ಹೊಸದಿಗಂತ ಡಿಜಿಟಲ್ ಡೆಸ್ಕ್:
ವರುಷಕ್ಕೊಮ್ಮೆ, ಅದೂ ದೀಪಾವಳಿಗೆ ಮಾತ್ರ ದರುಶನ ಭಾಗ್ಯ ನೀಡೋ ದೇವಿರಮ್ಮನ ದರುಶನಕ್ಕಾಗಿ ರಾಜ್ಯದ ಮೂಲೆ ಮೂಲೆಯಿಂದ ಭಕ್ತರು ಈ ಬೆಟ್ಟಕ್ಕೆ ಬರುತ್ತಾರೆ. 3 ಸಾವಿರ ಅಡಿಗಳ ಎತ್ತರದ ಬೆಟ್ಟದಲ್ಲಿ ನೆಲೆಸಿರುವ ಈ ತಾಯಿಯನ್ನು ಕಾಣಲು ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಬರಿಗಾಲಲ್ಲೇ ಬೆಟ್ಟ ಹತ್ತುತ್ತಾರೆ.
ಚಿಕ್ಕಮಗಳೂರಿನ ಮಲ್ಲೇನಹಳ್ಳಿ ಸಮೀಪದ ಬಿಂಡಿಗ ಗ್ರಾಮದಲ್ಲಿರುವ ಚಂದ್ರದ್ರೋಣ ಪರ್ವತ ಶ್ರೇಣಿಗೆ ಹೊಂದಿಕೊಂಡಿರುವ 3 ಸಾವಿರ ಅಡಿ ಎತ್ತರದ ಬೆಟ್ಟವೇ ದೇವೀರಮ್ಮ ಬೆಟ್ಟ. ದೀಪಾವಳಿಯ ಮೂರು ದಿನಗಳು ಮಾತ್ರ ಈ ದೇವಾಲಯದ ಬಾಗಿಲು ತೆರೆದಿದ್ದು, ರಾತ್ರಿಯಿಂದಲೇ ಭಕ್ತರ ದಂಡು ಬೆಟ್ಟದ ಮೇಲಿತ್ತು. ಈ ಮೂರು ದಿನಗಳ ಕಾಲ ಅಮ್ಮನಿಗೆ ವಿಶೇಷ ಪೂಜಾ ಕೈಂಕರ್ಯಗಳು ನಡೆಯಲಿದ್ದು, ಯಾವುದೇ ತೊಂದರೆಯಾಗದಂತೆ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಕೂಡ ಮಾಡಲಾಗಿದೆ.
ದೇವೀರಮ್ಮ ಬೆಟ್ಟದ ಇತಿಹಾಸ
ಪುರಾಣದ ಪ್ರಕಾರ, ಮಹಿಷಾಸುರನನ್ನು ಅಂತ್ಯ ಮಾಡಿದ ಬಳಿಕವೂ ತಾಯಿ ಚಾಮುಂಡಿಯ ಕೋಪ ತಣ್ಣಗಾಗಿರುವುದಿಲ್ಲ. ಆಕರಯ ಕೋಪಕ್ಕೆ ಭಕ್ತರು ಬಲಿಯಾಗದಿರಲಿ ಎಂಬ ಕಾರಣಕ್ಕೆ ದೇವಿ ಶಾಂತಳಾಗಲು ಚಂದ್ರದ್ರೋಣ ಪರ್ವತದ ತಪ್ಪಲಿಗೆ ಬರುತ್ತಾಳೆ. ಅಲ್ಲಿ ರುದ್ರಮುನಿ ಸೀತಯ್ಯ, ಮುಳ್ಳಯ್ಯ, ದತ್ತಾತ್ರೇಯ, ಗಾಳಲ್ಲಿ ಅಜ್ಜಯ್ಯ ಎಂಬ ಮುನಿಗಳು ಅದಾಗಲೇ ಅಲ್ಲಿ ನೆಲೆಸಿದ್ದರೆಂದೂ ಹೇಳಲಾಗುತ್ತದೆ. ಆಗ ಆ ಐದು ಜನ ತಪಸ್ವಿಗಳು ತಾವಿರುವ ಸ್ಥಳದಿಂದ ಸ್ವಲ್ಪ ದೂರವಿರುವ ಈ ಬೆಟ್ಟದಲ್ಲಿ ನೆಲೆಸುವಂತೆ ಹೇಳುತ್ತಾರೆ. ಅಂದಿನಿಂದ ತಾಯಿ ಶಾಂತ ಸ್ವರೂಪಳಾಗಿ ಈ ಬೆಟ್ಟದಲ್ಲಿ ನೆಲೆಯೂರಿದ್ದಾಳೆ ಎಂಬ ಇತಿಹಾಸ ಇದೆ.
ಬೆಟ್ಟದ ಮೇಲೆ ನರಕಚತುದರ್ಶಿಯಂದು ಮಾತ್ರ ತಾಯಿ ದರುಶನ ನೀಡುತ್ತಾಳೆ. ದೀಪಾವಳಿಯ ಎರಡನೇ ದಿನ ಅಮವಾಸ್ಯೆಯಂದು ದೇವಿ ಬೆಟ್ಟದ ಕೆಳಗಿರುವ ಬಿಂಡಿಗ ದೇವಸ್ಥಾನದಲ್ಲಿ ಭಕ್ತರಿಗೆ ದರುಶನ ಭಾಗ್ಯ ನೀಡುತ್ತಾಳೆ. ಈ ವೇಳೆ ಭಕ್ತರು ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ಅಮ್ಮನವರನ್ನು ಪ್ರಾರ್ಥಿಸಿ ಹರಕೆ ಕೊಟ್ಟುವವರು, ತೀರಿಸುವವರ ಜನಜಂಗುಳಿಯೇ ಇರುತ್ತದೆ.
ಅಮ್ಮನವರ ಮತ್ತೊಂದು ಪವಾಡ
ಈ ದೇವಾಲಯದ ಮತ್ತೊಂದು ಪವಾಡ ಡಂದರೆ, ಬಿಂಡಿಗ ದೇವಾಲಯದ ಬಾಗಿಲು ತನ್ನಷ್ಟಕ್ಕೆ ತಾನೇ ತೆರೆದುಕೊಳ್ಳುವುದು. ಈ ಪವಾಡ ನೋಡಲು ಸಾವಿರಾರು ಭಕ್ತರು ಇಲ್ಲಿಗೆ ಆಗಮಿಸುತ್ತಾರೆ.