ಕುದುರೆಯಲ್ಲಿ ಗ್ಲಾಂಡರ್ಸ್ ಮಾರಕ ರೋಗ ಪತ್ತೆ: ಡಿ.ಜೆ.ಹಳ್ಳಿ ಸುತ್ತಮುತ್ತ `ರೋಗಪೀಡಿತ ವಲಯ’ ಘೋಷಣೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಬೆಂಗಳೂರು ನಗರದಲ್ಲಿ ಕುದುರೆಯಲ್ಲಿ ಗ್ಲಾಂಡರ್ಸ್(Glanders Disease) ಎನ್ನುವ ಮಾರಕ ರೋಗ ಪತ್ತೆಯಾಗಿದೆ.

ಡಿ.ಜೆ ಹಳ್ಳಿಯಲ್ಲಿ (DG Halli) ಕುದುರೆಯೊಂದರಲ್ಲಿ (Horse) ಮಾರಕ ಗ್ಲಾಂಡರ್ಸ್‌ ರೋಗ (Glanders Disease) ದೃಢಪಟ್ಟಿದೆ. ಇದೊಂದು ಸೋಂಕು (infectious) ರೋಗವಾಗಿರುವುದರಿಂದ, ಡಿ.ಜೆ.ಹಳ್ಳಿ ಸುತ್ತಮುತ್ತ `ರೋಗಪೀಡಿತ ವಲಯ’ ಎಂದು ಪಶುಸಂಗೋಪನೆ ಹಾಗೂ ಹೈನುಗಾರಿಕೆ ಇಲಾಖೆ ಘೋಷಣೆ ಮಾಡಿದೆ.

ಬೆಂಗಳೂರು ಉತ್ತರ ತಾಲೂಕಿನ ಡಿ.ಜೆ.ಹಳ್ಳಿಯ ಖಲೀದ್ ಷರೀಫ್ ಬಿನ್ ಎ.ಜೆ ಷರೀಫ್ ಎಂಬವರ ಕುದುರೆಯಲ್ಲಿ ಈ ಸೋಂಕು ಇರುವುದು ದೃಢವಾಗಿದೆ. ಹೀಗಾಗಿ ಡಿ.ಜೆ.ಹಳ್ಳಿ ಕೇಂದ್ರ ಸ್ಥಾನದಿಂದ ಸುತ್ತಮುತ್ತಲಿನ 5 ಕಿ.ಮೀ. ವ್ಯಾಪ್ತಿಯನ್ನು ರೋಗ ಪೀಡಿತ ವಲಯ ಎಂದು ಘೋಷಣೆ ಮಾಡಲಾಗಿದೆ. 5ರಿಂದ 25 ಕಿ.ಮೀ. ಪ್ರದೇಶವನ್ನು ಜಾಗೃತ ವಲಯ ಎಂದು ಘೋಷಿಸಲಾಗಿದೆ.

ರೋಗದ ಹಿನ್ನೆಲೆಯಲ್ಲಿ ಪಶುಸಂಗೋಪನೆ ಹಾಗೂ ಹೈನುಗಾರಿಕೆ ಇಲಾಖೆಯಿಂದ ಕಟ್ಟೆಚ್ಚರ ವಹಿಸಲಾಗಿದ್ದು, ಇಲ್ಲಿ ಕುದುರೆ, ಕತ್ತೆ ಮತ್ತು ಹೇಸರಗತ್ತೆಗಳ ಚಲನವಲನಕ್ಕೆ ನಿರ್ಬಂಧ ವಿಧಿಸಲಾಗಿದೆ. ಕುದುರೆ ಹಾಗೂ ಕತ್ತೆಗಳಿಂದ ಇತರ ಪ್ರಾಣಿಗಳಿಗೂ ಸೋಂಕು ಹರಡುವ ಸಾಧ್ಯತೆ ಇರುವುದರಿಂದ, ಈ ನಿರ್ಬಂಧ ಹಾಕಲಾಗಿದೆ.

ಏನಿದು ಗ್ಲಾಂಡರ್ಸ್ ರೋಗ?
ಗ್ಲಾಂಡರ್ಸ್ ಒಂದು ಸಾಂಕ್ರಾಮಿಕ ಮತ್ತು ಮಾರಣಾಂತಿಕ ಕಾಯಿಲೆ. ಇದು ಸಾಮಾನ್ಯವಾಗಿ ಕುದುರೆಗಳು, ಕತ್ತೆಗಳು ಮತ್ತು ಹೇಸರಗತ್ತೆಗಳಲ್ಲಿ ಕಂಡುಬರುತ್ತೆ.ಇದು ಬರ್ಖೋಲ್ಡೆರಿಯಾ ಮಲ್ಲಿ ಎಂಬ ಬ್ಯಾಕ್ಟೀರಿಯಂದಿಂದ ಉಂಟಾಗುತ್ತದೆ. ಇದು ಶ್ವಾಸನಾಳ ಮತ್ತು ಶ್ವಾಸಕೋಶಗಳಲ್ಲಿ ಗಂಟುಗಳು ಮತ್ತು ಹುಣ್ಣು ಉಂಟುಮಾಡುತ್ತದೆ. ಇದನ್ನು ಫಾರ್ಸಿ ಎಂದು ಕರೆಯಲಾಗುತ್ತದೆ. ಇದು ಉಲ್ಬಣವಾದರೆ ಸಾವು ಸಂಭವಿಸುವ ಸಾಧ್ಯತೆಗಳು ಹೆಚ್ಚಾಗಿದೆ.ಈ ಗ್ಲಾಂಡರ್ಸ್ ರೋಗ ಜೂನೋಟಿಕ್ ಕಾಯಿಲೆಯಾಗಿದ್ದು, ಇದು ಮನುಷ್ಯರಿಗೂ ಹರಡುವ ಸಾಧ್ಯತೆ ಇದೆ. ಸಾಮಾನ್ಯವಾಗಿ ಸೋಂಕು ಪೀಡಿತ ಪ್ರಾಣಿಯ ಸಂಪರ್ಕಕ್ಕೆ ಬರುವ ಪ್ರಾಣಿ ನಿರ್ವಾಹಕರು ಅಥವಾ ಇತರರು ಸೋಂಕಿಗೆ ತುತ್ತಾಗುವ ಅಪಾಯವಿದೆ. ನಿಯಮಿತ ತಪಾಸಣೆಯ ಮೂಲಕ ರೋಗವನ್ನು ನಿಯಂತ್ರಿಸಬಹುದಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!