌರ್ಜನ್ಯ ಖಂಡಿಸಿ ಘೋಷಣೆಗಳನ್ನು ಕೂಗಿದರು.

ಚಿಕ್ಕಮಗಳೂರಿನಲ್ಲಿ ಗುರುವಾರ ಹೆಲ್ಮೆಟ್ ಧರಿಸದೆ ಬೈಕ್‌ನಲ್ಲಿ ಹೋಗುತ್ತಿದ್ದ ವಕೀಲ ಪ್ರೀತಮ್‌ನನ್ನು ತಡೆದ ಪೊಲೀಸರು ಏಕಾಏಕಿ ಬೈಕ್‌ನ ಕೀ ತೆಗೆದುಕೊಂಡು ಪೊಲೀಸ್ ಠಾಣೆಗೆ ಹೋಗಿದ್ದಾರೆ. ಅವರ ಹಿಂದೆಯೇ ಹೋದ ವಕೀಲ ಪ್ರೀತಮ್, ಕೀ ಏಕೆ ಕಸಿದುಕೊಂಡಿದ್ದು, ನಾನೊಬ್ಬ ವಕೀಲ. ಹೆಲ್ಮೆಟ್ ಇಲ್ಲದೆ ಬೈಕ್ ಚಲಾಯಿಸಿದ್ದಕ್ಕೆ ದಂಡ ವಿಧಿಸಿ ಕಟ್ಟುತ್ತೇನೆ ಎಂದು ಹೇಳಿದರೂ ಕೇಳದ ಪೊಲೀಸರು ಉದ್ದಟತನ ಮೆರೆದಿದ್ದಾರೆ ಎಂದು ದೂರಿದರು.

ಬೈಕ್ ಕೀ ಕಿತ್ತುಕೊಂಡು ಪೊಲೀಸರನ್ನು ಪ್ರಶ್ನಿಸಿದ ಇದರಿಂದ ಸಿಟ್ಟಿಗೆದ್ದ ಪೊಲೀಸರು ಅವಾಚ್ಯ ಶಬ್ಧಗಳಿಂದ ನಿಂದಿಸಿ, ಮನಸೋಇಚ್ಚೆ ಥಳಿಸಿ ಕಾನೂನಿಗೆ ಅಗೌರವ ತೋರಿದ್ದಾರೆ. ಹಾಗಾಗಿ ಪೊಲೀಸರ ವಿರುದ್ಧ ಕಾನೂನು ರೀತಿಯ ಕ್ರಮ ಕೈಗೊಂಡು ಹಲ್ಲೆಗೊಳಗಾದ ವಕೀಲ ಪ್ರೀತಮ್‌ಗೆ ಸರ್ಕಾರ ಪರಿಹಾರ ನೀಡಬೇಕೆಂದು ಪ್ರತಿಭಟನಾನಿರತ ವಕೀಲರುಗಳು ಒತ್ತಾಯಿಸಿದರು.

ವಕೀಲರ ಸಂಘದ ಅಧ್ಯಕ್ಷ ವೈ.ತಿಪ್ಪೇಸ್ವಾಮಿ, ಉಪಾಧ್ಯಕ್ಷ ಬಿ.ಎಂ.ಅನಿಲ್‌ಕುಮಾರ್, ಪ್ರಧಾನ ಕಾರ್ಯದರ್ಶಿ ಆರ್.ಗಂಗಾಧರ್, ಖಜಾಂಚಿ ಬಿ.ಇ.ಪ್ರದೀಪ್, ಜಂಟಿ ಕಾರ್ಯದರ್ಶಿ ಬಿ.ಗಿರೀಶ್, ಕಾರ್ಯಕಾರಿ ಸಮಿತಿ ಸದಸ್ಯರಾದ ಪಿ.ದಾಸಪ್ಪ, ಸುರೇಶ್ ಎಸ್.ಕೆ., ಬಿ.ಕೆ.ಮನ್ಸೂರ್, ಪ್ರತಾಪ್ ಜೋಗಿ, ಅಶೋಕ್ ಬೆಳಗಟ್ಟ, ಓಂಕಾರಪ್ಪ, ಹೆಚ್.ಮೊಹಮದ್ ಇಮ್ರಾನ್, ಹರೀಶ್ ಎನ್., ಬಿ.ಎ.ರಾಜೀವ್, ಆರ್.ಧನಂಜಯ, ಎನ್.ಎಸ್.ವರುಣ, ಆರ್.ರವಿ, ರೂಪಾದೇವಿ ಬಿ.ಎನ್., ಶೀಲಾ ಪಿ., ಭಾರ್ಗವಿ ದ್ರಾವಿಡ್, ಹಿರಿಯ ವಕೀಲರುಗಳಾದ ಫಾತ್ಯರಾಜನ್, ನೂರುಲ್ಲಾ ಹಸನ್, ಬೀಸ್ನಳ್ಳಿ ಜಯಣ್ಣ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!