ಇಂದಿನ ಡಿಜಿಟಲ್ ಯುಗದಲ್ಲಿ ಅತಿ ಚಿಕ್ಕ ವಯಸ್ಸಿನ ಮಕ್ಕಳ ಮೂಗಿನ ಮೇಲೆಯೂ ದಪ್ಪನೆಯ ಕಣ್ಣಿನ ಕನ್ನಡಕಗಳು ಕಾಣ ಸಿಗುತ್ತಿವೆ. ಮೊಬೈಲ್, ಟ್ಯಾಬ್, ಟಿವಿ ಹಾಗೂ ಲ್ಯಾಪ್‌ಟಾಪ್‌ಗಳ ಮುಂದೆ ಮಕ್ಕಳು ಗಂಟೆಗಟ್ಟಲೆ ಸಮಯ ಕಳೆಯುವುದೇ ಇದಕ್ಕೆ ಮುಖ್ಯ ಕಾರಣ ಎಂದು ಕಣ್ಣಿನ ತಜ್ಞರು
ಎಚ್ಚರಿಸಿದ್ದಾರೆ.
ಸ್ಕ್ರೀನ್ ಟೈಮ್, ದೃಷ್ಟಿದೋಷ
ಮಕ್ಕಳು ನಿರಂತರವಾಗಿ ಹತ್ತಿರದಿಂದ ಸ್ಕ್ರೀನ್ ನೋಡಿದಾಗ ಕಣ್ಣಿನ ಸ್ನಾಯುಗಳ ಮೇಲೆ ಒತ್ತಡ ಬೀಳುತ್ತದೆ. ಇದರಿಂದ ಕಣ್ಣಿನ ಗುಡ್ಡೆ ಸಾಧಾರಣಕ್ಕಿಂತ ಉದ್ದವಾಗಿ ಬೆಳೆದು, ದೂರದ ವಸ್ತುಗಳು ಸ್ಪಷ್ಟವಾಗಿ ಕಾಣಿಸದಿರುವ ‘ಮೈಯೋಪಿಯಾ’ ಅಥವಾ ಸಮೀಪ ದೃಷ್ಟಿ ದೋಷ ಉಂಟಾಗುತ್ತದೆ. ಅಲ್ಲದೆ, ಪರದೆಯನ್ನು ನೋಡುವಾಗ ಮಕ್ಕಳು ರೆಪ್ಪೆ ಬಡಿಯುವುದನ್ನು ಮರೆಯುವುದರಿಂದ ಕಣ್ಣು ಒಣಗುವುದು, ಉರಿ ಹಾಗೂ ತಲೆನೋವು ಕಾಣಿಸಿಕೊಳ್ಳುತ್ತದೆ.
ಸನ್ ಲೈಟ್ ಕೊರತೆ
ಮಕ್ಕಳು ಮನೆಯೊಳಗೇ ಕುಳಿತು ಸ್ಕ್ರೀನ್ ವೀಕ್ಷಿಸುವುದರಿಂದ ನೈಸರ್ಗಿಕ ಸೂರ್ಯನ ಬೆಳಕಿನಿಂದ ವಂಚಿತರಾಗುತ್ತಿದ್ದಾರೆ. ನೈಸರ್ಗಿಕ ಬೆಳಕು ಕಣ್ಣಿನ ಬೆಳವಣಿಗೆಯನ್ನು ಸರಿಯಾದ ರೀತಿಯಲ್ಲಿ ಕಾಯ್ದುಕೊಳ್ಳಲು ಸಹಾಯ ಮಾಡುತ್ತದೆ. ಹೊರಾಂಗಣ ಆಟಗಳು ಕಡಿಮೆಯಾಗಿರುವುದೂ ಸಹ ಈ ಕಣ್ಣಿನ ಸಮಸ್ಯೆಗೆ ಮತ್ತೊಂದು ದೊಡ್ಡ ಕಾರಣವಾಗಿದೆ.
ಪೋಷಕರು ಮಾಡಬೇಕಾದ ಕೆಲಸಗಳು
ಪ್ರತಿ 20 ನಿಮಿಷಗಳ ಸ್ಕ್ರೀನ್ ವೀಕ್ಷಣೆಯ ನಂತರ, 20 ಅಡಿ ದೂರದಲ್ಲಿರುವ ವಸ್ತುವನ್ನು 20 ಸೆಕೆಂಡುಗಳ ಕಾಲ ನೋಡಲು ಮಗುವಿಗೆ ತಿಳಿಸಿ.
ದಿನಕ್ಕೆ ಕನಿಷ್ಠ 1 ರಿಂದ 2 ಗಂಟೆಗಳ ಕಾಲ ಮಕ್ಕಳನ್ನು ನೈಸರ್ಗಿಕ ಬೆಳಕಿನಲ್ಲಿ ಹೊರಗಡೆ ಆಟವಾಡಲು ಕಳುಹಿಸಿ.
2 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಸ್ಕ್ರೀನ್ ಸಂಪೂರ್ಣ ಬಂದ್ ಮಾಡಿ. ದೊಡ್ಡ ಮಕ್ಕಳಿಗೆ ನಿತ್ಯ ಗರಿಷ್ಠ 1 ಗಂಟೆಗೆ ಮಿತಿಗೊಳಿಸಿ.
ಮಲಗುವ 1 ಗಂಟೆ ಮೊದಲು ಮೊಬೈಲ್ ನೀಡುವುದನ್ನು ನಿಲ್ಲಿಸಿ ಮತ್ತು ಕತ್ತಲೆಯಲ್ಲಿ ಸ್ಕ್ರೀನ್ ನೋಡಲು ಬಿಡಬೇಡಿ.
ಮಕ್ಕಳು ಕಣ್ಣುಜ್ಜುವುದು, ತಲೆನೋವು ಎಂದು ದೂರುವುದು ಅಥವಾ ವಸ್ತುವನ್ನು ತೀರಾ ಹತ್ತಿರದಿಂದ ನೋಡುವುದು ಕಂಡುಬಂದರೆ ತಕ್ಷಣ ಕಣ್ಣಿನ ವೈದ್ಯರ ಬಳಿ ತಪಾಸಣೆ ಮಾಡಿಸುವುದು ಒಳಿತು.



