ಸನಾತನ ವೇದ ಪರಂಪರೆ ಉಳಿಸಲು ಮುಂದಾಗಿ: ವಿದ್ಯೇಶ ತೀರ್ಥ ಸ್ವಾಮೀಜಿ ಸಲಹೆ

ಹೊಸದಿಗಂತ ವರದಿ ಬೆಂಗಳೂರು: 

ಸನಾತನ ವೇದ ಪರಂಪರೆ ಉಳಿಸಲು ಎಲ್ಲರೂ ಮುಂದಾಗಬೇಕು ಎಂದು ಭಂಡಾರ ಕೇರಿ ಮಠಾಧೀಶರಾದ ಶ್ರೀ ವಿದ್ಯೇಶ ತೀರ್ಥ ಸ್ವಾಮೀಜಿ ಹೇಳಿದರು

ಶ್ರೀ ಅಚ್ಚುತಪ್ರಜ್ಞ , ಜಗದ್ಗುರು ಶ್ರೀ ಪೂರ್ಣಪ್ರಜ್ಞ, ಸತ್ಯ ತೀರ್ಥ ಮಹಾಸಂಸ್ಥಾನ ಶ್ರೀ ಭಂಡಾರ ಕೇರಿ ಮಠ, ಭಾಗವತಾಶ್ರಮ ಪ್ರತಿಷ್ಠಾನ ಹಾಗೂ ಲೋಕ ಸಂಸ್ಕೃತಿ ಕಲಾ ವಿದ್ಯಾ ವಿಕಾಸ ಪ್ರತಿಷ್ಠಾನಗಳು ಸಂಯುಕ್ತವಾಗಿ ಬೆಂಗಳೂರಿನ ಗಿರಿನಗರದಲ್ಲಿರುವ ಭಾಗವತ ಕೀರ್ತಿಧಾಮದಲ್ಲಿ ಹಮ್ಮಿಕೊಂಡಿದ್ದ ಶ್ರೀ ವಿದ್ಯೇಶ ತೀರ್ಥರ 70 ನೇ ವರ್ಧಂತಿ ಉತ್ಸವ ದಲ್ಲಿ ಆಶೀರ್ವಚನ ನೀಡಿದರು.

ಧರ್ಮ ಮತ್ತು ಸಂಸ್ಕೃತಿಯನ್ನು ಉಳಿಸಲು ಮಠಪೀಠಗಳು ಮುಂದಾಗಬೇಕು ಇದಕ್ಕೆ ಸಾತ್ವಿಕರು ಸಹಕಾರವನ್ನು ನೀಡಬೇಕು ಆಗ ಮಾತ್ರ ನಮ್ಮ ಪರಂಪರೆ ಮುಂದಿನ ಪೀಳಿಗೆಗೆ ಉಳಿಯಲು ಸಾಧ್ಯ ಎಂದು ಸ್ವಾಮೀಜಿ ನುಡಿದರು.

ಸಾಕ್ಷಾತ್ ಭಗವಂತನ ಆರಾಧನೆ: ಯಾವ ಮಠಪೀಠಗಳಲ್ಲಿ ವಿದ್ವಾಂಸರಿಗೆ ಕಲಾವಿದರಿಗೆ ಶಾಸ್ತ್ರಕಾರರಿಗೆ ಮತ್ತು ಸನಾತನ ಪರಂಪರೆಯನ್ನು ಚಾಚು ತಪ್ಪದೆ ಪಾಲಿಸುವವರಿಗೆ ಮನ್ನಣೆ ಸಿಗುತ್ತದೆಯೋ ಅಲ್ಲಿ ಸಾಕ್ಷಾತ್ ಭಗವಂತನ ಆರಾಧನೆ ನಡೆಯುತ್ತದೆ ಈ ನಿಟ್ಟಿನಲ್ಲಿ ಭಂಡಾರ ಕೇರಿ ಮಠ 70 ಜನ ವಿದ್ವಾಂಸರನ್ನು ಒಂದೇ ವೇದಿಕೆಯಲ್ಲಿ ಒಗ್ಗೂಡಿಸಿ ಅವರಿಂದ ವಿವಿಧ ವಿಚಾರಗಳ ಮಂಡನೆ ಮತ್ತು ಶಾಸ್ತ್ರ ಮಹಾಭಾರತ ರಾಮಾಯಣಗಳ ಸಾರ ಸಂಗ್ರಹಗಳ ಬೋಧನೆ ನಡೆದಿದೆ ಈ ಸಂದರ್ಭದಲ್ಲಿ ಮಾಗಡಿ ಸಮೀಪ ಇರುವ ಆನಂದವನ ಗುರುಕುಲದ ಸಮಗ್ರ ಪ್ರಗತಿಗೆ ಶ್ರೀಮಠವು ನಿಧಿ ಸಮರ್ಪಣೆಯನ್ನು ಮಾಡಿ ಧನ್ಯತೆ ಮೆರೆದಿದೆ ಎಂದು ಹೇಳಿದರು.

ಸಂಭ್ರಮದ ಬಂಡಾರ ಕೇರಿ ಗುರುಗಳ ಶತಮಾನೋತ್ಸವ: ತೀರ್ಥಹಳ್ಳಿ ತಾಲೂಕು ಭೀಮನಕಟ್ಟೆ ಮಠದ ಶ್ರೀ ರಘುವರೇಂದ್ರ ತೀರ್ಥ ಸ್ವಾಮೀಜಿ ಸಾನಿಧ್ಯ ವಹಿಸಿ ಆಶೀರ್ವಚನವನ್ನು ನೀಡಿ ಬಂಡಾರ ಕೇರಿ ಗುರುಗಳ ಶತಮಾನೋತ್ಸವವನ್ನು ನಾವೆಲ್ಲರೂ ಸಂಭ್ರಮದಿಂದ ಆಚರಿಸಲು ಸಂಕಲ್ಪಿಸೋಣ ಎಂದರು ಶ್ರೀ ಮಠವು ವಿದ್ವಜನರಿಗೆ ಅಪಾರವಾದ ಮನ್ನಣೆಯನ್ನು ಮತ್ತು ವೇದಿಕೆಯನ್ನು ನೀಡುತ್ತಿದೆ ಸ್ವತಹ ಶ್ರೀಗಳೆ ರಚನೆ ಮಾಡಿರುವ ವಿದೇಶ ವಿಠಲ ಅಂಕಿತ ಕೃತಿಗಳ ಪ್ರಕಟಣೆಯು ಈಗ ನಡೆದಿದೆ ಈ ಸಂದರ್ಭದಲ್ಲಿ ಬಿಡುಗಡೆಯಾದಂತಹ ಎರಡು ಮಹತ್ತರವಾದ ಕೃತಿಗಳು ನಮ್ಮ ಸಂಸ್ಕೃತಿ ಮತ್ತು ಪರಂಪರೆಗೆ ಸಾಕ್ಷಿಯಾಗಿವೆ ಎಂದು ಶ್ಲಾಘನೆ ವ್ಯಕ್ತಪಡಿಸಿದರು.

ಶ್ರೀ ವಿದ್ಯೇಶ ಸಪ್ತತಿ ವಿಚಾರ ವಿನೋದ ಉತ್ಸವ- ಶೀರ್ಷಿಕೆ ಅಡಿಯಲ್ಲಿ 70 ಜನ ಸಾರಂಗ ವಿದ್ವಾಂಸರಿಂದ ಚುಟುಕು ವೈವಿಧ್ಯ ಭರಿತ ಚೇತೋಹಾರಿ ವಿಚಾರ ಮಂಡನೆ ನಡೆಯಿತು. ಮಹಾಭಾರತದ 18 ಪರ್ವಗಳು , ಭಾಗವತ ದ್ವಾದಶ ಸ್ಕಂದಗಳು ಮತ್ತು ಆರು ಉಪನಿಷತ್ತುಗಳ ಬಗ್ಗೆ 70 ಜನ ವಿದ್ವಾಂಸರಿಂದ ವಿಚಾರ ವಿಮರ್ಶೆ ಮತ್ತು ವಿಚಾರ ಮಂಡನೆ ಗಮನ ಸೆಳೆಯಿತು. ಬೆಂಗಳೂರಿನ ಶ್ರೀ ಜಯತೀರ್ಥ ವಿದ್ಯಾಪೀಠ, ಶ್ರೀ ಪೂರ್ಣ ಪ್ರಜ್ಞ ವಿದ್ಯಾಪೀಠ, ಮೈಸೂರಿನ ವ್ಯಾಸ ತೀರ್ಥ ವಿದ್ಯಾಪೀಠವೂ ಸೇರಿದಂತೆ ಮಂತ್ರಾಲಯ , ಸೋದೆ, ಪಲಿಮಾರು , ತಿರುಪತಿ, ಪುತ್ತಿಗೆ ಮತ್ತಿತರ ಮಹಾ ಸಂಸ್ಥಾನಗಳ ಗುರುಕುಲ ಮತ್ತು ವಿದ್ಯಾಪೀಠದ ವಿದ್ವಾಂಸರು ಭಾಗವಹಿಸಿದ್ದರು.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!