ಕೊಡಗು ಜಿಲ್ಲಾ ಮಟ್ಟದ ರಾಜ್ಯ ಸರ್ಕಾರಿ ನೌಕರರ ಕ್ರೀಡಾಕೂಟಕ್ಕೆ ಚಾಲನೆ

ಹೊಸ ದಿಗಂತ ವರದಿ, ಮಡಿಕೇರಿ:

2006ರ ಏಪ್ರಿಲ್ ನಂತರ ನೇಮಕವಾದ ಸರ್ಕಾರಿ ನೌಕರರಿಗೆ ‘ಹಳೆ ಪಿಂಚಣಿ ಯೋಜನೆ’(ಒಪಿಎಸ್) ಜಾರಿ ಮಾಡುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಜೊತೆ ಚರ್ಚಿಸಲಾಗಿದ್ದು, ಈ ಸಂಬಂಧ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರು ಮತ್ತೊಮ್ಮೆ ಸಿಎಂ ಅವರ ಜತೆ ಸಮಾಲೋಚನೆ ನಡೆಸಿದಲ್ಲಿ ಹಳೆ ಪಿಂಚಣಿ ಯೋಜನೆ ಜಾರಿಯಾಗಬಹುದು ಎಂದು ಎಂ.ಪಿ.ಅಪ್ಪಚ್ಚುರಂಜನ್ ಅವರು ತಿಳಿಸಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಕೊಡಗು ಶಾಖೆ ಸಂಯುಕ್ತ ಆಶ್ರಯದಲ್ಲಿ ನಗರದ ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಕೊಡಗು ಜಿಲ್ಲಾ ಮಟ್ಟದ ರಾಜ್ಯ ಸರ್ಕಾರಿ ನೌಕರರ ಕ್ರೀಡಾಕೂಟ ಹಾಗೂ ಸಾಂಸ್ಕೃತಿಕ ಸ್ಪರ್ಧೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಹಿಂದೆ ಸರ್ಕಾರಿ ನೌಕರರಿಗೆ ಇದ್ದ ಹಳೆ ಪಿಂಚಣಿ ಯೋಜನೆಯನ್ನು ಮುಂದುವರಿಸುವಂತಾಗಬೇಕು. ಸರ್ಕಾರಿ ನೌಕರರು ನೆಮ್ಮದಿಯಿಂದ ನಿವೃತ್ತಿ ಜೀವನ ನಡೆಸುವಂತಾಗಬೇಕು. ನಿವೃತ್ತಿ ಸಂದರ್ಭದಲ್ಲಿ ಆರೋಗ್ಯ ಅತೀ ಮುಖ್ಯವಾಗಿದ್ದು, ಆ ಸಂದರ್ಭ ಪಿಂಚಣಿ ಅತ್ಯಗತ್ಯವಾಗಿದೆ. ಆದ್ದರಿಂದ ಎನ್‍ಪಿಎಸ್ ಬದಲಾಗಿ ಒಪಿಎಸ್ ಜಾರಿ ಆಗಬೇಕು ಎಂದು ಹೇಳಿದರು.
ಕೊಡಗು ಜಿಲ್ಲೆ ಸೈನಿಕರು ಮತ್ತು ಕ್ರೀಡಾಪಟುಗಳ ನಾಡು. ಜಿಲ್ಲೆಯಲ್ಲಿ ಹೆಚ್ಚಿನ ಸೈನಿಕರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಹಾಕಿ, ಕ್ರಿಕೆಟ್, ಅಥ್ಲೆಟಿಕ್ಸ್ ಹೀಗೆ ಹಲವು ಕ್ರೀಡೆಯಲ್ಲಿ ಪಾಲ್ಗೊಂಡು ಹೆಸರು ಗಳಿಸಿದ್ದಾರೆ. ಆ ನಿಟ್ಟಿನಲ್ಲಿ ಕ್ರೀಡಾ ಚಟುವಟಿಕೆಯಲ್ಲಿ ಪಾಲ್ಗೊಂಡು ಮತ್ತಷ್ಟು ಹೆಸರು ತರುವಂತಾಗಬೇಕು ಎಂದರು.
ಸರ್ಕಾರಿ ನೌಕರರು ಪ್ರತೀ ನಿತ್ಯ ಒಂದಲ್ಲ ಒಂದು ರೀತಿಯಲ್ಲಿ ಒತ್ತಡದಲ್ಲಿ ಕೆಲಸ ನಿರ್ವಹಿಸುತ್ತಾರೆ. ಕ್ರೀಡಾ ಚಟುವಟಿಕೆಯಲ್ಲಿ ಪಾಲ್ಗೊಳ್ಳುವುದರಿಂದ ಒಂದು ರೀತಿ ಕ್ರಿಯಾಶೀಲ ಚಟುವಟಿಕೆಗೆ ಸಹಕಾರಿಯಾಗಲಿದೆ ಎಂದು ಅಪ್ಪಚ್ಚು ರಂಜನ್   ಹೇಳಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಆರ್.ವೆಂಕಟೇಶ್ ಅವರು ಕ್ರೀಡಾ ಜ್ಯೋತಿ ಬೆಳಗಿಸಿ ಮಾತನಾಡಿ ಸರ್ಕಾರಿ ನೌಕರರ ಚಲನಶೀಲತೆಗೆ ಕ್ರೀಡಾಚಟುವಟಿಕೆ ಸಹಕಾರಿಯಾಗಲಿದೆ. ಇದರಿಂದ ಉತ್ಸಾಹ ಹೆಚ್ಚಲಿದೆ ಎಂದರು.
ಪೌರಾಯುಕ್ತ ವಿಜಯ ಮಾತನಾಡಿದರು.
ಸರ್ಕಾರಿ ನೌಕರರ ಸಂಘದ ಜಿಲ್ಲಾ ಅಧ್ಯಕ್ಷ ಪೊನ್ನಚ್ಚನ ಶ್ರೀನಿವಾಸ , ಮಡಿಕೇರಿ ನಗರದಲ್ಲಿ ಸರ್ಕಾರಿ ನೌಕರರ ಭವನ ನಿರ್ಮಾಣಕ್ಕೆ 40 ಸೆಂಟ್ ಜಾಗ ನೀಡಲಾಗಿದೆ. ಭವನ ನಿರ್ಮಾಣ ಸಂಬಂಧ ಹೆಚ್ಚಿನ ಅನುದಾನ ನೀಡಬೇಕು ಎಂದು ಶಾಸಕರಲ್ಲಿ ಕೋರಿದರು.
ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ.ಆನಂದ್ ಅವರು ಮಾತನಾಡಿದರು. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕಿ ವಿ.ಟಿ.ವಿಸ್ಮಯಿ, ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷರಾದ ಗುರುರಾಜ್ (ವೀರಾಜಪೇಟೆ), ಪ್ರದೀಪ್(ಸೋಮವಾರಪೇಟೆ), ಗೌರವ ಅಧ್ಯಕ್ಷರಾದ ಶಿವಕುಮಾರ್, ಮಂಜುನಾಥ್, ಕುಮಾರ, ಶಮ್ಮಿ, ಅನಿತಾ ಇತರರು ಇದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!