ಹೊಸ ದಿಗಂತ ವರದಿ, ಮಡಿಕೇರಿ:
ಪ್ರಸಕ್ತ (2023-24)ಸಾಲಿನ ಮುಂಗಡ ಪತ್ರದಲ್ಲಿ ಕೊಡಗು ಜಿಲ್ಲೆಗೆ ವಿಶೇಷ ಅನುದಾನ ಘೋಷಿಸುವಂತೆ ವೀರಾಜಪೇಟೆ ಕ್ಷೇತ್ರದ ಶಾಸಕ ಹಾಗೂ ಸರ್ಕಾರಿ ಜಮೀನುಗಳ ಸಂರಕ್ಷಣಾ ಸಮಿತಿ ಅಧ್ಯಕ್ಷ ಕೆ.ಜಿ. ಬೋಪಯ್ಯ ಅವರು ಮುಖ್ಯಮಂತ್ರಿಯವರನ್ನು ಕೋರಿದ್ದಾರೆ.
ಈ ಸಂಬಂಧ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರ ಬರೆದಿರುವ ಅವರು, ಕೊಡಗು ಜಿಲ್ಲೆಯಲ್ಲಿ ಪ್ರತಿವರ್ಷ ಭಾರೀ ಮಳೆಗೆ ರಸ್ತೆಗಳು ಹಾಳಾಗುತ್ತಿದೆ. ರಸ್ತೆಗಳ ಅಭಿವೃದ್ಧಿಗೆ ಈ ಹಿಂದೆ 2008 – 2013ರ ವರೆಗಿನ ನಮ್ಮ ಸರ್ಕಾರ ಇದ್ದಾಗ ಪ್ರತಿ ಮುಂಗಡ ಪತ್ರದಲ್ಲಿ ವಿಶೇಷ ಪ್ಯಾಕೇಜ್ ಘೋಷಣೆ ಮಾಡುತ್ತಿತ್ತು. ಅದರಂತೆ ಈ ವರ್ಷದ ಮುಂಗಡ ಪತ್ರದಲ್ಲಿ ಕೊಡಗು ಜಿಲ್ಲೆಯ ರಸ್ತೆಗಳ ಅಭಿವೃದ್ಧಿಗೆ 150 ಕೋಟಿ ರೂ. ಗಳ ಅನುದಾನ ಘೋಷಣೆ ಮಾಡಬೇಕೆಂದು ಮನವಿ ಮಾಡಿದ್ದಾರೆ.
ಪ್ರವಾಸಿ ಕೇಂದ್ರಗಳ ಅಭಿವೃದ್ಧಿ
ಡಾ. ಡಿ. ಎಂ. ನಂಜುಂಡಪ್ಪ ಸಮಿತಿ ವರದಿಯಲ್ಲಿ ಪ್ರಸ್ತಾಪವಾಗಿರುವಂತೆ ಹಾಗೂ ಚಿಕ್ಕಮಗಳೂರು ಜಿಲ್ಲಾ ಉತ್ಸವದಲ್ಲಿ ಕೊಡಗು ಮತ್ತು ಚಿಕ್ಕಮಗಳೂರನ್ನು ಸ್ವಿಜರ್’ಲ್ಯಾಂಡ್ ಮಾದರಿಯಲ್ಲಿ ಪ್ರವಾಸಿ ಕೇಂದ್ರವನ್ನಾಗಿ ಮಾಡಲಾಗುವುದು ಎಂದು ತಾವು ಘೋಷಿಸಿರುವಂತೆ ಕೊಡಗು ಜಿಲ್ಲೆಯ ಪ್ರಮುಖ ಪ್ರವಾಸಿ ಕೇಂದ್ರಗಳನ್ನು ಅಭಿವೃದ್ಧಿಪಡಿಸಲು ರೂ.100 ಕೋಟಿ ಅನುದಾನವನ್ನು ಘೋಷಣೆ ಮಾಡಬೇಕೆಂದು ಬೋಪಯ್ಯ ಕೋರಿದ್ದಾರೆ.
‘ಐನ್ ಮನೆ’ ಅಭಿವೃದ್ಧಿಗೆ ನೆರವು
ಕೊಡಗು ಜಿಲ್ಲೆಯ ಕೊಡಗು ಸಂಸ್ಕೃತಿಯ ಮೂಲ ಆಚಾರ ವಿಚಾರಗಳು ಪ್ರತಿ ಕುಟುಂಬದ ‘ಐನ್‌ಮನೆ’ ಎಂಬ ಹೆಸರಿನಲ್ಲಿದ್ದು, ಇದರ ಅಭಿವೃದ್ಧಿಗಾಗಿ ರೂ.10 ಕೋಟಿ ಅನುದಾನವನ್ನು ಘೋಷಣೆ ಮಾಡಬೇಕು. ಕೊಡಗು ಜಿಲ್ಲೆಯಲ್ಲಿ ಪೊನ್ನಂಪೇಟೆ ಮತ್ತು ಕುಶಾಲನಗರವನ್ನು ನೂತನ ತಾಲೂಕುಗಳನ್ನಾಗಿ ಘೋಷಣೆ ಮಾಡಲಾಗಿದ್ದು, ಈ ಸ್ಥಳಗಳಲ್ಲಿ ‘ಮಿನಿ ವಿಧಾನಸೌಧ’ ನಿರ್ಮಿಸಲು ತಲಾ 10 ಕೋಟಿ ರೂ. ಗಳನ್ನು ಘೋಷಿಸಬೇಕು. ಜಿಲ್ಲೆಯ ಸರ್ವಾಂಗಿಣ ಅಭಿವೃದ್ಧಿ ದೃಷ್ಟಿಯಿಂದ ಜಿಲ್ಲೆಗೆ ನೀಡಲಾಗುವ ಇತರೆ ಅನುದಾನಗಳ ಜೊತೆಯಲ್ಲಿ ಮೇಲ್ಕಂಡ ಅಂಶಗಳಿಗೆ ವಿಶೇಷ ಅನುದಾನವನ್ನು ಮುಂಬರುವ 2023-24ನೇ ಸಾಲಿನ ಆಯವ್ಯಯದಲ್ಲಿ ಅಳವಡಿಸಿ ಘೋಷಿಸಬೇಕು ಎಂದು ಬೋಪಯ್ಯ ಅವರು ತಮ್ಮ ಪತ್ರದಲ್ಲಿ ಮನವಿ ಮಾಡಿದ್ದಾರೆ.