ರಾಷ್ಟ್ರೀಯ ಹೆದ್ದಾರಿ ಯೋಜನೆಯಡಿ ಚಿತ್ರದುರ್ಗಕ್ಕೆ ಆದ್ಯತೆ ನೀಡಿ: ಕೇಂದ್ರ ಸಚಿವ ಗಡ್ಕರಿಗೆ ಸಂಸದ ಕಾರಜೋಳ ಮನವಿ

ಹೊಸದಿಗಂತ ವರದಿ, ಚಿತ್ರದುರ್ಗ:

ಕಳೆದ ಏಳೆಂಟು ತಿಂಗಳುಗಳಿಂದ ಚಿತ್ರದುರ್ಗ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಹೆದ್ದಾರಿಗಳ ಅಭಿವೃದ್ದಿಗೆ ಸಂಬಂಧಿಸಿದಂತೆ ಹಲವಾರು ಬೇಡಿಕೆಗಳನ್ನು ಹೆದ್ದಾರಿ ಸಚಿವಾಲಯಕ್ಕೆ ಸಲ್ಲಿಸಲಾಗಿದೆ, ಈ ಎಲ್ಲಾ ಬೇಡಿಕೆಗಳನ್ನು ಪರಿಗಣಿಸಿ ಪ್ರಥಮ ಆದ್ಯತೆಯ ಮೇಲೆ ಚಿತ್ರದುರ್ಗ ಲೋಕಸಭಾ ಕ್ಷೇತ್ರವನ್ನು ಪರಿಗಣಿಸಿ ಬೇಡಿಕೆಗಳನ್ನು ಈಡೇರಿಸುವಂತೆ ಸಂಸದ ಗೋವಿಂದ ಎಂ. ಕಾರಜೋಳ ಕೇಂದ್ರ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರನ್ನು ದೆಹಲಿಯ ಕಚೇರಿಯಲ್ಲಿ ಭೇಟಿ ಮಾಡಿ ಮನವಿ ಮಾಡಿದರು.

ಹಿರಿಯೂರು ಬಳಿ ರಾಷ್ಟ್ರೀಯ ಹೆದ್ದಾರಿ-೪೮ ಹಾಗೂ ರಾಷ್ಟ್ರೀಯ ಹೆದ್ದಾರಿ-೧೫೦ ಎ ಈ ಎರಡು ಹೆದ್ದಾರಿಗಳು ಸಂದಿಸುವ ಜಾಗದಲ್ಲಿ ಕ್ಲೋವರ್ ಲೀಫ್ ಜಂಕ್ಷನ್ ನಿರ್ಮಾಣ ಮಾಡುವುದು, ಚಳ್ಳಕೆರೆ ನಗರ ಪರಿಮಿತಿಯಲ್ಲಿ ರಾಷ್ಟ್ರೀಯ ಹೆದ್ದಾರಿ-೧೫೦ ಎ ಅನ್ನು ಒನ್ ಟೈಮ್ ಇಂಪ್ರೂವ್‌ಮೆಂಟ್ ಯೋಜನೆಯಡಿ ಅಭಿವೃದ್ದಿಪಡಿಸುವುದು. ಚಿತ್ರದುರ್ಗದ ರಾಷ್ಟ್ರೀಯ ಹೆದ್ದಾರಿ-೪೮ ರಿಂದ ಚಳ್ಳಕೆರೆ-ಪಾವಗಡ-ಪುಟ್ಟಪರ್ತಿ-ರಾಷ್ಟ್ರೀಯ ಹೆದ್ದಾರಿ-೩೪೨ ಬುಕ್ಕಪಟ್ಟಣಂವರೆಗೆ ಇರುವ ಹೆದ್ದಾರಿಯನ್ನು ರಾಷ್ಟ್ರೀಯ ಹೆದ್ದಾರಿಯನ್ನಾಗಿ ಮೇಲ್ದರ್ಜೆಗೇರಿಸುವುದು.

ಮೂಡಿಗೆರೆಯಿಂದ-ಚಿಕ್ಕಮಗಳೂರು-ಕಡೂರು-ಹೊಸದುರ್ಗ-ಹೊಳಲ್ಕೆರೆ ಹತ್ತಿರ ರಾಷ್ಟ್ರೀಯ ಹೆದ್ದಾರಿ-೩೬೯ ರವರೆಗೆ ಈಗಾಗಲೇ ಘೋಷಣೆಯಾಗಿರುವ ರಾಷ್ಟ್ರೀಯ ಹೆದ್ದಾರಿಯನ್ನು ದಾವಣಗೆರೆ ಜಿಲ್ಲೆ ಆನಗೋಡುವರೆಗೆ ವಿಸ್ತರಣೆ ಮಾಡಿ ಘೋಷಣೆ ಮಾಡುವುದು. ಶಿರಾ ಪಟ್ಟಣ ವ್ಯಾಪ್ತಿಯಲ್ಲಿ ರಾಷ್ಟ್ರೀಯ ಹೆದ್ದಾರಿ-೪೮ನ್ನು ಒನ್ ಟೈಮ್ ಇಂಪ್ರೂವ್‌ಮೆಂಟ್ ಯೋಜನೆಯಡಿ ಅಭಿವೃದ್ದಿಪಡಿಸುವುದು.

ರಾಷ್ಟ್ರೀಯ ಹೆದ್ದಾರಿ-೪೮ ರಲ್ಲಿ ಹಿರಿಯೂರು ಹತ್ತಿರ ಆದಿವಾಲ-ಪಟ್ರೆಹಳ್ಳಿ ಬಳಿ ಕೆಳಸೇತುವೆ ನಿರ್ಮಾಣ, ಶಿರಾ ತಾಲ್ಲೂಕು ಚಿಕ್ಕನಹಳ್ಳಿ ಬಳಿಯಿರುವ ಕೆಳಸೇತುವೆಯಲ್ಲಿರುವ ನ್ಯೂನ್ಯತೆಗಳನ್ನು ಸರಿಪಡಿಸುವುದು ಸೇರಿದಂತೆ ಮನವಿ ಮಾಡಿಕೊಂಡಿರುವ ಇನ್ನಿತರೆ ಯೋಜನೆಗಳನ್ನು ಪ್ರಥಮ ಆದ್ಯತೆ ಮೇಲೆ ಪರಿಗಣಿಸುವಂತೆ ಮನವಿ ಮಾಡಿಕೊಂಡರು. ಹೆದ್ದಾರಿ ಸಚಿವ ನಿತಿನ್ ಗಡ್ಕರಿಯವರು ಸಕಾರಾತ್ಮಕವಾಗಿ ಸ್ಪಂದಿಸಿ ಸಂಸದರಿಗೆ ಭರವಸೆ ನೀಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!